ಶುಕ್ರವಾರ, ಫೆಬ್ರವರಿ 3, 2023
18 °C
ಕ್ಷಯ ರೋಗಿಗಳಿಗೆ ನಾಗಮಾರಪಳ್ಳಿ ಫೌಂಡೇಷನ್ ನೆರವು

132 ಮಂದಿಗೆ ಔಷಧಿ ಕಿಟ್ ಉಚಿತ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಷನ್‍ನಿಂದ ದತ್ತು ಪಡೆಯಲಾದ 132 ಕ್ಷಯ ರೋಗಿಗಳಿಗೆ ಇಲ್ಲಿಯ ಬ್ರಿಮ್ಸ್ ಆಸ್ಪತ್ರೆಯಲ್ಲಿ ಔಷಧಿ, ಆಹಾರ ಹಾಗೂ ಪೌಷ್ಟಿಕಾಂಶ ಕಿಟ್ ಉಚಿತವಾಗಿ ವಿತರಿಸಲಾಯಿತು.

ದೇಶವನ್ನು ಕ್ಷಯ ರೋಗ ಮುಕ್ತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಅಭಿಯಾನ ಆರಂಭಿಸಿದ್ದಾರೆ. ಅಭಿಯಾನಕ್ಕೆ ಕೈಜೋಡಿಸಲು ಫೌಂಡೇಷನ್‍ನಿಂದ ಕ್ಷಯ ರೋಗಿಗಳನ್ನು ಪಡೆಯಲಾಗಿದೆ ಎಂದು ಕಿಟ್ ವಿತರಿಸಿದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರೂ ಆದ ಫೌಂಡೇಷನ್ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.

ದತ್ತು ಪಡೆಯಲಾದ ಕ್ಷಯ ರೋಗಿಗಳಿಗೆ ಫೌಂಡೇಷನ್‍ನಿಂದ ಆರು ತಿಂಗಳ ವರೆಗೆ ಮಾಸಿಕ ಔಷಧಿ, ಆಹಾರ ಹಾಗೂ ಪೌಷ್ಟಿಕಾಂಶ ಕಿಟ್ ವಿತರಿಸಲಾಗುವುದು. ಈಗಾಗಲೇ ರೋಗಿಗಳಿಗೆ ಎರಡು ತಿಂಗಳ ಕಿಟ್ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.

2025 ರ ವೇಳೆಗೆ ದೇಶವನ್ನು ಕ್ಷಯ ರೋಗಮುಕ್ತಗೊಳಿಸುವ ಪ್ರಧಾನಿ ಅವರ ಕನಸು ಸಾಕಾರಗೊಳಿಸಲು ಎಲ್ಲರೂ ಶ್ರಮಿಸಬೇಕು. ಜಿಲ್ಲೆಯನ್ನು ಕ್ಷಯ ರೋಗ ಮುಕ್ತಗೊಳಿಸಲು ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಫೌಂಡೇಷನ್ ನಿರಂತರ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಬಡವರು, ಮಹಿಳೆಯರು, ಅಸಹಾಯಕರು, ಸಂತ್ರಸ್ತರಿಗೆ ನೆರವಾಗುತ್ತ ಬಂದಿದೆ. ತನ್ನ ಸೇವಾ ಕಾರ್ಯವನ್ನು ಮುಂದುವರಿಸಲಿದೆ ಎಂದು ತಿಳಿಸಿದರು.

ಒಂದು ತಿಂಗಳ ಅವಧಿಯಲ್ಲಿ ನಮ್ಮ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಆಗಿದೆ. ಮಾನವೀಯ ನೆಲೆಯಲ್ಲಿ ಉಚಿತ ಔಷಧಿ, ಪೌಷ್ಟಿಕಾಂಶ ಹಾಗೂ ಆಹಾರದೊಂದಿಗೆ ಆರು ತಿಂಗಳ ವರೆಗೆ ಸಂಪೂರ್ಣ ಚಿಕಿತ್ಸೆಯ ಹೊಣೆ ಹೊತ್ತುಕೊಂಡಿರುವ ನಾಗಮಾರಪಳ್ಳಿ ಫೌಂಡೇಷನ್‍ಗೆ ಕೃತಜ್ಞರಾಗಿದ್ದೇವೆ ಎಂದು ಕಿಟ್ ಸ್ವೀಕರಿಸಿದ ಅನೇಕ ರೋಗಿಗಳು ಹೇಳಿದರು.
ಫೌಂಡೇಷನ್ ನಿರ್ದೇಶಕ ತರುಣ್ ಎಸ್. ನಾಗಮಾರಪಳ್ಳಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಹೇಶ ಬಿರಾದಾರ, ಡಾ. ಶರಣಯ್ಯ ಸ್ವಾಮಿ, ಡಾ. ಸಿದ್ಧಾರೆಡ್ಡಿ, ಡಾ. ಶಾಂತಲಿಂಗ ಪಾಟೀಲ, ಡಾ. ಸತೀಶ್ ಪಾಟೀಲ, ಡಾ. ಸೊಹೆಲ್, ಮುಖಂಡರಾದ ಫರ್ನಾಂಡೀಸ್ ಹಿಪ್ಪಳಗಾಂವ್, ಮಹೇಶ ಗೋರನಾಳಕರ್, ಅಲಿ ಸಾಬ್, ಸಾರಾ ಅಂಜುಮ್, ರೆಹಮಾನ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.