ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಮನೆಗಳಲ್ಲಿ ಬೆಳಕಿನ ಹಬ್ಬದ ಸಂಭ್ರಮ: ಹಣತೆ, ಹಣ್ಣು, ಪಟಾಕಿ ಖರೀದಿ ಜೋರು

Last Updated 3 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಬೀದರ್: ದೀಪಾವಳಿ ಬಂದು ಬಿಟ್ಟಿದೆ. ಆಗಲೇ ಮಾರುಕಟ್ಟೆಯಲ್ಲಿ ಮಾರಾಟ ಮಳಿಗೆಗಳು, ಮಾಲ್‌ಗಳ ಮೇಲೆ ವಿದ್ಯುತ್‌ ದೀಪಗಳು ಝಗಮಗಿಸುತ್ತಿವೆ. ಹಬ್ಬದ ಸಂಭ್ರಮ ಇಮ್ಮಡಿಗೊಳಿಸಲು ಮಹಿಳೆಯರು ಮಾರುಕಟ್ಟೆಯಲ್ಲಿ ಅಲಂಕಾರಿಕ ದೀಪಗಳನ್ನು ಕೊಳ್ಳಲು ಮುಂದಾದರೆ, ಯುವಕರು ಹಾಗೂ ಮಕ್ಕಳು ಪಟಾಕಿ ಖರೀದಿಯಲ್ಲಿ ತೊಡಗಿದ್ದ ದೃಶ್ಯ ಬುಧವಾರ ನಗರದಲ್ಲಿ ಕಂಡು ಬಂದಿತು.

ರೋಟರಿ ವೃತ್ತ ಬಳಿಯ ಸಾಯಿ ಆದರ್ಶ ಶಾಲೆಯ ಮುಂಭಾಗದ ರಸ್ತೆ, ಮಡಿವಾಳ ವೃತ್ತದ ಕಡೆಗೆ ಹೋಗುವ ಮಾರ್ಗ, ನೌಬಾದ್‌, ಅಂಬೇಡ್ಕರ್‌ ವೃತ್ತ, ಮೈಲೂರ್‌ ಕ್ರಾಸ್‌, ಗುಂಪಾದಲ್ಲಿ ರಸ್ತೆ ಬದಿಯಲ್ಲಿ ವಿವಿಧ ಬಗೆಯ ದೀಪಗಳನ್ನು ಇಟ್ಟು ಮಾರಾಟ ಮಾಡಲಾಗುತ್ತಿದೆ.

ಸ್ವಾಗತ ದೀಪ,ಗುಬ್ಬಿ ಗೂಡಿನಂಥ ದೀಪ, ಬಟ್ಟಲು ದೀಪ, ಲ್ಯಾಟಿನ್‌, ಮಣ್ಣಿನ ಹಣತೆ, ಗಾಜಿನ ದೀಪ ಸೇರಿ ನಾನಾ ತರಹದ ವೈಶಿಷ್ಟ್ಯಪೂರ್ಣ ದೀಪಗಳು ಗ್ರಾಹಕರನ್ನು ಸೆಳೆಯುತ್ತಿವೆ. ಮಹಿಳೆಯರು ತಮ್ಮ ಮನೆಯ ಮುಂದೆ ಎಣ್ಣೆ ದೀಪ ಬೆಳಗಿಸಲು ತಮಗೆ ಅಗತ್ಯವಿರುವಷ್ಟನ್ನು ಚೌಕಾಸಿ ಮಾಡಿ ಖರೀದಿಸಿದರು.

ಬಗೆ ಬಗೆಯ ಆಕಾಶ ಬುಟ್ಟಿ

ನಗರದ ಎಲ್ಲೆಡೆ ಸ್ಟೇಷನರಿ ಅಂಗಡಿಗಳ ಮುಂದೆ ಬಗೆ ಬಗೆಯ ಆಕಾಶ ಬುಟ್ಟಿಗಳನ್ನು ತೂಗು ಹಾಕಲಾಗಿದೆ. ಸಂಜೆಯಾಗುತ್ತಲೇ ಆಕಾಶ ಬುಟ್ಟಿಯೊಳಗಿನ ಬೆಳಕಿನಿಂದಾಗಿ ಇನ್ನಷ್ಟು ಆಕರ್ಷಣೀಯವಾಗಿ ಕಾಣುತ್ತಿವೆ. ಅಂಗಡಿ ಎದುರಿನಿಂದ ಸಾಗುವವರು ಒಂದು ಕ್ಷಣ ನಿಂತು ನೋಡಿ ಮುಂದೆ ಹೋಗುತ್ತಿದ್ದಾರೆ. ಆಕಾಶ ಬುಟ್ಟಿಗಳ ವಿನ್ಯಾಸಕ್ಕೆ ಮನ ಸೋತು ಕೆಲವರು ಮಡದಿ, ಮಕ್ಕಳೊಂದಿಗೆ ಅಂಗಡಿಗೆ ಬಂದು ತಮಗೆ ಇಷ್ಟವಾದ ಆಕಾಶ ಬುಟ್ಟಿಗಳನ್ನು ಖರೀದಿಸಿದರು. ಮನೆಯ ಬಾಗಿಲಿಗೆ ಕಟ್ಟಲಾಗುವ ಪ್ಲಾಸ್ಟಿಕ್‌ ಮಾವಿನ ತೋರಣ, ಕೃತಕ ಹೂವಿನ ಮಾಲೆಗಳೂ ಮಾರಾಟವಾಗುತ್ತಿವೆ. ದೇವರ ಪೂಜೆಗೂ ಪ್ಲಾಸ್ಟಿಕ್‌ ಮಾಲೆಗಳನ್ನು ಖರೀದಿ ಮಾಡಿರುವುದು ಕಂಡು ಬಂದಿತು.

ಹಣ್ಣುಗಳ ಬೆಲೆ ಹೆಚ್ಚಳ

ಎರಡು ದಿನ ಪೂಜೆ ಇರುವ ಕಾರಣ ಹಣ್ಣುಗಳ ಮಾರಾಟ ನಡೆದಿದೆ. ಗ್ರಾಹಕರು ಲಕ್ಷ್ಮಿ ಪೂಜೆಗೆಂದೇ ಐದು ಬಗೆಗೆ ಹಣ್ಣುಗಳನ್ನು ಖರೀದಿಸಿ ಒಯ್ಯುತ್ತಿದ್ದಾರೆ. ಕೆಲ ವ್ಯಾಪಾರಸ್ಥರು ಗ್ರಾಹಕರ ಅನುಕೂಲಕ್ಕೆಂದೇ ಐದು ಬಗೆಯ ಹಣ್ಣುಗಳನ್ನು ಇಟ್ಟು ಮಾರಾಟ ಮಾಡುತ್ತಿದ್ದಾರೆ.
ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಹಾಗೂ ಕಾಶ್ಮೀರದಿಂದಲೂ ಹಣ್ಣುಗಳು ಬಂದಿವೆ. ದೀಪಾವಳಿ ಹಬ್ಬದ ಕಾರಣ ಸಹಜವಾಗಿಯೇ ಹಣ್ಣುಗಳ ಬೆಲೆಯಲ್ಲಿ ₹ 20ರಿಂದ ₹ 50 ಹೆಚ್ಚಾಗಿದೆ. ಐದು ಕಬ್ಬುಗಳ ಕಟ್ಟು ₹ 50ಗೆ ಮಾರಾಟವಾಗುತ್ತಿದೆ. ಎಲ್ಲೆಡೆ ಚೆಂಡು ಹೂವಿನ ಮಾರಾಟ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT