ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಸೂರ | ಕಣ್ಣು ಹಾಯಿಸಲೆಲ್ಲ ತ್ಯಾಜ್ಯ: ಕಸ ತೊಟ್ಟಿಗಳಂತಾದ ಖಾಲಿ ನಿವೇಶನಗಳು

ಗುರುಪ್ರಸಾದ ಮೆಂಟೇ
Published 27 ಮೇ 2024, 4:59 IST
Last Updated 27 ಮೇ 2024, 4:59 IST
ಅಕ್ಷರ ಗಾತ್ರ

ಹುಲಸೂರ: ಪಟ್ಟಣ ಸೇರಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಇರುವ ಖಾಲಿ ನಿವೇಶನಗಳು, ಚರಂಡಿಯ ಬಳಿ ರಾತ್ರಿ ಬೆಳಗಾಗುವುದರೊಳಗೆ ತರಕಾರಿ, ಬಾಕ್ಸ್, ಪ್ಲಾಸ್ಟಿಕ್ ಸೇರಿ ತ್ಯಾಜ್ಯದ ಗಡ್ಡವೇ ನಿರ್ಮಾಣವಾಗುತ್ತದೆ. ಸ್ಥಳೀಯರು ಮೂಗು ಮುಚ್ಚಿಕೊಂಡು ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದ ಕೆಲ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದುಕೊಂಡು ಸೊಳ್ಳೆ, ಇಲಿ, ಹಾವುಗಳ ಆವಾಸ ಸ್ಥಾನಗಳಾಗಿವೆ. ಬಹಳಷ್ಟು ನಿವೇಶನಗಳು ಕಸದ ತೊಟ್ಟಿ, ಬಯಲು ಮೂತ್ರಾಲಯಗಳಾಗಿದ್ದು ಸುತ್ತಲಿನ ಮನೆಗಳ ಜನರ ಬದುಕು ದುಸ್ತರವಾಗಿದೆ.

ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿನ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಗ್ರಾಮ ಪಂಚಾಯಿತಿ ಸೂಚನೆ ನೀಡಿದ್ದರೂ ಯಾರು ಪಾಲಿಸುತ್ತಿಲ್ಲ. ಬಹುತೇಕ ನಿವೇಶನಗಳ ಮಾಲೀಕರು ಬೇರೆ ಊರುಗಳಲ್ಲಿ ನೆಲೆಸಿದ್ದರಿಂದ ಸ್ವಚ್ಛತೆ ಗಗನಕುಸುಮವಾಗಿದೆ.

ಹಲವು ನಿವೇಶನಗಳಲ್ಲಿ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದಿವೆ. ಹಂದಿ, ನಾಯಿಗಳು ನಿವೇಶನಗಳಲ್ಲಿನ ಕಸದ ಗುಡ್ಡೆಗಳನ್ನು ಎಳೆದಾಡುತ್ತವೆ. ಕೆಲವು ಕಡೆ ಹಂದಿ, ನಾಯಿಗಳು ಕೂಗಿ ರಾತ್ರಿ ಸಮಯದಲ್ಲಿ ಜನರ ನಿದ್ದೆಗೆಡಿಸುತ್ತವೆ. ನಿವೇಶನಗಳ ಪೊದೆಗಳಲ್ಲಿ ಹಾವು, ಚೇಳು, ಸೊಳ್ಳೆ ಸೇರಿಕೊಳ್ಳುವುದರಿಂದ ಭಯದಲ್ಲೇ ರಾತ್ರಿ ಕಳೆಯುವಂತಾಗಿದೆ.

ಇನ್ನೂ ಕೆಲ ಖಾಲಿ ನಿವೇಶನಗಳು ಪುಂಡರ ಮೋಜಿಮಸ್ತಿಯ ತಾಣಗಳಾಗಿದ್ದು ಮದ್ಯಪಾನ ಮಾಡುತ್ತಾರೆ. ಅಕ್ಕಪಕ್ಕದವರು ಪ್ರಶ್ನಿಸಿದರೆ ನಿಮಗ್ಯಾಕೆ ಎಂದು ಅವರ ಮೇಲೆ ಮುಗಿಬೀಳುತ್ತಾರೆ. ಅಲ್ಲದೆ ಪಾರ್ಟಿ ಬಳಿಕ ಮದ್ಯ, ನೀರಿನ ಬಾಟಲಿ,  ಸಿಗರೇಟ್ ಪ್ಯಾಕ್, ಪ್ಲಾಸ್ಟಿಕ್ ಲೋಟ, ತಟ್ಟೆಗಳನ್ನು ಅಲ್ಲೇ ಬಿಸಾಕುತ್ತಾರೆ. ಗಾಳಿಗೆ ತ್ಯಾಜ್ಯ ಸುತ್ತಮುತ್ತಲು ಚೆಲ್ಲಾಪಿಲ್ಲಿಯಾಗಿ ಬೀಳುವುದಲ್ಲದೆ ಸುತ್ತಮುತ್ತಲಿನ ಮನೆಗಳ ಬಾಗಿಲು ಮುಂದೆಯೂ ಬಿಳುತ್ತವೆ.

‘ತಮ್ಮ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳದವರಿಗೆ ಗ್ರಾಮ ಪಂಚಾಯಿತಿ ನೋಟಿಸ್ ಕೊಟ್ಟು ಎಚ್ಚರಿಸಬೇಕು. ಅದಕ್ಕೂ ಬಗ್ಗದಿದ್ದರೆ ದಂಡ ವಿಧಿಸಬೇಕು. ಗ್ರಾಮ ಪಂಚಾಯಿತಿಯವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳು ನಿವೇಶನಗಳ ಮಾಲೀಕರ ಕಡೆ ಕೈತೋರುತ್ತಾರೆ. ನಿವೇಶನಗಳ ಮಾಲೀಕರು ಪತ್ತೆಯಾಗುವುದಿಲ್ಲ’ ಎಂದು ಸ್ಥಳೀಯರಾದ ಬಸಪ್ಪಾ ಚೌರೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

‘ಪಟ್ಟಣದಲ್ಲಿ ಗ್ರಾಮ ಪಂಚಾಯಿತಿ ಕಾರ್ಮಿಕರು ಬೆಳಿಗ್ಗೆಯೇ ಬಂದು ಖಾಲಿ ನಿವೇಶನ, ಚರಂಡಿ ಬಳಿ ಸುರಿದಿರುವ ಕಸದ ರಾಶಿಯನ್ನು ತುಂಬಿಕೊಂಡು ಹೋಗುತ್ತಾರೆ. ಮತ್ತೆ ರಾತ್ರಿ ಕಸ ಸುರಿಯುತ್ತಾರೆ. ಚರಂಡಿ ಒಳಗೆ ಹಾಕುವ ಜನರಿಗೆ ದಂಡ ವಿದಿಸಬೇಕು’ ಎನ್ನುತ್ತಾರೆ ಸಂಗಮೇಶ, ಪ್ರವೀಣ್, ಗುಲಾಂ ಬಡಾಯಿ.

ಗ್ರಾಮ ಪಂಚಾಯಿತಿ ಸಿಬ್ಬಂದಿ ಮನೆಮನೆಗೂ ಬಂದು ಕಸ ಸಂಗ್ರಹಿಸಿಕೊಂಡು ಹೋಗುತ್ತಾರೆ. ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ನೀಡಬೇಕು. ರಸ್ತೆ, ಚರಂಡಿ, ಸುತ್ತಮುತ್ತಲಿನ ನಿವೇಶನಗಳಿಗೆ ತ್ಯಾಜ್ಯ ಸುರಿಯಬಾರದು ಎಂದು ಸಾಕಷ್ಟು ಅರಿವು ಮೂಡಿಸಲಾಗಿದೆ. ಸ್ಥಳೀಯರು ಗ್ರಾಮ ಪಂಚಾಯಿತಿಗೆ ದೂರು ನೀಡಿದರೆ ಖಾಲಿ ನಿವೇಶನಗಳನ್ನು ಮಾಲೀಕರೇ ಸ್ವಚ್ಛಗೊಳಿಸಬೇಕು. ನಿವೇಶನ ಸ್ವಚ್ಛವಾಗಿಟ್ಟುಕೊಳ್ಳದ ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗುವುದು. ಸ್ವಚ್ಛತೆ ಬಗ್ಗೆ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಕೈಜೋಡಿಸಬೇಕು ಎನ್ನುವುದು ಗ್ರಾಮ ಪಂಚಾಯಿತಿ ಅಧಿಕಾರಿ ಮನವಿ.

ಹುಲಸೂರ ಪಟ್ಟಣದ 6ನೇ ವಾರ್ಡ್‌ನ ಖಾಲಿ ನಿವೇಶನದಲ್ಲಿ ಕಸ ಸುರಿದಿರುವುದು
ಹುಲಸೂರ ಪಟ್ಟಣದ 6ನೇ ವಾರ್ಡ್‌ನ ಖಾಲಿ ನಿವೇಶನದಲ್ಲಿ ಕಸ ಸುರಿದಿರುವುದು
ನಿವೇಶನದಲ್ಲಿ ಕಸ ಹಾಕವಾರದು ಮತ್ತು ಅಕ್ರಮ ಕೆಲಸ ಮಾಡಬಾರದು ಎನ್ನುವ ನಿಯಮವಿದೆ. ಮಾಲೀಕರು ನಿವೇಶನದ ಸುತ್ತ ಗೋಡೆ ನಿರ್ಮಿಸಿಕೊಳ್ಳಬೇಕು. ಕಂಡಕಂಡಲ್ಲಿ ಕಸ ಸುರಿಯುವುದು ಹೆಚ್ಚಾದರೆ ದಂಡ ಹಾಕಲಾಗುವುದು
ರಮೇಶ ಮಿಲಿಂದಕರ್ ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT