ಬುಧವಾರ, ಮಾರ್ಚ್ 29, 2023
30 °C
ಅಧಿಕಾರಿಗಳ ಮಾತು ಕೇಳದ ಅಧೀನ ಸಿಬ್ಬಂದಿ

ಬೀದರ್‌: ಸರ್ಕಾರಿ ಕಚೇರಿಗಳ ಆವರಣದಲ್ಲೇ ತುಂಬಿದ ಕಸ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ‘ಸ್ವಚ್ಛ ಭಾರತ, ನಿರ್ಮಲ ಭಾರತ’ ಘೋಷ ವಾಕ್ಯದೊಂದಿಗೆ ನೈರ್ಮಲ್ಯಕ್ಕೆ ಆದ್ಯತೆ ನೀಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಕಸಬರಿಗೆ ಹಿಡಿದು ರಸ್ತೆಯಲ್ಲಿ ಕಸ ಗುಡಿಸಿದ್ದಾರೆ. ಬೀದರ್‌ ಜಿಲ್ಲೆ ಮಾತ್ರ ಇದಕ್ಕೆ ತದ್ವಿರುದ್ಧವಾಗಿದೆ. ನಗರ‍, ಪಟ್ಟಣ ಪ್ರದೇಶಗಳಲ್ಲಿ ಬೇಕಾಬಿಟ್ಟಿಯಾಗಿ ಕಸ ಬಿದ್ದುಕೊಂಡೇ ಇದೆ. ಆಶ್ಚರ್ಯ ಅಂದರೆ ಸರ್ಕಾರಿ ಕಚೇರಿಗಳಲ್ಲೇ ಹೆಚ್ಚು ಕಸ ತುಂಬಿದೆ.

ಜಿಲ್ಲಾಧಿಕಾರಿ ಕಚೇರಿ. ತಹಶೀಲ್ದಾರ್‌ ಕಚೇರಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಆವರಣದಲ್ಲಿ ಅಪಾರ ಕಸ ಬಿದ್ದರೂ ಕೇಳುವವರೇ ಇಲ್ಲ. ತಮ್ಮ ಕಚೇರಿಗಳನ್ನೇ ಸ್ವಚ್ಛ ಇಟ್ಟುಕೊಳ್ಳದ ಅಧಿಕಾರಿಗಳಿಂದ ಊರ ಸ್ವಚ್ಛತೆಯನ್ನು ನಿರೀಕ್ಷಿಸಲು ಸಾಧ್ಯವೆ? ಎಂದು ಜನ ಬಹಿರಂಗವಾಗಿಯೇ ಆಡಿಕೊಳ್ಳುತ್ತಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಹಿಂಭಾಗದಲ್ಲಿ ಕಚೇರಿಯೊಳಗಿನ ಕಾಗದದ ಕಸ ತಂದು ಸುರಿಯಲಾಗಿದೆ. ಗಾಳಿಗೆ ಎಲ್ಲೆಡೆ ಹಾರಾಡಿ ಆವರಣ ವ್ಯಾಪಿಸಿದೆ. ಕಚೇರಿಯ ಬಲ ಬದಿಗೆ ಗಿಡಗಂಟಿಗಳು ಬೆಳೆದು ಕಟ್ಟಡದ ಮೇಲೆ ಬಂದರೂ ಗಂಭೀರವಾಗಿಲ್ಲ. ಬೀದರ್‌ ನಗರಸಭೆ ಕಚೇರಿ ಆವರಣದಲ್ಲೂ ಗಿಡಗಂಟಿಗಳು ಬೆಳೆದು ನಿಂತಿವೆ. ಗುಜರಿ ವಸ್ತುಗಳನ್ನು ಒಂದು ಕಡೆ ಕೂಡು ಹಾಕಿ ಮತ್ತಷ್ಟು ತ್ಯಾಜ್ಯ ಹೆಚ್ಚಿಸಲಾಗಿದೆ.

 ಬೀದರ್‌ ತಹಶೀಲ್ದಾರ್‌ ಕಚೇರಿಯೊಳಗೆ ಖಾಲಿ ಬಾಟಲಿಗಳನ್ನು ಎಸೆಯಲಾಗಿದೆ. ಗುಟಕಾ ತಿಂದು ಅಲ್ಲಲ್ಲಿ ಉಗಿಯಲಾಗಿದೆ. ಮೊದಲ ಮಹಡಿಯಲ್ಲಿ ನಿಂತು ನೋಡಿದರೆ ಕಸ ಕಣ್ಣಿಗೆ ಬೀಳುತ್ತದೆ. ‘ಡಿ’ ದರ್ಜೆ ನೌಕರರು ಅಧಿಕಾರಿಗಳ ಮಾತು ಕೇಳುತ್ತಿಲ್ಲ. ಕಚೇರಿ ಸಿಬ್ಬಂದಿ ಕಸ ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ಚಾಳಿ ಮಾಡಿಕೊಂಡಿದ್ದಾರೆ. ಸರ್ಕಾರಿ ಕಚೇರಿಗಳಲ್ಲೇ ಪರಿಸ್ಥಿತಿ ಹೀಗಿರುವಾಗ ಸಾರ್ವಜನಿಕರಿಗೆ ತಿಳಿವಳಿಕೆ ಕೊಡುವವರು ಯಾರು ಎಂದು ಜೆಡಿಎಸ್‌ ಮುಖಂಡ ನಬಿ ಖುರೇಶಿ ಪ್ರಶ್ನಿಸಿದ್ದಾರೆ.

‘ಡಬಲ್‌ ಎಂಜಿನ್‌ ಸರ್ಕಾರದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಕಚೇರಿಗಳಲ್ಲಿ ಕಸ ಗುಡಿಸುವವರು ಅಧಿಕಾರಿಗಳ ಮಾತು ಕೇಳುತ್ತಿಲ್ಲ. ಕಚೇರಿಗಳಲ್ಲೇ ಕಸ ತುಂಬಿಕೊಂಡಿದೆ. ನಗರ ಪ್ರದೇಶದಲ್ಲಿ ಸಮಸ್ಯೆ ಇನ್ನೂ ಗಂಭೀರವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

 

ಕಚೇರಿ ಆವರಣದಲ್ಲಿ ನೈರ್ಮಲ್ಯವೇ ಇಲ್ಲ

ಔರಾದ್ ತಹಶೀಲ್ದಾರ್ ಕಚೇರಿ ಸುತ್ತಲೂ ಕಸ ಸಂಗ್ರಹವಾಗಿ ಸ್ವಚ್ಛತೆ ಸಮಸ್ಯೆ ಎದುರಾಗಿದೆ. ಕಚೇರಿ ಹಿಂದಿನ ಭಾಗದಲ್ಲಿ ಬೇಕಾಬಿಟ್ಟಿ ಕಸ ಬಿದ್ದಿದೆ. ಶೌಚಾಲಯ ಇದ್ದರೂ ಅವುಗಳ ಸೂಕ್ತ ನಿರ್ವಹಣೆ ಇಲ್ಲದೆ ಗಬ್ಬು ನಾರುತ್ತಿವೆ. ಅಲ್ಲಲ್ಲಿ ಗುಟ್ಕಾ ತಿಂದು ಉಗಿಯಲಾಗಿದೆ. ಇದರಿಂದ ಕಚೇರಿಗೆ ಬರುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ತಾಲ್ಲೂಕು ಮಟ್ಟದ ಕೇಂದ್ರ ಕಚೇರಿಯಲ್ಲಿ ಈ ರೀತಿ ನೈರ್ಮಲ್ಯ ಸಮಸ್ಯೆ ಆಗಿರುವುದು ಸರಿಯಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಅರವಿಂದ ಮಲ್ಲಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂರು ತಿಂಗಳ ಹಿಂದೆಯೇ ಕಸ ವಿಲೇವಾರಿ ಮಾಡಲಾಗಿದೆ. ಈಗ ಮತ್ತೆ ಕಸ ಬಿದ್ದಿದೆ. ಅದನ್ನು ವಿಲೇವಾರಿ ಮಾಡಲು ಮುಖ್ಯಾಧಿಕಾರಿಗೆ ತಿಳಿಸಲಾಗುವುದು ಎಂದು ಗ್ರೇಡ್-2 ತಹಶೀಲ್ದಾರ್ ಮಲಶೆಟ್ಟಿ ಚಿದ್ರೆ ತಿಳಿಸಿದ್ದಾರೆ.

 

ಗಬ್ಬುನಾರಿದರೂ ಅಧಿಕಾರಿಗಳು ಮೌನ

ಹುಮನಾಬಾದ್‌ ಪುರಸಭೆ ಕಚೇರಿ ಆವರಣದಲ್ಲೂ ಅಲ್ಲಲ್ಲಿ ಕಸ ತುಂಬಿದೆ. ಇಲ್ಲಿ ಸ್ವಚ್ಛತೆಯೇ ಮರೀಚಿಕೆಯಾಗಿದೆ. ಕಚೇರಿ ಆವರಣದಲ್ಲೇ ಸ್ವಚ್ಛತೆ ಇಲ್ಲ. ಊರಿನ ಕತೆ ಹೇಳುವ ಹಾಗಿಲ್ಲ. ಹೊರಗಿನಿಂದ ಬರುವ ಜನ ಹುಮನಾಬಾದ್‌ಗೆ ಬಂದ ತಕ್ಷಣ ಹೇಸಿಗೆ ಪಟ್ಟುಕೊಳ್ಳುವಷ್ಟು ಹೊಲಸು ಮಾಡಲಾಗಿದೆ. ಅಂಗಡಿಗಳ ಮಾಲೀಕರಿಂದಲೂ ಸಹಕಾರ ದೊರಕುತ್ತಿಲ್ಲ. ಕಸವನ್ನು ರಸ್ತೆ ಮೇಲೆ ಎಸೆಯುತ್ತಿರುವ ಕಾರಣ ಊರೇ ಹೊಲಸಾಗಿದೆ.

ಹುಮನಾಬಾದ್‌ ತಾಲ್ಲೂಕಿನ ಹಳ್ಳಿಖೇಡ(ಬಿ)ಪುರಸಭೆ ಕಚೇರಿ ಆವರಣದಲ್ಲೂ ಹೊಲಸು ತುಂಬಿಕೊಂಡಿದೆ. ಆವರಣದಲ್ಲಿನ ಕೊಳಕು ನೀರು ಹರಿದು ಹೋಗಲು ಸಹ ಇಲ್ಲಿನ ಅಧಿಕಾರಿಗಳು ಸರಿಯಾದ ವ್ಯವಸ್ಥೆ ಮಾಡಿಲ್ಲ. ಕಚೇರಿ ಹಿಂಭಾಗದ ಪೊಲೀಸ್ ವಸತಿ ಗೃಹದ ಪಕ್ಕದಲ್ಲಿ ಸೂಕ್ತವಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಹೊಲಸು ಸಂಗ್ರಹವಾಗಿ ಎಲ್ಲೆಡೆ ಗಬ್ಬು ವಾಸನೆ ಹರಡುತ್ತಿದೆ.

ಚಿಟಗುಪ್ಪ ಪುರಸಭೆಯ ಆವರಣದಲ್ಲಿ ಗುಜರಿ ವಾಹನಗಳ ಕಸ ತುಂಬಿಕೊಂಡಿದೆ. ಅಧಿಕಾರಿಗಳು ಅವುಗಳನ್ನು ವಿಲೇವಾರಿ ಆವರಣದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಸಿದ್ಧರಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

 

ಪ್ರತಿನಿತ್ಯ 17 ಟನ್ ಕಸ ಸಂಗ್ರಹಣೆ

ಭಾಲ್ಕಿ ತಹಶೀಲ್ದಾರ್‌ ಕಚೇರಿ ಮೇಲ್ನೋಟಕ್ಕೆ ಹೊರ ಭಾಗದಿಂದ ಅಂದವಾಗಿ ಕಂಡು ಬಂದರೂ ಒಳಗೆ ಶೌಚಾಲಯಗಳು ಗಬ್ಬು ನಾರುತ್ತಿವೆ. ಸಾರ್ವಜನಿಕರೇ ಇಲ್ಲಿಯ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಭಾಲ್ಕಿ ಪಟ್ಟಣದಲ್ಲೇ ನಿತ್ಯ 17 ಟನ್ ಕಸ ಸಂಗ್ರಹವಾಗುತ್ತಿದೆ.

‘ಪಟ್ಟಣದಲ್ಲಿ ಪ್ರತ್ಯೇಕವಾಗಿ ಹಸಿ ಹಾಗೂ ಒಣ ಕಸ ಸಂಗ್ರಹಿಸಲು ಈಗಾಗಲೇ ಮೂರು ವಾಹನಗಳನ್ನು ಖರೀದಿಸಲಾಗಿದೆ. ಬಹುತೇಕರು ಕಸವನ್ನು ಪ್ರತ್ಯೇಕಿಸಿ ನೀಡುತ್ತಿಲ್ಲ. ಹಾಗಾಗಿ, ಹಸಿ ಕಸ, ಒಣ ಕಸ ಪ್ರತ್ಯೇಕಿಸಿ ವಿಲೇವಾರಿ ಮಾಡಲು ಸಾಧ್ಯವಾಗಿಲ್ಲ ಎಂದು ಪುರಸಭೆ ಅಧಿಕಾರಿ ವಹೀದ್ ಪಾಶಾ ಹೇಳುತ್ತಾರೆ.

 

ಚಿಟಗುಪ್ಪ: ಪ್ರಾಥಮಿಕ ಹಂತದಲ್ಲೇ ಕಸ ವಿಂಗಡಣೆ

ಚಿಟಗುಪ್ಪ ಪಟ್ಟಣದಲ್ಲಿ ನಿತ್ಯ ಉತ್ಪತ್ತಿಯಾಗುವ ಒಣ ಕಸ ಹಾಗೂ ಹಸಿಕಸವನ್ನು ಪ್ರಾಥಮಿಕ ಹಂತದಲ್ಲಿಯೇ ವಿಂಗಡಿಸಿ ವಿಲೇವಾರಿ ಮಾಡುವ ಕಾರ್ಯ ಕಳೆದ ಐದು ವರ್ಷಗಳಿಂದ ನಡೆಯುತ್ತಿದೆʼ ಎಂದು ಮುಖ್ಯಾಧಿಕಾರಿ ಹುಸಾಮೋದ್ದೀನ್‌ ಮಾಹಿತಿ ನೀಡಿದರು.
ಪಟ್ಟಣದಲ್ಲಿ ಅಧಿಕಾರಿಗಳು ನಿರಂತರವಾಗಿ ನಾಗರಿಕರಿಗೆ ಕಡ್ಡಾಯವಾಗಿ ಕಸ ವಿಂಗಡಣೆ ಮಾಡಿ, ಹಸಿ ಕಸವನ್ನು ಕಾಂಪೋಸ್ಟ್ ಮಾಡಬೇಕು. ಒಣ ಕಸವನ್ನು ಪುರಸಭೆಯ ವಾಹನ ಮನೆಗೆ ಬಂದಾಗ ನೀಡಬೇಕು ಎಂಬ ಅರಿವು ಮೂಡಿಸುವ ಕಾರ್ಯ ನಡೆಸುತ್ತಿದ್ದಾರೆ.

ಬಸವಕಲ್ಯಾಣ ನಗರಸಭೆ ಕಚೇರಿಯಲ್ಲೂ ಸ್ವಚ್ಛತೆಗೆ ಮಹತ್ವ ನೀಡಿಲ್ಲ. ಕಚೇರಿ ಹಿಂಭಾಗದಲ್ಲಿ ಕಸ ಬಿದ್ದುಕೊಂಡಿದೆ. ನಗರದ ಸ್ಥಿತಿಯೂ ಹೀಗೆಯೇ ಇದೆ. ಒಟ್ಟಾರೆ ಸರ್ಕಾರಿ ಕಚೇರಿಗಳಲ್ಲೇ ಸ್ವಚ್ಛತೆ ಯಕ್ಷ ಪಶ್ನೆಯಾಗಿದೆ.

‘ರಸ್ತೆ ಕಸ ಮತ್ತು ಮನೆಗಳ ಘನತ್ಯಾಜ್ಯ ಸಂಗ್ರಹಣೆಗೆ ಗೌರ ರಸ್ತೆಯಲ್ಲಿ ಕಸ ಸಂಗ್ರಹಣೆ ಘಟಕ ಇದೆ. ಆದರೂ ನಿಯಮಿತವಾಗಿ ಕಸ ಸಾಗಿಸದ ಕಾರಣ ಎಲ್ಲೆಂದರಲ್ಲಿ ಕಸ ಬಿದ್ದಿರುತ್ತದೆ' ಎಂದು ಹಿರಿಯರಾದ ರಾಜಶೇಖರ ಸ್ವಾಮಿ ನಗರಸಭೆಯ ಕಾರ್ಯಕ್ಕೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

 

ಸಹಕಾರ: ಮನ್ಮಥ ಸ್ವಾಮಿ, ಗುಂಡು ಅತಿವಾಳ, ಗಿರಿರಾಜ ವಾಲೆ, ಬಸವರಾಜ ಪ್ರಭಾ, ಮಾಣಿಕ ಭೂರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು