ಶನಿವಾರ, ನವೆಂಬರ್ 28, 2020
17 °C
19 ವರ್ಷದೊಳಗಿನವರ ಅಂತರ ಜಿಲ್ಲಾ ಕ್ರಿಕೆಟ್ ಟೂರ್ನಿ

ಜಿಸಿಸಿ, ಕೆಸಿಸಿ ತಂಡಗಳಿಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಮನಾಬಾದ್‌: ಅಂತರ ಜಿಲ್ಲಾ 19 ವರ್ಷದೊಳಗಿನವರ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಕಲಬುರ್ಗಿಯ ಕರ್ನಾಟಕ ಕ್ರಿಕೆಟ್ ಕ್ಲಬ್ (ಕೆಸಿಸಿ) ತಂಡವು ಹುಮನಾಬಾದ್‌ನ ಮಾಣಿಕ ಸ್ಪೋರ್ಟ್ಸ್ ಅಕಾಡೆಮಿ ತಂಡದ ವಿರುದ್ಧ 98 ರನ್‌ಗಳ ಜಯ ಸಾಧಿಸಿತು.

ಇಲ್ಲಿಯ ಶ್ರೀ ಸಿದ್ಧರಾಜ ಟರ್ಫ್ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಮಾಣಿಕ ಸ್ಪೋರ್ಟ್ಸ್ ಅಕಾಡೆಮಿ ತಂಡವು ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು.

ಆರಂಭಿಕ ಆಟಗಾರ ಲಕ್ಷ್ಮಿಕಾಂತ ಸೂರ್ಯವಂಶಿ (71 ರನ್) ಅವರ ಅಮೋಘ ಆಟದ ಬಲದಿಂದ ಕೆಸಿಸಿ ಕಲಬುರ್ಗಿ ತಂಡವು 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 186 ರನ್ ಗಳಿಸಿತು.

55 ಎಸೆತಗಳನ್ನು ಎದುರಿಸಿದ ಲಕ್ಷ್ಮಿಕಾಂತ ಅವರು ಆರು ಬೌಂಡರಿ, ಎರಡು ಸಿಕ್ಸರ್‌ ಸಿಡಿಸಿದರು. ನಂತರ ಬಂದ ಶ್ರೇಯಸ್ ಪುರಾಣಿಕ್ 26, ಭೀಮರಾವ್ ನವಲೆ 33 ಮತ್ತು ನಿತೀಶ್ ವಣಿಕಲ್ಯ 19 ರನ್ ಗಳಿಸಿದರು.

ಸಾಗರ್ ಕಾಶಿನಾಥ್, ಸುಮಿತ್ ಮತ್ತು ಮೊಹಮ್ಮದ್ ಅಫ್ತಾಬ್ ಅಹ್ಮದ್ ತಲಾ ಒಂದು ವಿಕೆಟ್ ಕಬಳಿಸಿದರು.

ಬೃಹತ್ ಗುರಿ ಬೆನ್ನತ್ತಿದ ಹುಮನಾಬಾದ್ ಸ್ಪೋರ್ಟ್ಸ್ ಅಕಾಡೆಮಿ ತಂಡವು ಸಿದ್ಧಾಂತ್ ನವಲೆ ಅವರ ಮಾರಕ್ ಬೌಲಿಂಗ್ ದಾಳಿಗೆ ತತ್ತರಿಸಿತು. ತಂಡವು 17.2 ಓವರ್‌ಗಳಲ್ಲಿ 88ರನ್‌ಗಳಿಗೆ ಆಲ್‌ ಔಟ್‌ ಆಯಿತು.

ತಂಡದ ನಾಯಕ ಸಮ್ಯಕ್ ಶಾ ಅವರು 37 ಎಸೆತಗಳಲ್ಲಿ 45 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರಿಂದ ಹೋರಾಟ ಮೂಡಿ ಬರಲಿಲ್ಲ. ಮೊಹಮ್ಮದ್ ಅಫ್ತಾಬ್ ಅಹ್ಮದ್ 10, ಸುಧನ್ವ ಮಣೂರ ಅವರು 6 ರನ್ ಗಳಿಸಿದರು.
ಸಿದ್ಧಾಂತ್ ನವಲೆ 20ಕ್ಕೆ 4, ವೆಂಕಟ್ ಸಾಯಿ 17ಕ್ಕೆ 2 ಮತ್ತು ರೋಹನ್ ಆರ್.ಸಿ., ಅವರು 25 ರನ್ ನೀಡಿ 2 ವಿಕೆಟ್ ಪಡೆದರು. ಸಿದ್ಧಾಂತ್ ನವಲೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಜಿಸಿಸಿ ಕಲಬುರ್ಗಿಗೆ ಜಯ: ಟೂರ್ನಿಯ ಮತ್ತೊಂದು ಪಂದ್ಯದಲ್ಲಿ ಗ್ಯಾಲಕ್ಸಿ ಕ್ರಿಕೆಟ್ ಕ್ಲಬ್ (ಜಿಸಿಸಿ) ಕಲಬುರ್ಗಿ ತಂಡವು ಕರ್ನಾಟಕ ಕ್ರಿಕೆಟ್ ಕ್ಲಬ್ (ಕೆಸಿಸಿ) ವಿಜಯಪುರ ತಂಡವನ್ನು 26 ರನ್‌ಗಳಿಂದ ಮಣಿಸಿತು.

ಮೊದಲು ಬ್ಯಾಟ್ ಮಾಡಿದ ಜಿಸಿಸಿ ತಂಡವು 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 148 ರನ್ ಗಳಿಸಿತು.
ತಂಡದ ನಾಯಕ ಕರಣ್ ರಾಠೋಡ್ 39 ಎಸೆತಗಳಲ್ಲಿ 49 ರನ್ ಗಳಿಸಿದರು. ಇದರಲ್ಲಿ ಒಂದು ಸಿಕ್ಸರ್, ಐದು ಬೌಂಡರಿಗಳು ಇದ್ದವು.

ಸನ್ಮಯ್ ಎ.ಆರ್. 25, ಮಾರುತಿ ಚವಾಣ್ 20, ಗಣೇಶ್ ಬಿ. 19 ರನ್ ಗಳಿಸಿದರು. ಬಾಬಗೌಡ 24ಕ್ಕೆ 2 ವಿಕೆಟ್‌ ಕಬಳಿಸಿದರು.

ನಂತರ ಬ್ಯಾಟಿಂಗ್ ಮಾಡಿದ ಕರ್ನಾಟಕ ಕ್ರಿಕೆಟ್ ಕ್ಲಬ್ ವಿಜಯಪುರ ತಂಡಕ್ಕೆ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 122 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಪ್ರತೀಕ್ ಚವಾಣ್ 56 ಎಸೆತಗಳಲ್ಲಿ 62 ರನ್ ಗಳಿಸಿದರೂ ಗೆಲುವು ಒಲಿಯಲಿಲ್ಲ. ಅಫ್ಫನ್ ಪಿ. 24 ರನ್ ಗಳಿಸಿದರು.

ರಾಠೋಡ್ ಕರಣ್ 17ಕ್ಕೆ 4, ಸಂತೋಷ್ ಹಟ್ಟಿ 30ಕ್ಕೆ 2 ಮತ್ತು ಅಮಿತ್ 4ರನ್‌ ನೀಡಿ ಒಂದು ವಿಕೆಟ್ ಪಡೆದರು.
 ಕರಣ್ ರಾಠೋಡ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು