ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವಾಡ | ಕುಸ್ತಿ: ಬಾಲಕನನ್ನು ಮಣಿಸಿದ ಬಾಲಕಿ!

ಅಷ್ಟೂರ ಜಾತ್ರೆಯಲ್ಲಿ ಮಹಾರಾಷ್ಟ್ರ ಬಾಲಕಿಯ ಪಟ್ಟು
Published 5 ಏಪ್ರಿಲ್ 2024, 14:21 IST
Last Updated 5 ಏಪ್ರಿಲ್ 2024, 14:21 IST
ಅಕ್ಷರ ಗಾತ್ರ

ಜನವಾಡ: ಬೀದರ್ ತಾಲ್ಲೂಕಿನ ಅಷ್ಟೂರಿನಲ್ಲಿ ಜಾತ್ರೆ ನಿಮಿತ್ತ ಶುಕ್ರವಾರ ನಡೆದ ಜಂಗಿ ಕುಸ್ತಿ ಸ್ಪರ್ಧೆಯಲ್ಲಿ 10 ವರ್ಷದ ಬಾಲಕಿ ಶ್ವೇತಾ ರಾಮೇಶ್ವರ ಕಾರಲೆ ತನ್ನದೇ ವಯಸ್ಸಿನ ಬಾಲಕನ್ನು ಸೋಲಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾಳೆ.

ಮಹಾರಾಷ್ಟ್ರದ ಧಾರಾಶಿವ ಜಿಲ್ಲೆಯ ಲೋಹಾರಾದ ಶ್ವೇತಾ ರಾಮೇಶ್ವರ ಕಾರಲೆ ಅವರು ಲಾತೂರಿನ ಸಮರ್ಥನನ್ನು ಮಣಿಸಿದ್ದಾಳೆ. ಚಿಂಚೋಳಿಯ ಬಾಲಕಿಯೊಂದಿಗೆ ನಡೆದ ಕುಸ್ತಿಯಲ್ಲೂ ಶ್ವೇತಾ ಜಯಗಳಿಸಿದ್ದಳು.

ಜಾತ್ರೆಯಲ್ಲಿ ಮೊದಲ ಬಾರಿಗೆ ಬಾಲಕ ಮತ್ತು ಬಾಲಕಿ ಮಧ್ಯೆ ಕುಸ್ತಿ ನಡೆದಿದ್ದು ರಾಮೇಶ್ವರ ಅವರು ತಮ್ಮ ಮಗಳು ಶ್ವೇತಾಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದರು. ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹಾಗೂ ಇತರ ಗಣ್ಯರು ಬಾಲಕಿಗೆ ನಗದು ಬಹುಮಾನ ಕೊಟ್ಟು ಪ್ರೋತ್ಸಾಹಿಸಿದರು.

₹200 ಯಿಂದ ₹5,000 ವರೆಗಿನ ಕುಸ್ತಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕಲಬುರಗಿ ಜಿಲ್ಲೆಯ ಕಮಲಾಪುರದ ಪ್ರವೀಣ್ ಅಷ್ಟೂರ ಜಾತ್ರೆ ಕುಸ್ತಿ ವೀರರಾಗಿ ಹೊರ ಹೊಮ್ಮಿದರು. ₹5 ಸಾವಿರ ನಗದು ಬಹಮಾನಕ್ಕೂ ಭಾಜನರಾದರು.

ಪ್ರವೀಣ್ ಹಾಗೂ ಸುರಪುರದ ಬಸವರಾಜ ನಡುವಿನ ಕೊನೆಯ ಕುಸ್ತಿ ಜಿದ್ದಾಜಿದ್ದಿನಿಂದ ಕೂಡಿತ್ತು. ಪ್ರವೀಣ್, ವಿವಿಧ ಪಟ್ಟುಗಳನ್ನು ಬಳಸಿ ಎದುರಾಳಿಯನ್ನು ‘ಚಿತ್' ಮಾಡಿ ವಿಜಯ ಪತಾಕೆ ಹಾರಿಸಿದರು.

ಒಟ್ಟು 65 ಪಂದ್ಯಗಳು ನಡೆದವು. ಕರ್ನಾಟಕ ಸೇರಿ ವಿವಿಧ ರಾಜ್ಯಗಳ ಪೈಲ್ವಾನರು ಅಖಾಡದಲ್ಲಿದ್ದರು. ಪ್ರೇಕ್ಷಕರು ತಪ್ಪಾಳೆ ತಟ್ಟಿ, ಶಿಳ್ಳೆ ಹೊಡೆದು ಪೈಲ್ವಾನರನ್ನು ಹುರಿದುಂಬಿಸಿದರು.

ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬುರಾವ್ ಮಲ್ಕಾಪುರ, ಎಪಿಎಂಸಿ ಮಾಜಿ ಅಧ್ಯಕ್ಷ ವಿಜಯಕುಮಾರ ಆನಂದೆ, ಬಿಜೆಪಿ ಜಿಲ್ಲಾ ಘಟಕದ ಮಾಧ್ಯಮ ವಕ್ತಾರ ಸದಾನಂದ ಜೋಶಿ, ಮುಖಂಡರಾದ ವಿಜಯಕುಮಾರ ಪಾಟೀಲ ಖಾಜಾಪುರ, ಶಶಿಧರ ಪಾಟೀಲ ಅಷ್ಟೂರ, ವಿವೇಕ ಪಸರ್ಗೆ, ಶಿವಕುಮಾರ ನಾಗಲಗಿದ್ದಿ, ರಾಹುಲ್ ಮೋರೆ, ಅರ್ಜುನರಾವ್ ಕಾಳಗೊಂಡ ಮೊದಲಾದವರು ಪಾಲ್ಗೊಂಡಿದ್ದರು.

ಭಾವೈಕ್ಯದ ಜಾತ್ರೆಗೆ ಸಂಭ್ರಮದ ತೆರೆ: ಭಾವೈಕ್ಯದ ಜಾತ್ರೆ ಎಂದೇ ಹೆಸರಾದ ಅಷ್ಟೂರ ಜಾತ್ರೆ ಸಂಭ್ರಮದ ಮಧ್ಯೆ ತೆರೆ ಕಂಡಿತು. ಸುಲ್ತಾನ್ ಅಹಮ್ಮದ್ ಶಾ ವಲಿ ಬಹಮನಿ ಅವರ ಜನ್ಮದಿನದ ಪ್ರಯುಕ್ತ ಆಚರಿಸುವ ಜಾತ್ರೆ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾಡ್ಯಾಳದ ಜಂಗಮರ ಆಗಮನದೊಂದಿಗೆ ಆರಂಭಗೊಂಡಿತು. ಜಾತ್ರೆ ನಿಮಿತ್ತ ಆರು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ವಿವಿಧೆಡೆಯಿಂದ ಆಗಮಿಸಿದ್ದ ಅಪಾರ ಭಕ್ತರು ಗುಮ್ಮಟದಲ್ಲಿನ ಸುಲ್ತಾನ್ ಅಹಮ್ಮದ್ ಶಾ ವಲಿ ಬಹಮನಿ ಅವರ ಸಮಾಧಿ ಬಳಿ ಭಕ್ತರು ತೆಂಗಿನ ಕಾಯಿ ಒಡೆದು, ಸಮಾಧಿಗೆ ಬಟ್ಟೆ, ಹೂವಿನ ಚಾದರ್ ಮತ್ತು ಪುಷ್ಪ ಅರ್ಪಿಸಿ ಭಕ್ತಿ ಸಮರ್ಪಣೆ ಮಾಡಿದರು. ಮುಸ್ಲಿಮರು ವಲಿ ಎಂದು ಸ್ಮರಿಸಿದರೆ, ಹಿಂದೂಗಳು ಅಲ್ಲಮಪ್ರಭು ಎಂದು ಪೂಜಿಸಿದರು. ಪ್ರಸಾದ ಸ್ವೀಕರಿಸಿದರು.

‘ಸುಸಜ್ಜಿತ ಕುಸ್ತಿ ಮೈದಾನ– ಶಾಸಕ’ ವಿವಿಧ ರಾಜ್ಯಗಳ ಪೈಲ್ವಾನರು ಅಷ್ಟೂರ ಜಾತ್ರೆ ಕುಸ್ತಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಕಾರಣ ಅಷ್ಟೂರಿನಲ್ಲಿ ಸುಸಜ್ಜಿತ ಕುಸ್ತಿ ಮೈದಾನ ನಿರ್ಮಿಸಬೇಕು ಎನ್ನುವ ಸ್ಥಳೀಯರ ಬೇಡಿಕೆಗೆ ಸ್ಪಂದಿಸಲಾಗುವುದು ಎಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.

ಅಷ್ಟೂರ ಜಾತ್ರೆಯಲ್ಲಿ ಜನ ಪ್ರಸಾದ ಸ್ವೀಕರಿಸಿದರು
ಅಷ್ಟೂರ ಜಾತ್ರೆಯಲ್ಲಿ ಜನ ಪ್ರಸಾದ ಸ್ವೀಕರಿಸಿದರು
ಅಷ್ಟೂರ ಜಾತ್ರೆಯಲ್ಲಿ ವಿವಿಧ ತಾತ್ಕಾಲಿಕ ಅಂಗಡಿಗಳನ್ನು ಹಾಕಲಾಗಿತ್ತು
ಅಷ್ಟೂರ ಜಾತ್ರೆಯಲ್ಲಿ ವಿವಿಧ ತಾತ್ಕಾಲಿಕ ಅಂಗಡಿಗಳನ್ನು ಹಾಕಲಾಗಿತ್ತು
ಅಷ್ಟೂರ ಜಾತ್ರೆಯಲ್ಲಿ ಮಹಿಳೆಯರು ಬಳೆ ಖರೀದಿಸಿದರು
ಅಷ್ಟೂರ ಜಾತ್ರೆಯಲ್ಲಿ ಮಹಿಳೆಯರು ಬಳೆ ಖರೀದಿಸಿದರು
ಮಗಳಿಗೆ ಕುಸ್ತಿ ತರಬೇತಿ ನೀಡುತ್ತಿದ್ದೇನೆ. ನನ್ನ ಮಗಳು ಶ್ವೇತಾಳನ್ನು ಅಂತರರಾಷ್ಟ್ರೀಯ ಮಟ್ಟದ ಕುಸ್ತಿ ಪಟು ಆಗಿಸುವ ಆಸೆ ಇದೆ.
-ರಾಮೇಶ್ವರ, ಶ್ವೇತಾಳ ತಂದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT