‘ಸಭೆ ನಡೆಸಲು ಅನುಮತಿ ಕೊಡಿ’

ಬೀದರ್: ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕೋವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವ ದಿಸೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಲು ಅನುಮತಿ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ರಾಜ್ಯ ಚುನಾವಣಾ ಆಯುಕ್ತರಿಗೆ ಮನವಿ ಸಲ್ಲಿಸಿರುವ ಅವರು, ಕೋವಿಡ್ ಎರಡನೇ ಅಲೆಗೆ ಇಡಿ ದೇಶವೇ ತತ್ತರಿಸುತ್ತಿದೆ. ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಬೀದರ್ ಜಿಲ್ಲೆಯಲ್ಲೂ ದಿನೇ ದಿನೇ ವ್ಯಾಪಕವಾಗಿ ಹರಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿನ ಸರ್ಕಾರಿ ಕೋವಿಡ್ ಆಸ್ಪತ್ರೆಗಳಲ್ಲಿನ ಸ್ಥಿತಿಗತಿ ಅವಲೋಕಿಸಿ ಜನರ ನೋವಿಗೆ ಸ್ಪಂದಿಸಲು ತುರ್ತಾಗಿ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಸಭೆ ನಡೆಸುವುದು ಅವಶ್ಯಕವಾಗಿದೆ. ಆದರೆ, ಬಸವಕಲ್ಯಾಣ ಉಪ ಚುನಾವಣೆ ಹಾಗೂ ಬೀದರ್ ನಗರಸಭೆ ಚುನಾವಣೆ ಪ್ರಯುಕ್ತ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಸಭೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.