ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಕದಿಂದ ಸಮಾಜಕ್ಕೆ ಉತ್ತಮ ಸಂದೇಶ

ನಾಟಕೋತ್ಸವದಲ್ಲಿ ‘ನರಬಲಿ’ ನಾಟಕ ಪ್ರದರ್ಶನ: ಡಾ. ರಾಜೇಂದ್ರ ಯರನಾಳೆ ಅಭಿಮತ
Last Updated 2 ಮಾರ್ಚ್ 2019, 13:57 IST
ಅಕ್ಷರ ಗಾತ್ರ


ಬೀದರ್: ‘ನಾಟಕಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತವೆ. ಪ್ರತಿಯೊಬ್ಬರು ನಾಟಕ ವೀಕ್ಷಿಸಿ ಅದರಲ್ಲಿನ ಒಳ್ಳೆಯ ಅಂಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಾಹಿತಿ ಡಾ. ರಾಜೇಂದ್ರ ಯರನಾಳೆ ಹೇಳಿದರು.

ನಗರದ ಜಿಲ್ಲಾ ರಂಗ ಮಂದಿರದಲ್ಲಿ ಜಾನಪದ ಕಲಾವಿದರ ಬಳಗ, ಕನ್ನಡಾಂಬೆ ಗೆಳೆಯರ ಬಳಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಿದ್ದ ನಾಟಕೋತ್ಸವದಲ್ಲಿ ‘ನರಬಲಿ’ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

‘ಅನಾದಿ ಕಾಲದಿಂದಲೂ ಪಟ್ಟಭದ್ರ ಪುರೋಹಿತರ ಷಡ್ಯಂತ್ರದಿಂದ ನರಬಲಿ ನಡೆಯುತ್ತಿವೆ. ಹಿಂದೆ ಶೂದ್ರರು ವೇದ, ಪುರಾಣಗಳನ್ನು ಓದಬಾರದು ಹಾಗೂ ಕೇಳಬಾರದು ಎನ್ನುವ ನಿಯಮ ಇತ್ತು. ಅದಕ್ಕೆ ವಿರುದ್ಧವಾಗಿ ಯಾರಾದರೂ ಓದಿದರೆ ಅಥವಾ ಕೇಳಿದರೆ ಕಾಸಿದ ಸೀಸವನ್ನು ಅವರ ಕಿವಿಗೆ ಹಾಕಬೇಕು ಎನ್ನುವ ನಿಯಮವೂ ಇತ್ತು’ ಎಂದು ತಿಳಿಸಿದರು.

‘ರಾಜ ವೇಣು ಈ ನಿಯಮವನ್ನು ವಿರೋಧಿಸಿ ಬ್ರಾಹ್ಮಣರೆಲ್ಲರೂ ಶೂದ್ರರರಿಗೆ ಶಿಕ್ಷಣ ಬೋಧಿಸಬೇಕು ಎಂದು ಆಜ್ಞೆ ಹೊರಡಿಸಿದ್ದ. ಇದನ್ನು ವಿರೋಧಿಸಿದ ಬ್ರಾಹ್ಮಣರ ಗುಂಪೊಂದು ಶೂದ್ರರಿಗೆ ಶಿಕ್ಷಣ ನೀಡಿದರೆ ಸರಸ್ವತಿ ಕುಲಗೆಟ್ಟು ಹೋಗುವಳು. ವೇದ ಪುರಾಣಗಳು ಹಾಳಾಗುತ್ತವೆ ಎಂಬ ಅಭಿಪ್ರಾಯ ಮಂಡಿಸಿದ್ದರು’ ಎಂದು ಹೇಳಿದರು.

‘ಶೂದ್ರರಿಗೆ ಶಿಕ್ಷಣ ನೀಡಬೇಕೆಂಬ ನೀತಿ ಜಾರಿಗೊಳಿಸಿದ್ದ ರಾಜನನ್ನು ಕೊಲೆ ಮಾಡುವಂತೆ ಮದಿರೆ ಹಾಗೂ ಮಾನನಿಯರ ಮೋಹದಲ್ಲಿದ್ದ ಯುವರಾಜನಿಗೆ ಬ್ರಾಹ್ಮಣರು ಕಿವಿ ಊದುತ್ತಾರೆ. ಅವರ ಮಾತಿನಿಂದ ಪ್ರೇರಿತನಾದ ಯುವರಾಜ ವೇಣುವನ್ನು ಕೊಲೆ ಮಾಡುತ್ತಾನೆ. ಇದರಿಂದ ಬ್ರಾಹ್ಮಣರಿಗೆ ಜಯ ಸಿಕ್ಕಂತೆ ಆಗಿತ್ತು’ ಎಂದು ತಿಳಿಸಿದರು.

ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ ಅಧ್ಯಕ್ಷತೆ ವಹಿಸಿದ್ದರು.

ಕನ್ನಡ ಸಾಹಿತ್ಯ ಪರಿಷತ್ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ, ಮಡಿವಾಳ ಸಮಾಜದ ಮುಖಂಡ ದಿಗಂಬರ ಮಡಿವಾಳ, ಮಾದಿಗ ದಂಡೋರಾ ಹೋರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಫರ್ನಾಂಡೀಸ್ ಹಿಪ್ಪಳಗಾಂವ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕುಶಾಲರಾವ್ ಯಾಬಾ ಇದ್ದರು. ವಿಜಯಕುಮಾರ ಸೋನಾರೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT