ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ನಿಯಂತ್ರಣದಲ್ಲಿ ಸರ್ಕಾರ ವಿಫಲ

ಸರ್ಕಾರಗಳ ವಿರುದ್ಧ ಡಾ.ಅಜಯಸಿಂಗ್, ಡಾ.ಶರಣಪ್ರಕಾಶ ಪಾಟೀಲ ಆರೋಪ
Last Updated 3 ಆಗಸ್ಟ್ 2020, 16:09 IST
ಅಕ್ಷರ ಗಾತ್ರ

ಬೀದರ್: ‘ಕೋವಿಡ್ ನಿಯಂತ್ರಣದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ.ಅಜಯಸಿಂಗ್ ಆರೋಪ ಮಾಡಿದರು.

ದೇಶ ಹಾಗೂ ರಾಜ್ಯಗಳಲ್ಲಿ ಪ್ರಸ್ತುತ ಕೋವಿಡ್ ಪರಿಸ್ಥಿತಿ ಅತ್ಯಂತ ದಾರುಣವಾಗಿದೆ ಎಂದು ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

‘ಮಾರ್ಚ್ 24 ರಂದು ಮೊದಲ ಬಾರಿಗೆ ಲಾಕ್‍ಡೌನ್ ಘೋಷಿಸಿದ್ದ ಪ್ರಧಾನಿ ಮಹಾಭಾರತ ಯುದ್ಧ 18 ದಿನಗಳಲ್ಲಿ ಮುಗಿದರೆ ನಾವು 21 ದಿನಗಳಲ್ಲಿ ಕೋವಿಡ್‍ ಓಡಿಸುತ್ತೇವೆ ಎಂದಿದ್ದರು. ಆಗ ದೇಶದಲ್ಲಿ 564 ಇದ್ದ ಕೋವಿಡ್ ಸೋಂಕಿತರ ಸಂಖ್ಯೆ ಈಗ 17 ಲಕ್ಷ ದಾಟಿದೆ. ಮಾರ್ಚ್ 9ಕ್ಕೆ ಕರ್ನಾಟಕದಲ್ಲಿ ಕೇವಲ ಒಂದು ಇದ್ದ ಕೋವಿಡ್ ಸೋಂಕಿತರ ಸಂಖ್ಯೆ 2 ಲಕ್ಷ ಮೀರಿದೆ’ ಎಂದು ತಿಳಿಸಿದರು.

‘ಕೋವಿಡ್ ತಡೆಗೆ ಸರ್ಕಾರ ಸರಿಯಾದ ಕ್ರಮಗಳನ್ನು ಕೈಗೊಂಡಿಲ್ಲ. ಆಸ್ಪತ್ರೆಗಳಲ್ಲಿ ಬೆಡ್‍ಗಳ ವ್ಯವಸ್ಥೆ, ಆಂಬುಲನ್ಸ್ ವ್ಯವಸ್ಥೆ ಮಾಡಿಲ್ಲ. ಹೀಗೆ ಪ್ರತಿ ಹಂತದಲ್ಲೂ ವಿಫಲವಾಗಿದೆ’ ಎಂದು ಟೀಕಿಸಿದರು.

‘ಸವಿತಾ, ಮಡಿವಾಳ, ನೇಕಾರ, ಚಾಲಕ, ಹಣ್ಣು -ತರಕಾರಿ ಬೆಳೆದ ರೈತರಿಗೆ ತಲಾ ₹ 5 ಸಾವಿರ ಪರಿಹಾರ ಘೋಷಿಸಿದರೂ ಅವು ಸರಿಯಾಗಿ ಫಲಾನುಭವಿಗಳಿಗೆ ತಲುಪಿಲ್ಲ’ ಎಂದು ದೂರಿದರು.

ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ‘ರಿಸರ್ವ್ ಬ್ಯಾಂಕ್‍ನಿಂದ ರಾಜ್ಯ ಸರ್ಕಾರ ಪಡೆದ ₹ 8 ಸಾವಿರ ಕೋಟಿ ಸಾಲದಲ್ಲಿ ಸರ್ಕಾರ ₹ 4 ಸಾವಿರ ಕೋಟಿಗೂ ಹೆಚ್ಚು ಹಣ ಕೋವಿಡ್ ನಿಯಂತ್ರಣ ಕಾರ್ಯಕ್ಕೆ ಬಳಸಿಕೊಂಡಿದೆ. ಈ ಪೈಕಿ ಸುಮಾರು 2 ಸಾವಿರ ಕೋಟಿಗೂ ಹೆಚ್ಚು ಹಣ ಲೂಟಿ ಮಾಡಲಾಗಿದೆ. ಹಣ ದುರ್ಬಳಕೆ ಮಾಡಿಕೊಂಡು ಸಚಿವರು, ಅಧಿಕಾರಿಗಳು ಜೇಬು ತುಂಬಿಕೊಂಡಿದ್ದಾರೆ’ ಎಂದು ಆಪಾದಿಸಿದರು.

‘₹ 330 ಮಾರುಕಟ್ಟೆ ದರದ ಪಿಪಿಇ ಕಿಟ್‍ಗಳನ್ನು ₹ 2,117 ಗಳಂತೆ ಖರೀದಿ ಮಾಡಲಾಗಿದೆ. ₹ 50-60 ಗಳ ಮಾಸ್ಕ್ ₹ 126 ರಿಂದ ₹ 150 ರೂ.ಗಳವರೆಗೆ ಖರೀದಿಸಲಾಗಿದೆ. ₹ 2 ರಿಂದ 3 ಸಾವಿರ ಗಳ ಥರ್ಮಲ್ ಸ್ಕ್ಯಾನರ್ ಆರೋಗ್ಯ ಇಲಾಖೆ ₹ 5,945 ರೂ.ಗೆ ಖರೀದಿಸಿದರೆ, ಸಮಾಜ ಕಲ್ಯಾಣ ಇಲಾಖೆ ₹ 9 ಸಾವಿರ ಖರೀದಿ ಮಾಡಿದೆ. ₹ 80-100 ಗಳಿರುವ 500 ಎಂ.ಎಲ್. ಸ್ಯಾನಿಟೈಸರ್‌ ಅನ್ನು ₹ 250ಗೆ ಖರೀದಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಇದನ್ನೇ ₹ 600 ಖರೀದಿ ಮಾಡಿದೆ’ ಎಂದು ಹೇಳಿದರು.

‘ಆಕ್ಸಿಜನ್ ಉಪಕರಣ ಕೇರಳದಲ್ಲಿ ₹ 2.86 ಲಕ್ಷಗೆ ಖರೀದಿಸಿದ್ದರೆ, ರಾಜ್ಯದಲ್ಲಿ ₹ 4.36 ಲಕ್ಷಗೆ ಖರೀದಿ ಮಾಡಿ ಅವ್ಯವಹಾರ ಎಸಗಲಾಗಿದೆ’ ಎಂದು ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಶಾಸಕರಾದ ರಹೀಂಖಾನ್, ಬಿ. ನಾರಾಯಣರಾವ್, ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ್, ಅರವಿಂದಕುಮಾರ ಅರಳಿ, ಚಂದ್ರಶೇಖರ ಪಾಟೀಲ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಲಕ್ಷ್ಮಣರಾವ್ ಬುಳ್ಳಾ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ವಕ್ತಾರ ರಾಜಶೇಖರ ಪಾಟೀಲ ಅಷ್ಟೂರ, ಮುಖಂಡರಾದ ಚಂದ್ರಾಸಿಂಗ್, ವಿಜಯಕುಮಾರ ಕೌಡಾಳೆ, ಮುರಳೀಧರ ಎಕಲಾಕರ್, ಶಂಕರರಾವ್ ದೊಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT