ಶನಿವಾರ, ಜುಲೈ 31, 2021
24 °C
ಬೀದರ್ ಡಿಸ್ಟ್ರಿಕ್ಟ್ ಆಕ್ಸಿಜನ್ ಏಡ್ ಸೇವೆಗೆ ಜಿಲ್ಲಾಧಿಕಾರಿ ಶ್ಲಾಘನೆ

ಬೀದರ್ | ಉಚಿತ ಆಂಬುಲೆನ್ಸ್ ಸೇವೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಬೀದರ್ ಡಿಸ್ಟ್ರಿಕ್ಟ್ ಆಕ್ಸಿಜನ್ ಏಡ್‍ನ ಉಚಿತ ಆಂಬುಲೆನ್ಸ್ ಹಾಗೂ ಆಮ್ಲಜನಕ ಸೇವೆಗೆ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್., ಅವರು ನಗರದ ಸಿದ್ಧಿ ತಾಲೀಂನಲ್ಲಿ ಇರುವ ಉರ್ದು ಹಾಲ್‍ನಲ್ಲಿ ಶುಕ್ರವಾರ ಚಾಲನೆ ನೀಡಿದರು.

ಅಗತ್ಯ ಇರುವ ರೋಗಿಗಳಿಗೆ ನೆರವಾಗಲು ಬೀದರ್ ಡಿಸ್ಟ್ರಿಕ್ಟ್ ಆಕ್ಸಿಜನ್ ಏಡ್ ಸಂಸ್ಥೆಯು ಉಚಿತ ಆಂಬುಲೆನ್ಸ್ ಹಾಗೂ ಆಮ್ಲಜನಕ ಸೇವೆ ಒದಗಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಕೊರೊನಾ ಸೋಂಕಿಗೆ ಭಯ ಪಡುವ ಅಗತ್ಯ ಇಲ್ಲ. ಆದರೆ, ಸೋಂಕು ತಡೆಗೆ ಪ್ರತಿಯೊಬ್ಬರು ಮುಂಜಾಗ್ರತಾ ಕ್ರಮ ಅನುಸರಿಸಬೇಕು ಎಂದು ಹೇಳಿದರು.

ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದರೆ ಕೂಡಲೇ ತಪಾಸಣೆ ಮಾಡಿಸಿಕೊಳ್ಳಬೇಕು. ಅನೇಕರು ಸೋಂಕನ್ನು ಮುಚ್ಚಿಡುತ್ತಿರುವ ಕಾರಣದಿಂದಾಗಿಯೇ ಕೊರೊನಾ ಸೋಂಕಿನಿಂದ ಮೃತಪಟ್ಟ ರೋಗಿಗಳ ಸಂಖ್ಯೆಯಲ್ಲಿ ಬೀದರ್ ರಾಜ್ಯದಲ್ಲೇ ದ್ವಿತೀಯ ಸ್ಥಾನದಲ್ಲಿ ಇದೆ ಎಂದು ಬೇಸರ
ವ್ಯಕ್ತಪಡಿಸಿದರು.

ರೋಗಿಗಳು ಸ್ವಯಂ ಪ್ರೇರಣೆಯಿಂದ ತಪಾಸಣೆ ಮಾಡಿಸಿಕೊಂಡು ಸಕಾಲಕ್ಕೆ ಚಿಕಿತ್ಸೆ ಪಡೆದರೆ ಕೊರೊನಾ ಸೋಂಕಿನಿಂದ ಉಂಟಾಗುವ ಸಾವುಗಳನ್ನು ತಪ್ಪಿಸಬಹುದು ಎಂದು ಹೇಳಿದರು.

ಶಾಸಕ ರಹೀಂಖಾನ್ ಮಾತನಾಡಿ, ಕೊರೊನಾ ಸೋಂಕು ವಿಶ್ವವನ್ನು ತಲ್ಲಣಗೊಳಿಸಿದೆ. ಇನ್ನೂ ಲಸಿಕೆ ಲಭ್ಯವಾಗದ ಕಾರಣ ಪ್ರತಿಯೊಬ್ಬರು ಸೋಂಕು ತಡೆಗೆ ನಿಯಮಗಳನ್ನು ಚಾಚೂತಪ್ಪದೇ ಪಾಲಿಸಬೇಕು ಎಂದು ತಿಳಿಸಿದರು.

ಬೀದರ್ ಡಿಸ್ಟ್ರಿಕ್ಟ್ ಆಕ್ಸಿಜನ್ ಏಡ್ ಅಧ್ಯಕ್ಷ ಮಹಮ್ಮದ್ ಸುಲ್ತಾನ್ ಮಾತನಾಡಿ, ಸಂಸ್ಥೆಯು ಅವಶ್ಯಕತೆ ಇರುವವರಿಗೆ ದಿನದ 24 ಗಂಟೆ ಉಚಿತ ಆಂಬುಲೆನ್ಸ್ ಹಾಗೂ ಆಮ್ಲಜನಕ ಸೇವೆ ಒದಗಿಸಲಿದೆ. ಸಹಾಯವಾಣಿಗೆ ಕರೆ ಬಂದ ತಕ್ಷಣ ನುರಿತ ನರ್ಸ್ ಆಂಬುಲೆನ್ಸ್ ಜತೆಗೆ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಮೊದಲಿಗೆ ರೋಗಿಯ ತಪಾಸಣೆ ನಡೆಸಿ ವೈದ್ಯಕೀಯ ಉಪಚಾರ ಮಾಡುತ್ತಾರೆ. ತುರ್ತು ಅವಶ್ಯಕತೆ ಇರುವವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಲಿದ್ದಾರೆ. ಸಂಸ್ಥೆಯ ಸಹಾಯವಾಣಿ ಸಂಖ್ಯೆ 88670 45881 ಆಗಿದೆ ಎಂದು ಅವರು ಹೇಳಿದರು.

ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್, ಡಾ.ಮಕ್ಸೂದ್ ಚಂದಾ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ್, ನಗರಸಭೆ ಆಯುಕ್ತ ಬಿ. ಬಸಪ್ಪ, ಐಎಂಎ ಬೀದರ್ ಶಾಖೆ ಅಧ್ಯಕ್ಷ ಡಾ. ವಿ.ವಿ. ನಾಗರಾಜ, ಬೀದರ್ ಡಿಸ್ಟ್ರಿಕ್ಟ್ ಆಕ್ಸಿಜನ್ ಏಡ್ ಸಂಸ್ಥೆಯ ಸದಸ್ಯ ಮಹಮ್ಮದ್ ಅಸದೊದ್ದಿನ್, ಈದ್ಗಾ ಕಮಿಟಿ ಅಧ್ಯಕ್ಷ ಮಹಮ್ಮದ್ ಅಹಮ್ಮದ್, ಕಾರ್ಯದರ್ಶಿ ಮುಬಾಶಿರ್ ಶಿಂಧೆ, ಮುಖಂಡ ಅಬ್ದುಲ್ ಮನ್ನಾನ್ ಸೇಠ್ ಅವರು ಕಾರ್ಯಕ್ರಮದಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.