ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಗುರುನಾನಕ್‌ ದೇವ ಜಯಂತಿ ಸಂಭ್ರಮ

ಮೆರವಣಿಗೆಯಲ್ಲಿ ಸಾಹಸ ಪ್ರದರ್ಶಿಸಿದ ಸಿಖ್‌ ಸಮುದಾಯದ ಯುವಕರು
Last Updated 20 ನವೆಂಬರ್ 2021, 7:15 IST
ಅಕ್ಷರ ಗಾತ್ರ

ಬೀದರ್: ಸಿಖ್‌ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ ಅವರ 552ನೇ ಜಯಂತಿ ಅಂಗವಾಗಿ ದೇಶದ ವಿವಿಧೆಡೆಯಿಂದ ಆಗಮಿಸಿರುವ ಸಿಖ್‌ ಸಮುದಾಯದ ಸಹಸ್ರಾರು ಜನರು ನಗರದಲ್ಲಿ ಮೆರವಣಿಗೆ ನಡೆಸಿದರು.

ಗುರುದ್ವಾರದ ಆವರಣದಲ್ಲಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ತೆಲಂಗಾಣದ ಗುರುದ್ವಾರಗಳ ಪ್ರಮುಖರು ಗುರುಗ್ರಂಥ ಸಾಹಿಬ್‌ ಹಾಗೂ ಗುರುನಾನಕ್‌ ದೇವ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ಕೊಟ್ಟರು.

ಕರ ಸೇವಕರು ನೀಲಿ ಹಾಗೂ ಹಳದಿ ಬಣ್ಣದ ಧಾರ್ಮಿಕ ಧ್ವಜಗಳು ಹಾಗೂ ನಿಶಾನ್‌ ಸಾಹಿಬ್‌ ಹಿಡಿದು ಜಯಘೋಷ ಮೊಳಗಿಸಿದರು. ಮೆರವಣಿಗೆ ಮಾರ್ಗದಲ್ಲಿ ಯುವಕರು ಕತ್ತಿ ವರಸೆ ಪ್ರದರ್ಶನ ನೀಡಿದರು.

ಗುರುದ್ವಾರ ಶ್ರೀ ನಾನಕ್‌ ಝೀರಾ ಪ್ರಬಂಧಕ ಕಮಿಟಿ ಅಧ್ಯಕ್ಷ ಸರ್ದಾರ್ ಬಲಬೀರ್ ಸಿಂಗ್, ಸದಸ್ಯ ಮನ್‌ಪ್ರೀತ್‌ಸಿಂಗ್, ಜಸ್ಪ್ರೀತ್‌ಸಿಂಗ್, ನಾಂದೇಡ, ಹೈದರಾಬಾದ್‌ನಿಂದ ಬಂದಿದ್ದ ಸಿಖ್‌ ಮುಖಂಡರು ಮೆರವಣಿಗೆಯಲ್ಲಿ ಮುಂಚೂಣಿಯಲ್ಲಿದ್ದರು.

ಗುರುದ್ವಾರದಿಂದ ಆರಂಭವಾದ ಮೆರವಣಿಗೆಯು ನ್ಯೂಟೌನ್‌ ಪೊಲೀಸ್‌ ಠಾಣೆ ಮಾರ್ಗ, ಉದಗಿರ ರಸ್ತೆ, ಮಡಿವಾಳ ವೃತ್ತ, ರೋಟರಿ ವೃತ್ತ, ಡಾ.ಅಂಬೇಡ್ಕರ್‌ ವೃತ್ತ, ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ರಸ್ತೆ, ಹರಳಯ್ಯ ವೃತ್ತದ ಮಾರ್ಗವಾಗಿ ಮರಳಿ ಗುರುದ್ವಾರ ಆವರಣಕ್ಕೆ ಬಂದು ಮುಕ್ತಾಯವಾಯಿತು.

ಎರಡು ವರ್ಷಗಳ ನಂತರ ಭಾರಿ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಜನ ದಟ್ಟಣೆ ನಿಯಂತ್ರಿಸಲು ಪ್ರಮುಖ ವೃತ್ತಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಮೆರವಣಿಗೆ ಮಾರ್ಗಗದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಉದಗಿರ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಬಸ್‌, ಆಟೊಗಳಿಗೆ ಪರ್ಯಾಯ ಮಾರ್ಗ ಸೂಚಿಸಲಾಗಿತ್ತು.

ಗುರು ಗ್ರಂಥ ಸಾಹಿಬ್‌ ದರ್ಶನ: ಗುರು ಗ್ರಂಥ ಸಾಹಿಬ್‌ ದರ್ಶನ ಪಡೆಯಲು ಭಾರಿ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಗುರುದ್ವಾರ ಸಮೀಪದ ದ್ವಿಪಥ ರಸ್ತೆ ಬಳಿಯೇ ಬ್ಯಾರಿಕೇಡ್‌ಗಳನ್ನು ಹಾಕಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಸಮೀಪದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿತ್ತು.

ದೆಹಲಿ ಹಾಗೂ ನಾಂದೇಡ್‌ನಿಂದ ಬಂದಿದ್ದ ಭಕ್ತರು ಪುಷ್ಕರಣಿಯಲ್ಲಿ ಪುಣ್ಯಸ್ನಾನ ಮಾಡಿದರು. ಭಕ್ತರು ಸರತಿ ಸಾಲಿನಲ್ಲಿ ನಿಂತು ನಾನಕ್‌ ಝೀರಾ ಹಾಗೂ ಗುರುಗ್ರಂಥ ಸಾಹಿಬ್‌ ದರ್ಶನ ಪಡೆದರು.

ಗುರುದ್ವಾರದಲ್ಲಿ ಗುರುನಾನಕ ದೇವ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಬೆಳಿಗ್ಗೆ ಕೀರ್ತನ ಹಾಗೂ ಪ್ರವಚನ ಕಾರ್ಯಕ್ರಮಗಳು ನಡೆದವು. ಭಕ್ತರು ಗ್ರಂಥ ಸಾಹಿಬ್‌ ದರ್ಶನ ಪಡೆದರು. ಸಕಲ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ರಾತ್ರಿ ಗುರುದ್ವಾರ ಆವರಣದಲ್ಲಿ ಸಿಡಿಮದ್ದು ಪ್ರದರ್ಶನ ಸಹ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT