ಗುರುವಾರ , ಏಪ್ರಿಲ್ 15, 2021
19 °C
ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿವಿಧೆಡೆಯಿಂದ ಬಂದ ಭಕ್ತರು

ಸಿದ್ಧಾರೂಢ ಮಠದಲ್ಲಿ ಗುರುಪೂರ್ಣಿಮಾ ಮಹೋತ್ಸವ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ನಗರದ ಚಿದಂಬರಾಶ್ರಮ ಸಿದ್ಧಾರೂಢ ಮಠದಲ್ಲಿ ಗುರುಪೂರ್ಣಿಮಾ ಮಹೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಗುರುವಿನ ಪೂಜೆಯಲ್ಲಿ ಪಾಲ್ಗೊಳ್ಳಲು ಈಗಾಗಲೇ ಹುಬ್ಬಳ್ಳಿ, ಧಾರವಾಡ, ಇಂಡಿ, ವಿಜಯಪುರ, ಕಲಬುರ್ಗಿ, ಶಹಾಪುರ, ಸುರಪುರ, ಸೋಲಾಪುರ, ನಾಸಿಕ, ಹೈದರಾಬಾದ್, ಜಹಿರಾಬಾದ್, ಸದಾಶಿವ ಪೇಟೆ ಹಾಗೂ ಗೋವಾದ ಭಕ್ತರು ಸೋಮವಾರ ಸಂಜೆ ವಿಶೇಷ ವಾಹನಗಳಲ್ಲಿ ಇಲ್ಲಿಯ ಚಿದಂಬರಾಶ್ರಮಕ್ಕೆ ಬಂದಿದ್ದಾರೆ.

ಚಿದಂಬರಾಶ್ರಮದಲ್ಲಿ ಬೃಹತ್‌ ವೇದಿಕೆ ನಿರ್ಮಿಸಿ ವಿಶೇಷ ಅಲಂಕಾರ ಮಾಡಲಾಗಿದೆ. ಭಕ್ತರ ಅನುಕೂಲಕ್ಕಾಗಿ ಹಸಿರು ನೆಲಹಾಸು ಹಾಕಲಾಗಿದೆ. ರಾತ್ರಿ ಬಂದು ನೆಲೆಸಿರುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಮಂಗಳವಾರ ನಡೆಯುವ ಕಾರ್ಯಕ್ರಮದಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಭಕ್ತರು ಸೇರುವ ನಿರೀಕ್ಷೆ ಇದೆ.

ಶಿವಕುಮಾರ ಸ್ವಾಮೀಜಿ ಸಾನಿಧ್ಯದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಬೆಳಿಗ್ಗೆ 6 ರಿಂದ 8 ಗಂಟೆಯವರೆಗೆ ಸಿದ್ಧಾರೂಢರ ಮಹಾರುದ್ರಾಭಿಷೇಕ, ಬೆಳಿಗ್ಗೆ 9 ರಿಂದ 10 ಗಂಟೆಯವರೆಗೆ ಶ್ರೀ ಗುರುಸ್ತ್ರೋತ್ರ ಹಾಗೂ ಭಜನೆ ನಡೆಯಲಿದೆ.

ಬೆಳಿಗ್ಗೆ 10.30ರಿಂದ ಶ್ರೀಗಳ ಆಶೀರ್ವಚನ, ನಂತರ ಮಠದ ಸಕಲ ಸಾಧಕ ಸಾಧಕಿಯರಿಂದ ಷೋಡಶೋಪಚಾರ ಮೂಲಕ ಶ್ರೀಗಳ ಪಾದ ಪೂಜೆ, ತುಲಾಭಾರ, ಸುವರ್ಣ ಕಿರೀಟ ಧಾರಣೆ ಹಾಗೂ ಕನಕಪುಷ್ಪವೃಷ್ಟಿ ನಡೆಯಲಿದೆ. ಬಸವಂತರಾಯ ಹಾಗೂ ರೇವಣಸಿದ್ದಪ್ಪ ಬಿರಾದಾರ ಪಂಡನೂರ ತುಲಾಭಾರ ಸೇವೆ ಮಾಡಲಿದ್ದಾರೆ.

ಒಂದು ಸಾವಿರ ಜನ ಉಳಿದುಕೊಳ್ಳಲು ವ್ಯವಸ್ಥೆ ಇಲ್ಲಿದೆ. ಭಕ್ತರ ಅನುಕೂಲಕ್ಕಾಗಿ ಒಂದು ದಿನ ಶಾಲೆಗೆ ರಜೆ ಘೋಷಿಸಲಾಗಿದೆ. ಭಕ್ತರಿಗಾಗಿ ಶಾಲಾ ಕೊಠಡಿಗಳನ್ನು ಬಳಸಿಕೊಳ್ಳಲಾಗಿದೆ. ಗುರುವಿಗೆ ಭಕ್ತಿ ಸಮರ್ಪಣೆ ಮಾಡಲೆಂದೇ ಬೀದರ್‌ನ ಭಕ್ತರು ಬುತ್ತಿಕಟ್ಟಿಕೊಂಡು ಮಠಕ್ಕೆ ಬರಲಿದ್ದಾರೆ. ವನಭೋಜನ ಮಾದರಿಯಲ್ಲಿ ಎಲ್ಲರಿಗೂ ಊಟ ಬಡಿಸಲಿದ್ದಾರೆ. ಮಠದ ವತಿಯಿಂದ ಅನ್ನ, ಸಾರು ಹಾಗೂ ಹುಗ್ಗಿ ಮಾಡಲಾಗಿದೆ.

ಗುರುವಂದನೆ ಕಾರ್ಯಕ್ರಮದಲ್ಲಿ ಗುರುವಿನ ಅನಿವಾರ್ಯತೆ, ಗುರು ಏಕೆ ಬೇಕು, ಏನು ಸಾಧಿಸಲು ಗುರು ಬೇಕು ಎನ್ನುವುದು ಸೇರಿದಂತೆ ಗುರುವಿನ ಮಹತ್ವ ತಿಳಿಸುವ ವಿಶೇಷ ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿವೆ. ಗುರು ಹಾಗೂ ಶಿಷ್ಯನ ಲಕ್ಷಣದ ಬಗ್ಗೆಯೂ ತಿಳಿವಳಿಕೆ ನೀಡಲಾಗುತ್ತದೆ. ಒಟ್ಟಾರೆ ಭಕ್ತರು ಗುರುವಿಗೆ ಹಲವು ವಿಧದಲ್ಲಿ ಭಕ್ತಿ ಸಮರ್ಪಣೆ ಮಾಡಲಿದ್ದಾರೆ ಎಂದು ಗಣಪತಿ ಮಹಾರಾಜ ಹೇಳುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು