ಎಚ್‌1ಎನ್‌1 ದೃಢಪಟ್ಟಿಲ್ಲ: ಜಿಲ್ಲಾಧಿಕಾರಿ

7
ಬೀದರ್‌ ಜಿಲ್ಲೆಯಲ್ಲಿ ಕಟ್ಟೆಚ್ಚರ

ಎಚ್‌1ಎನ್‌1 ದೃಢಪಟ್ಟಿಲ್ಲ: ಜಿಲ್ಲಾಧಿಕಾರಿ

Published:
Updated:
Deccan Herald

ಬೀದರ್‌: ‘ಶಂಕಿತ ಎಚ್‌1ಎನ್‌1 ಸೋಂಕಿನಿಂದ ಮೂರು ದಿನಗಳ ಹಿಂದೆ ಜಿಲ್ಲೆಯ ಇಬ್ಬರು ಸಾವಿಗೀಡಾಗಿದ್ದಾರೆ. ಮೃತರ ಸಂಬಂಧಿಗಳ ಗಂಟಲು ಹಾಗೂ ಮೂಗಿನ ಸ್ರಾವದ ಮಾದರಿ ಪಡೆದು ಮಣಿಪಾಲ್‌ನ ಕಸ್ತೂರಬಾ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ. ವರದಿ ಬಂದ ಮೇಲೆಯೇ ಎಚ್‌1ಎನ್‌1 ನಿಂದ ಮೃತಪಟ್ಟಿದ್ದಾರೋ ಅಥವಾ ಇಲ್ಲವೋ ಎನ್ನುವುದು ಸ್ಪಷ್ಟವಾಗಲಿದೆ’ ಎಂದು ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ ಸ್ಪಷ್ಟಪಡಿಸಿದ್ದಾರೆ.

‘ಭಾಲ್ಕಿ ತಾಲ್ಲೂಕಿನ ಪಾಂಡ್ರಿಯ ಸತೀಶ ಮುರ್ಮೆ ಸೆ. 28ರಂದು ಲಾತೂರಿನ ಖಾಸಗಿ ಆಸ್ಪತ್ರೆಯಲ್ಲಿ ಹಾಗೂ ಹಲಸಿತೂಗಾಂವ್‌ದ ಸಕ್ಕುಬಾಯಿ ಪಾಟೀಲ ಅ. 1ರಂದು ಲಾತೂರ್‌ನಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಪುಣೆಗೆ ಹೊರಟಿದ್ದಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ. ನೆರೆಯ ಮಹಾರಾಷ್ಟ್ರದ ಜಿಲ್ಲೆಗಳಲ್ಲಿ ಎಚ್‌1ಎನ್‌1 ಸೋಂಕು ಕಂಡು ಬಂದಿದೆ. ಗಡಿಯಲ್ಲಿ ಇರುವ ಕಾರಣ ಜಿಲ್ಲೆಯ ಜನ ಕೆಲಸ ಕಾರ್ಯಗಳಿಗೆ ಲಾತೂರ್‌ ಹಾಗೂ ಉಮರ್ಗಾ ಪಟ್ಟಣಕ್ಕೆ ಹೋಗಿ ಬರುವುದರಿಂದ ಅಲ್ಲಿಯೇ ಸೋಂಕು ತಗುಲಿರುವ ಸಾಧ್ಯತೆ ಇದೆ’ ಎಂದು ತಿಳಿಸಿದ್ದಾರೆ.

‘ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿ, ಪಿಡಿಒ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಶಿಕ್ಷಕರಿಗೆ ಮೂರು ದಿನಗಳಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಿ ಎಚ್‌1ಎನ್‌1 ಸೋಂಕಿನ ಲಕ್ಷಣ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ಒದಗಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಹೇಳಿದ್ದಾರೆ.

‘ಜಿಲ್ಲೆಯ ಪ್ರತಿಯೊಂದು ಸರ್ಕಾರಿ ಆಸ್ಪತ್ರೆಯಲ್ಲಿ ಶಂಕಿತ ಎಚ್‌1ಎನ್‌1 ರೋಗಿಗಳ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್‌ ತೆರೆದು ಪ್ರತಿನಿತ್ಯ ಜಿಲ್ಲಾ ಆಡಳಿತಕ್ಕೆ ಮಾಹಿತಿ ನೀಡುವಂತೆ ನಿರ್ದೇಶನ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !