ಮಂಗಳವಾರ, ಅಕ್ಟೋಬರ್ 19, 2021
22 °C

ನಾರಾಯಣರಾವ್ ಅವಧಿಯ ಅರ್ಧದಷ್ಟು ಕಾಮಗಾರಿ ಪೂರ್ಣ

ಮಾಣಿಕ ಆರ್.ಭುರೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ಎರಡು ವರ್ಷ ಅಧಿಕಾರದಲ್ಲಿದ್ದ ಅಕಾಲ ನಿಧನರಾದ ಶಾಸಕ ಬಿ.ನಾರಾಯಣರಾವ್ ಅವರು ಪ್ರಸ್ತಾವ ಸಲ್ಲಿಸಿದ ಅರ್ಧದಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ.

ಈಗಿನ ಶಾಸಕ ಶರಣು ಸಲಗರ ಅವರು ಜಾಫರವಾಡಿ- ಇಲ್ಲಾಳ ರಸ್ತೆ ಸುಧಾರಣೆ ಒಳಗೊಂಡು ಕೆಲ ಕಾಮಗಾರಿಗಳಿಗೆ ಅನುದಾನ ಒದಗಿಸಿದ್ದಾರೆ. ಗ್ರಾಮೀಣ ರಸ್ತೆಗಳ ಸುಧಾರಣೆಗೆ ಆದ್ಯತೆ ನೀಡಿದ್ದಾರೆ.

ಬಿ.ನಾರಾಯಣರಾವ್ ನಿಧನದಿಂದ ತೆರವಾದ ಸ್ಥಾನಕ್ಕೆ ನಾಲ್ಕು ತಿಂಗಳ ಹಿಂದಷ್ಟೇ ನಡೆದ ಉಪ ಚುನಾವಣೆಯಲ್ಲಿ ಶರಣು ಸಲಗರ ಆಯ್ಕೆಗೊಂಡಿದ್ದಾರೆ. ನೂತನ ಶಾಸಕರು ಜೂನ್‌ನಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಎಇಇ ಅವರಿಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಪ್ರಸ್ತಾಪಿಸಿದ ಒಟ್ಟು 24 ಕಾಮಗಾರಿ ಕೈಗೊಳ್ಳಲು ಪತ್ರ ಬರೆದಿದ್ದಾರಾದರೂ ಕೆಲಸ ಆರಂಭ ಆಗಿಲ್ಲ.

ಶಾಸಕರ ನಿಧಿಯಲ್ಲಿ ಪ್ರಸ್ತಾಪಿಸಿದ ಬಹಳಷ್ಟು ಕಾಮಗಾರಿಗಳು ನಗರ ಹಾಗೂ ಗ್ರಾಮೀಣ ಭಾಗದಲ್ಲಿನ ರಸ್ತೆ ಸುಧಾರಣಾ ಕೆಲಸಗಳಾಗಿವೆ. ಶಾಲೆಗಳ ಸುಧಾರಣೆ, ಪ್ರಯೋಗಾಲಯದ ಸಾಮಗ್ರಿ, ಪೀಠೋಪಕರಣ ಒದಗಿಸುವುದಕ್ಕೂ ಆದ್ಯತೆ ನೀಡಲಾಗಿದೆ. ಹೈಮಾಸ್ಟ್ ದೀಪ ಅಳವಡಿಕೆಗೆ ಹಾಗೂ ಕೆಲವೊಂದು ಸಮುದಾಯ ಭವನಗಳಿಗೆ ಅನುದಾನ ಒದಗಿಸಲಾಗಿದೆ.

ಬಸವಕಲ್ಯಾಣದಲ್ಲಿನ ವಾರ್ಡ್ 18 ರಲ್ಲಿ ನಾಲ್ಕು ಸ್ಥಳಗಳಲ್ಲಿನ ಸಿಸಿ ರಸ್ತೆ ನಿರ್ಮಾಣಕ್ಕೆ ಒಟ್ಟು ₹ 15 ಲಕ್ಷ, ವಾರ್ಡ್ 13 ರಲ್ಲಿ ₹ 5 ಲಕ್ಷ, ಹೈಮಾಸ್ಟ್ ದೀಪ ಅಳವಡಿಕೆಗೆ ಬಸವಕಲ್ಯಾಣದ ಸರ್ವೋದಯ ಬಡಾವಣೆಗೆ ₹ 2.50 ಲಕ್ಷ, ಕಾಂಬಳೆ ವಾಡಿಯಲ್ಲಿ ದೀಪ ಅಳವಡಿಕೆಗೆ ₹ 2.50 ಲಕ್ಷ, ಕಲಖೋರಾ ಮಹಾದೇವ ಮಂದಿರ ಹತ್ತಿರದಲ್ಲಿ ಹಾಗೂ ಆಲಗೂಡ ಆದಿನಾಥ ಮಂದಿರದ ಹತ್ತಿರ ಹೈಮಾಸ್ಟ್ ದೀಪ ಅಳವಡಿಕೆಗೆ ತಲಾ ₹ 2 ಲಕ್ಷ ಅನುದಾನ ಒದಗಿಸಲಾಗಿದೆ.

ಹನುಮಾನನಗರ ತಾಂಡಾ ರಸ್ತೆ, ಯಲ್ಲಗುಂಡಿಯಿಂದ ಜಂಗಲಿಪೀರ್ ದರ್ಗಾ ರಸ್ತೆ,  ಇಲ್ಲಾಳದಿಂದ ಜಾಫರವಾಡಿ ರಸ್ತೆ  ಹಾಗೂ ಮಂಠಾಳ ಕ್ರಾಸ್ ದಿಂದ ಇಲ್ಲಾಳವರೆಗಿನ ರಸ್ತೆ ಸುಧಾರಣೆಗೆ  ಅನುದಾನ ನೀಡಲಾಗಿದೆ. ಬಸವಕಲ್ಯಾಣ ನಗರದ ಸರ್ಕಾರಿ ಪ್ರೌಢಶಾಲೆಗೆ ಪ್ರಯೋಗಾಲಯದ ಸಾಮಗ್ರಿ ಹಾಗೂ ಪೀಠೋಪಕರಣಕ್ಕೆ ₹ 2.50 ಲಕ್ಷ ಒದಗಿಸಲಾಗಿದೆ.

ಮಂಠಾಳದ ಮಹಾದೇವ ದೇವಸ್ಥಾನದ ಹತ್ತಿರ ಸಮುದಾಯ ಭವನ, ಶಿರಗೂರದಲ್ಲಿ ಸಾಂಸ್ಕೃತಿಕ ಭವನ, ಬೇಲೂರ ಸರ್ಕಾರಿ ಪ್ರಾಥಮಿಕ ಶಾಲೆ ಆವರಣಗೋಡೆ ನಿರ್ಮಾಣ, ಮುಚಳಂಬದಲ್ಲಿ ಬಸ್ ಬಸ್‌ ತಂಗುದಾಣ  ಹಾಗೂ ಅಂಗವಿಕಲರಿಗೆ ತ್ರಿಚಕ್ರ ಮೋಟಾರ್ ಸೈಕಲ್ ವಿತರಣೆಗೆ ₹ 21.50 ಲಕ್ಷ ಅನುದಾನ ನೀಡಲಾಗಿದೆ.

ಬಿ.ನಾರಾಯಣರಾವ್ ಅನುದಾನದ ಕಾಮಗಾರಿಗಳು:
ಹಿಂದಿನ ಶಾಸಕ ಬಿ.ನಾರಾಯಣರಾವ್ ಅವರು 2019-2020ರಲ್ಲಿ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಸಮುದಾಯ ಭವನ ಹಾಗೂ ಹೈಮಾಸ್ಟ್ ದೀಪಗಳ ಅಳವಡಿಕೆಗೆ ಹೆಚ್ಚಿನ ಮಹತ್ವ ನೀಡಿದ್ದರು. ಬಸವಕಲ್ಯಾಣದ ಸಾರ್ವಜನಿಕ ಆಸ್ಪತ್ರೆ ಆವರಣ, ಜಾನಾಪುರ ಶಿವಾಜಿ ಚೌಕ್, ಲಾಡವಂತಿ ಮಾಣಿಕಪ್ರಭು ಮಂದಿರ, ಮುಸ್ತಾಪುರ ಮಹಾದೇವ ಮಂದಿರ, ಯದ್ಲಾಪುರ ಹನುಮಾನ ದೇವಸ್ತಾನ, ಹಾಲಹಳ್ಳಿ ಡಾ.ಅಂಬೇಡ್ಕರ್ ವೃತ್ತ, ಸಸ್ತಾಪುರ ಮಾಳಿಂಗೇಶ್ವರ ದೇವಸ್ಥಾನ, ಮಿರಖಲ್ ಶಿವಾಜಿ ಚೌಕ್ ಮತ್ತು ಭವಾನಿ ದೇವಸ್ಥಾನ, ಬೇಲೂರ ಹನುಮಾನ ದೇವಸ್ಥಾನ ಮತ್ತು
ಅಂಬೇಡ್ಕರ್ ವೃತ್ತದಲ್ಲಿ, ಹಿರೇನಾಗಾಂವದಲ್ಲಿ, ಅಟ್ಟೂರ್ ಬಸವೇಶ್ವರ ವೃತ್ತದಲ್ಲಿ, ಚಿಕ್ಕನಾಗಾಂವದಲ್ಲಿ, ಬಾಗ ಹಿಪ್ಪರ್ಗಾ ಹನುಮಾನ ದೇವಸ್ಥಾನ, ರಾಮನಗರ ತಾಂಡಾ, ಹಾರಕೂಡ ತಾಂಡಾ, ಹುಲಸೂರ ಈದ್ಗಾ, ದೇವನಾಳಗಳಲ್ಲಿ ಹೈಮಾಸ್ಟ್ ದೀಪ ಅಳವಡಿಸಲು ಅವರು ಸೂಚಿಸಿದ ಕೆಲಸ ಪೂರ್ಣಗೊಂಡಿದೆ.

ಉಜಳಂಬದ ಸಮುದಾಯ ಭವನ ನಿರ್ಮಾಣ,  ಅಶುರಖಾನಾ ಮಸೀದಿ ಹತ್ತಿರ ಸಮುದಾಯ ಭವನ,   ಏಕಂಬಾದಲ್ಲಿ  ಸಮುದಾಯ ಭವನ ನಿರ್ಮಾಣ,  ಬೇಲೂರನ ಮಲ್ಲಪ್ಪ ಕಾಶಪ್ಪ ಹೊಲದಿಂದ ಶಿವರಾಯ ಅವರ ಹೊಲದವರೆಗೆ ರಸ್ತೆ ಸುಧಾರಣೆಗೆ ₹ 4.99 ಲಕ್ಷ. ಇದೇ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಿಂದ ಸಂಗಪ್ಪ ಉದಾನೆ ಹೊಲದವರೆಗೆ ರಸ್ತೆ ಸುಧಾರಣೆಗೆ ₹ 4.99 ಲಕ್ಷ, ಕೊಹಿನೂರನ ವಾರ್ಡ್ 1 ರಲ್ಲಿನ ಸಮುದಾಯ ಭವನದ ಆವರಣಗೋಡೆ,   ಹತ್ತರ್ಗಾದಲ್ಲಿನ ಜಾಮೀಯಾ ಮಸೀದಿ ಹತ್ತಿರ ಸಮುದಾಯ ಭವನ, ಗೌರನಲ್ಲಿ ಸಮುದಾಯ ಭವನ  ಮಂಠಾಳ ಯಲ್ಲಮ್ಮದೇವಿ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದರು. ಇವುಗಳಲ್ಲಿ ಅರ್ಧದಷ್ಟು
ಸಮುದಾಯ ಭವನಗಳ ಕಾಗಾರಿ ಇನ್ನೂ ನಿರ್ಮಾಣ ಹಂತದಲ್ಲೇ ಇವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.