ಮಂಗಳವಾರ, ಅಕ್ಟೋಬರ್ 27, 2020
20 °C
ಶಿವಕುಮಾರ ಸ್ವಾಮೀಜಿ ಸಿದ್ಧಾರೂಢ ಮಠ, ಬೀದರ್

ಸಂತೋಷ ಎಲ್ಲಕ್ಕೂ ಮಿಗಿಲಾದದ್ದು

ಅಮೃತ ವಾಣಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಮನುಷ್ಯನಿಗೆ ಸರ್ವ ಧನಕ್ಕಿಂತಲೂ ಸಂತೋಷ ಮಿಗಿಲಾದದ್ದು. ಸಂತೋಷ ಹೊರಗಿಲ್ಲ. ಕಾರಣ, ಹೊರಗೆ ಹುಡುಕಿದರೆ ಸಿಗದು. ಹೊರಗೆ ಹುಡುಕುವವರಿಗೆ ಮತ್ತಷ್ಟು ದುಃಖವೇ ಉಂಟಾಗುವುದು. ಕುಡುಕ ಸಾಲದ ಚಿಂತೆ ಮರೆಯಲು ಹೆರವರಲ್ಲಿ ಹಣ ತಂದು ಮತ್ತೆ ಕುಡಿದರೆ ಸಾಲ ತೀರದೆ ಹೆಚ್ಚಾಗುವಂತೆ ಆಗುವುದು ಹೊರಗೆ ಸುಖ ಹುಡುಕುವವರ ಗತಿ.

ಸುಖ ಬಯಸುವವರು ತಮ್ಮ ಜೀವನದಲ್ಲಿ ಈ ಮೂರರ ಬಗ್ಗೆ ಸದಾ ಸಂತೋಷಿತರಾಗಿರಬೇಕು. ಹೊನ್ನಿನಲ್ಲಿ ಮತ್ತು ಊಟದಲ್ಲಿ ಬಂದ, ದೊರೆತ ಅಥವಾ ಮದುವೆಯಾದ ಹೆಣ್ಣಿನಲ್ಲಿ ಸುಖ ಪಡದೆ ಮತ್ತೊಂದು ಬಯಸುತ್ತ ಹೋದರೆ ಪಾಪ ಹಾಗೂ ಅನ್ಯರ ಕೋಪಕ್ಕೆ ಗುರಿಯಾಗುವುದು ತಪ್ಪದು. ಅದರಂತೆ ನಾಲಿಗೆ ರುಚಿಗೆ ಹಾಗೆಯೇ ಊಟ ಮಾಡುತ್ತ ಹೋದರೆ ಹೊಟ್ಟೆಯ ಗತಿ ಏನು? ತನ್ನ ತಾಟಿನಲ್ಲಿ ಬಂದು ನೀಡಿದ್ದನ್ನು ಸಂತೋಷದಿಂದ ಸವಿಯಬೇಕು. ತಾನು ಊಟ ಮಾಡುವಾಗ ಅನ್ಯರ ಎಡೆಯ ಕಡೆಗೆ ಲಕ್ಷ್ಯ ಇರಬಾರದು.

ಅನ್ಯರ ಕಡೆ ಲಕ್ಷ್ಯವಿಟ್ಟು ಮಾಡಿದ ಊಟ ರುಚಿಸದು. ಪಚನವೂ ಆಗಲಾರದು. ಧನ ಗಳಿಸುವಲ್ಲಿಯೂ ಅನ್ಯರ ಕಡೆ ನೋಡದೆ, ತನಗೆ ದೇವರು ಉಂಡು, ಉಡಲು ಕೊಟ್ಟಿದ್ದಾನಲ್ಲವೆಂದು ಸಂತೋಷಿಸಬೇಕು. ಗಳಿಕೆಗೆ ಇತಿ ಮಿತಿಗಳಿಲ್ಲ. ಕಬೀರರು ದೇವರಲ್ಲಿ ಎಷ್ಟು ಧನ ಬೇಡಿದ್ದಾರೆ ಕೇಳಿ ಇಲ್ಲಿ.

"ಸಾಯಿ ಇತನಾ ದೀಜಿಯೇ ಜಾಮೇ ಕುಟುಂಬ ಸಮಾಯ!
ಮೈ ಭೀ ಭೂಕಾ ನ ರಂಹು ಸಾಧು ಭೂಖಾ ನ ಜಾಯ!!"
ನಾನು, ನನ್ನವರು ಮತ್ತು ಅತಿಥಿಯಾಗಿ ಬಂದವರು ಉಪವಾಸವಿರದಂತೆ ಕೊಡು ಸಾಕು ಎಂದಿದ್ದಾರೆ. ಆದ್ದರಿಂದ ಕಾಂಚಣ, ಕಾಮಿನಿ ಹಾಗೂ ಭೋಜನಗಳಲ್ಲಿ ತೃಪ್ತಿ ಬೇಗ ತಾಳುವುದು, ತನು ಮನಗಳಿಗೆ ಹಿತದಾಯಕವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು