ಗುರುವಾರ , ಅಕ್ಟೋಬರ್ 22, 2020
25 °C
ಬಹುಜನ ಸಮಾಜ ಪಕ್ಷದಿಂದ ಪ್ರತಿಭಟನಾ ಮೆರವಣಿಗೆ

ಉತ್ತರಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಉತ್ತರಪ್ರದೇಶದಲ್ಲಿ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಅಲ್ಲಿನ ರಾಜ್ಯ ಸರ್ಕಾರವನ್ನು ಕೂಡಲೇ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಅಂಬೇಡ್ಕರ್ ವೃತ್ತದಿಂದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಹೆಣ್ಣುಮಕ್ಕಳ ಅಪಹರಣ, ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳನ್ನು ನಿಭಾಯಿಸುವಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ವಿಫಲವಾಗಿದೆ ಎಂದು ದೂರಿದರು.

ಹಾಥ್‍ರಸ್‍ನಲ್ಲಿ ಈಚೆಗೆ ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರಗೈದು ಅಮಾನುಷವಾಗಿ ಕೊಲೆ ಮಾಡಲಾಗಿದೆ. ಸರ್ಕಾರ ಸಂತ್ರಸ್ತ ಕುಟುಂಬಕ್ಕೆ ಗೌರವಯುತವಾಗಿ ಯುವತಿಯ ಅಂತ್ಯ ಸಂಸ್ಕಾರಕ್ಕೂ ಅವಕಾಶ ಕೊಟ್ಟಿಲ್ಲ. ಪೊಲೀಸರೇ ಶವವನ್ನು ಸುಟ್ಟು ಹಾಕಿದ್ದಾರೆ. ಸರ್ಕಾರ ಪರೋಕ್ಷವಾಗಿ ಇಂತಹ ಘಟನೆಗಳ ಅಪರಾಧಿಗಳಿಗೆ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿದರು.

ಸಾಕ್ಷ್ಯ ನಾಶಪಡಿಸಿರುವ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು. ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅಶೋಕಕುಮಾರ ಮಾಳಗೆ, ಸಂಯೋಜಕ ಸುಭಾಷ ಸಿಕಿಂದ್ರಾಪುರ, ಬೀದರ್ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸತ್ಯದೀಪ ಹಾವನೂರ, ಫಯುಮ್ ಪಟೇಲ್, ವಿಜಯಕುಮಾರ ಭಾವಿಕಟ್ಟಿ, ರಾಮಚಂದ್ರ ಸಾಂಗವಿಕರ್, ಮಲ್ಲಿಕಾರ್ಜುನ ಭಾವಿಕಟ್ಟಿ, ನಾಗರಾಜ ತಾರೆ ಇದ್ದರು.

* * *

ಎಸ್‌ಎಫ್‌ಐ ಪ್ರತಿಭಟನೆ

ಬೀದರ್‌: ಉತ್ತರಪ್ರದೇಶದ ಹಾಥರಸ್‌ನಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ನಾಲಿಗೆ ಕೊಯ್ದು ಕೊಲೆ ಮಾಡಿದ ದುಷ್ಕೃತ್ಯವನ್ನು ಖಂಡಿಸಿ ನಗರದಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್.ಎಫ್.ಐ.) ಜಿಲ್ಲಾ ಘಟಕದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿಪತ್ರ ಸಲ್ಲಿಸಿದರು.

ಸೆಪ್ಟೆಂಬರ್ 14 ರಂದು ಹೊಲದಿಂದ ಮೇವು ತರಲು ಹೋದಾಗ ಯುವತಿಯ ಮೇಲೆ ಅತ್ಯಾಚಾರ ಎಸಗಲಾಗಿದೆ. ತೀವ್ರ ಅಸ್ವಸ್ಥಗೊಂಡಿದ್ದ ಯುವತಿಯನ್ನು ದೆಹಲಿಯ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಯುವತಿಯ ಕುಟುಂಬ ಅಲಿಘಡ ಠಾಣೆಗೆ ದೂರು ನೀಡಲು ಹೋದರೂ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉತ್ತರಪ್ರದೇಶದಲ್ಲಿ ಮಹಿಳೆಯರ ಅಪಹರಣ, ಅತ್ಯಾಚಾರ, ಕೊಲೆ, ದೌರ್ಜನ್ಯ ಮತ್ತು ದರೋಡೆ ಯಂತಹ ಘಟನೆಗಳು ನಡೆಯುತ್ತಲೇ ಇವೆ. ಅಲ್ಲಿನ ರಾಜಕಾರಣಿಗಳು ಅಪರಾಧಿಗಳಿಗೆ ನೀಡುತ್ತಿರುವ ಬೆಂಬಲ ಮತ್ತು ಸಹಕಾರದಿಂದಾಗಿ ಗೂಂಡಾಗಳು ನಿರ್ಭಯವಾಗಿ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಸಂತ್ರಸ್ತೆಯ ಕುಟುಂಬಕ್ಕೆ ಪೋಲಿಸ್ ರಕ್ಷಣೆ ಮತ್ತು ಪರಿಹಾರ ಒದಗಿಸಬೇಕು. ಹೆಣ್ಣುಮಕ್ಕಳ ರಕ್ಷಣೆಗಾಗಿ ನ್ಯಾಯಮೂರ್ತಿ ವರ್ಮಾ ಸಮಿತಿ ಮಾಡಿರುವ ಶಿಫಾರಸುಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಅರುಣ ಕೋಡಗೆ, ಉಪಾಧ್ಯಕ್ಷ ಅಮರ ಗಾದಗಿ, ಕಾರ್ಯದರ್ಶಿ ಅವಿನಾಶ ಪಾಟೀಲ ಪ್ರತಿಭಟನಾಕಾರರ ನೇತೃತ್ವ ವಹಿಸಿದ್ದರು.

6 ರಂದು ದಲಿತ ಸಂಘಟನೆಗಳ ಪ್ರತಿಭಟನೆ

ಬೀದರ್: ಉತ್ತರಪ್ರದೇಶದಲ್ಲಿ ಬಡವರು, ದಲಿತರು, ಆದಿವಾಸಿಗಳು ಹಾಗೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟವು ನಗರದಲ್ಲಿ ಆಕ್ಟೋಬರ್ 6 ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ನಗರದ ಅಂಬೇಡ್ಕರ್ ವೃತ್ತದ ಹತ್ತಿರದ ಅತಿಥಿಗೃಹದಲ್ಲಿ ಶನಿವಾರ ನಡೆದ ದಲಿತ ಸಂಘಟನೆಗಳ ಮುಖಂಡರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಅಂದು ಜನವಾಡ ರಸ್ತೆಯಲ್ಲಿ ಇರುವ ಅಂಬೇಡ್ಕರ್ ಭವನದಲ್ಲಿ ಸೇರಿ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಭಗತ್‍ಸಿಂಗ್ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ನಿರ್ಣಯಿಸಲಾಗಿದೆ.
ದಲಿತ ಸಂಘರ್ಷ ಸಮಿತಿ (ಭೀಮವಾದ)ಯ ಜಿಲ್ಲಾ ಸಂಚಾಲಕ ಕಲ್ಯಾಣರಾವ್ ಭೋಸ್ಲೆ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸಂಘಟನೆಗಳ ಮುಖಂಡರಾದ ಬಾಬುರಾವ್ ಪಾಸ್ವಾನ್, ರಾಜಕುಮಾರ ಮೂಲಭಾರತಿ, ಅರುಣ ಪಟೇಲ್, ರವಿಕುಮಾರ ವಾಘಮಾರೆ, ಶ್ರೀಪತರಾವ್ ದೀನೆ, ಶಿವಕುಮಾರ ನೀಲಕಟ್ಟಿ, ಓಂಪ್ರಕಾಶ ಭಾವಿಕಟ್ಟಿ, ಜೀವನ ಬುಡ್ತಾ, ಬಾಬುರಾವ್ ಮಿಠಾರೆ, ಶಾಲಿವಾನ್ ಬಡಿಗೇರ, ಬಾಬುರಾವ್ ಕೌಠಾ, ಅಂಬಾದಾಸ ಗಾಯಕವಾಡ, ಮಲ್ಲಿಕಾರ್ಜುನ ಚಿಟ್ಟಾ, ಪ್ರಭಾಕರ ಹೊನ್ನಾ, ಪ್ರಕಾಶ ಬಲಾಂಡೆ, ಶಿವರಾಜ ಸಾಗರ್ ಸಭೆಯಲ್ಲಿ ಭಾಗವಹಿಸಿದ್ದರು.

ನಾಳೆ ನಗರದಲ್ಲಿ ಪ್ರತಿಭಟನೆ

ಬೀದರ್‌: ಹಾಥರಸ್‌ನಲ್ಲಿ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ದುಷ್ಕೃತ್ಯ ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕ ಅಕ್ಟೋಬರ್ 5ರಂದು ಬೆಳಿಗ್ಗೆ 11 ಗಂಟೆಗೆ ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ಆವರಣದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದೆ ಎಂದು ಸಮಿತಿಯ ಜಿಲ್ಲಾ ಸಂಚಾಲಕ ಉಮೇಶಕುಮಾರ ಸ್ವಾರಳ್ಳಿಕರ್ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ಸಂದೀಪ ಕಾಂಟೆ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.