ಪ್ರತಿ ಮನೆಯಲ್ಲಿ ಗೋವು ಸಾಕಣೆ ಮಾಡಿ

ಔರಾದ್: ‘ರೈತರು ಹಾಗೂ ಜನಸಾಮಾನ್ಯರು ತಮ್ಮ ಮನೆಯಲ್ಲಿ ಗೋವು ಸಾಕಿದರೆ ತುಂಬಾ ಅನುಕೂಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಹೇಳಿದರು.
ತಾಲ್ಲೂಕಿನ ಬೋಂತಿಯಲ್ಲಿ ತಮ್ಮ ಜನ್ಮದಿನದ ಅಂಗವಾಗಿ ಗೋಪೂಜೆ ನೆರವೇರಿಸಿ, ಅವರು ಮಾತನಾಡಿದರು.
‘ಪ್ರಾಚೀನ ಕಾಲದಿಂದಲೂ ನಮ್ಮ ದೇಶದಲ್ಲಿ ಗೋವಿಗೆ ಪೂಜ್ಯ ಸ್ಥಾನ ಇದೆ. ಇಂತಹ ಗೋವುಗಳ ಸೇವೆ ಮಾಡಲೆಂದು ನಾನು ಪಶು ಸಂಗೋಪನೆ ಇಲಾಖೆ ಬೇಡಿ ಪಡೆದಿದ್ದೇನೆ’ ಎಂದು ತಿಳಿಸಿದರು.
‘ರಾಜ್ಯದಲ್ಲಿ ಪಶು ಸಂಗೋಪನಾ ಇಲಾಖೆಗೆ ಕಾಯಕಲ್ಪ ನೀಡಲು ವಿಶೇಷ ಕಾಳಜಿ ವಹಿಸಲಾಗಿದೆ. ಗೋ ಸಂಪತ್ತು ವೃದ್ಧಿಗಾಗಿ ಬೇರೆಬೇರೆ ರಾಜ್ಯಕ್ಕೆ ಹೋಗಿ ತಿಳಿದುಕೊಂಡಿದ್ದೇನೆ. ಪಶು ಚಿಕಿತ್ಸೆಗೆ 24 ಗಂಟೆಗಳ ಸಹಾಯವಾಣಿ ಕೇಂದ್ರ ತೆರೆದಿದ್ದು ದೇಶದಲ್ಲೇ ಮಾದರಿ’ ಎಂದು ಹೇಳಿದರು.
‘ರೈತರ ಬೇಡಿಕೆಗಳನ್ನು ಈಡೇರಿಸಲು ಬದ್ಧನಾಗಿದ್ದೇನೆ. ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಈಗಾಗಲೇ ಕಾರ್ಖಾನೆಯವರು ಒಪ್ಪಿಕೊಂಡಂತೆ ಪ್ರತಿ ಟನ್ ಕಬ್ಬಿಗೆ ₹ 2,400 ಕೊಡಬೇಕು. ಈ ವಿಷಯದಲ್ಲಿ ಮಾತು ತಪ್ಪಲು ಅವಕಾಶ ಕೊಡುವುದಿಲ್ಲ’ ಎಂದು ತಿಳಿಸಿದರು.
‘ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿದೆ ಎಂದು ಜನ ಮೈಮರೆಯಬಾರದು. ಎಲ್ಲರೂ ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು. ಕೋವಿಡ್ ಲಸಿಕೆ ಪಡೆಯುವುದು ಅತ್ಯಂತ ಸುರಕ್ಷಿತ. ಈ ಕಾರಣ ಇಂದು ಬೋಂತಿಯಲ್ಲೇ ಜನರಿಗೆ ಲಸಿಕೆ ಕೊಡುವ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.
ಇದೇ ವೇಳೆ ಸಚಿವರು ಸಸಿ ನೆಡುವ ಅಭಿಯಾನಕ್ಕೂ ಚಾಲನೆ ನೀಡಿದರು.
ಮಾಜಿ ಶಾಸಕ ಪ್ರಕಾಶ ಖಂಡ್ರೆ, ಜಿಲ್ಲಾ ಪಂಚಾಯಿತಿ ಸದಸ್ಯ ಮಾರುತಿ
ಚವಾಣ್, ಧುರೀಣ ಬಂಡೆಪ್ಪ ಕಂಟೆ, ಜಗದೀಶ್ ಖೂಬಾ, ವಸಂತ ಬಿರಾದಾರ, ಶರಣಪ್ಪ ಪಂಚಾಕ್ಷರಿ, ಸುರೇಶ ಭೋಸ್ಲೆ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀನಿವಾಸ ಖೂಬಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಡಾ. ವಿ.ಜಿ. ರೆಡ್ಡಿ, ಡಾ. ಮಹೇಶ ಬಿರಾದಾರ, ಡಾ.ಶರಣಯ್ಯ ಸ್ವಾಮಿ, ಯುವ ಧುರೀಣ ಸಚಿನ್ ರಾಠೋಡ್, ಜೈಪಾಲ್ ರಾಠೋಡ್, ಮಹಮ್ಮದ್ ನಯೀಮ್ ಬೆಳಕುಣಿ, ಡಾ.ಕಲ್ಲಪ್ಪ ಉಪ್ಪೆ ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.