ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃದ್ಧರ ಆರೋಗ್ಯ ತಪಾಸಣೆಗೆ ಸೂಚನೆ

ವೃದ್ಧಾಶ್ರಮಗಳಿಗೆ ಮಹಾದೇವ ದಿಢೀರ್ ಭೇಟಿ
Last Updated 13 ಡಿಸೆಂಬರ್ 2019, 12:36 IST
ಅಕ್ಷರ ಗಾತ್ರ

ಬೀದರ್: ಕಾಲಕಾಲಕ್ಕೆ ವೃದ್ಧಾಶ್ರಮದಲ್ಲಿರುವ ವೃದ್ಧರ ಆರೋಗ್ಯ ತಪಾಸಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಚ್.ಆರ್. ಮಹಾದೇವ ಸೂಚಿಸಿದರು.

ನಗರದ ಚಿದ್ರಿ ಹತ್ತಿರದ ಡಾ. ಬಿ.ಆರ್. ಅಂಬೇಡ್ಕರ್ ಕಲ್ಚರಲ್ ಆ್ಯಂಡ್ ವೆಲ್‌ಫೇರ್‌ ಸೊಸೈಟಿ ಸಂಚಾಲಿತ ಜ್ಯೋತಿಬಾ ಫುಲೆ ವೃದ್ಧಾಶ್ರಮ ಹಾಗೂ ಮಂಗಲಪೇಟ್ ಹತ್ತಿರದ ಮದರ್ ತೆರೆಸಾ ವೃದ್ಧಾಶ್ರಮಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಅವರು ಅಧಿಕಾರಿಗಳಿಗೆ ಈ ನಿರ್ದೇಶನ ನೀಡಿದರು.

ಎಲ್ಲಿಂದ ಬಂದಿದ್ದೀರಿ, ಆರೋಗ್ಯ ಹೇಗಿದೆ, ಮಾಸಾಶನ ಸಿಗುತ್ತಾ ಎಂದು ವೃದ್ಧರನ್ನು ವಿಚಾರಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸರ್ಕಾರಿ ಬಾಲಕರ ಬಾಲ ಮಂದಿರಕ್ಕೆ ಭೇಟಿ ಕೊಟ್ಟು ಮಕ್ಕಳ ವಸತಿ ಕೋಣೆ ಹಾಗೂ ಅಡುಗೆ ಕೋಣೆಗಳನ್ನು ವೀಕ್ಷಿಸಿದರು. ಮಕ್ಕಳ ಊಟಕ್ಕೆ ಬಳಸುವ ಆಹಾರಧಾನ್ಯಗಳನ್ನು ಪರಿಶೀಲಿಸಿದರು.

ಕೆಲ ಕೋಣೆಗಳಲ್ಲಿ ಎಲ್ಲೆಂದರಲ್ಲಿ ಕಸ ಬಿದ್ದಿರುವುದು, ಸಂಗೀತ ಸಲಕರಣೆಗಳು ದೂಳು ತಿನ್ನುತ್ತಿರುವುದನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಾರ್ಯವೈಖರಿ ಸರಿಪಡಿಸಿಕೊಳ್ಳದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹಾಳಾದ ಬಾಲ ಮಂದಿರ ಮೇಲ್ಛಾವಣಿ ಹಾಗೂ ಗೋಡೆಗಳನ್ನು ದುರಸ್ತಿಪಡಿಸಬೇಕು ಎಂದು ಸೂಚಿಸಿದರು.

ಬಾಲಕಿಯರ ಬಾಲ ಮಂದಿರಕ್ಕೂ ಭೇಟಿ ನೀಡಿ ವ್ಯವಸ್ಥೆ ವೀಕ್ಷಣೆ ಮಾಡಿದರು. ದೂರವಾಣಿಯಲ್ಲಿ ಪೌರಾಯುಕ್ತರನ್ನು ಸಂಪರ್ಕಿಸಿ, ಬಾಲಕಿಯರ ಬಾಲ ಮಂದಿರ ಆವರಣದಲ್ಲಿನ ಕಸ ವಿಲೇವಾರಿ ಮಾಡಬೇಕು. ತೆರೆದ ಬಾವಿಯನ್ನು ಶುಚಿಗೊಳಿಸಿ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಬೇಕು ಎಂದು ನಿರ್ದೇಶನ ನೀಡಿದರು.

ಬಸವನಗರದ ಜಂಗಲ್‌ಕೋಯಿಯಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವೀಕ್ಷಣಾಲಯಕ್ಕೂ ಭೇಟಿ ನೀಡಿ ಆಪ್ತ ಸಮಾಲೋಚಕರು ಹಾಗೂ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಸೂರ್ಯಕಾಂತ ಬಿರಾದಾರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ಎನ್. ಜಾಧವ್, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಜಗದೀಶ, ಮಕ್ಕಳ ರಕ್ಷಣಾಧಿಕಾರಿ ಗೌರಿಶಂಕರ ಪ್ರತಾಪೂರೆ, ಶಂಭುಲಿಂಗ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT