ಬೀದರ್: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಗುಡುಗು, ಮಿಂಚು ಸಹಿತ ಭಾನುವಾರ ಭಾರಿ ಮಳೆಯಾಗಿದೆ.
ಬಿರುಗಾಳಿ ಮಳೆಗೆ ಔರಾದ್ ತಾಲ್ಲೂಕಿನ ಚಿಕ್ಲಿ (ಜೆ) ಗ್ರಾಮದಲ್ಲಿ ವಿದ್ಯುತ್ ಕಂಬ ನೆಲಕ್ಕುರುಳಿವೆ. ಯಾವುದೇ ಪ್ರಾಣ ಹಾನಿ ಆಗಿಲ್ಲ.
ಬೀದರ್ ನಗರ, ತಾಲ್ಲೂಕಿನ ಅಮಲಾಪುರ, ಕೊಳಾರ, ಚಿಕಪೇಟ್, ಬೆನಕನಳ್ಳಿ, ಹಿಪ್ಪಳಗಾಂವ, ಮರಕಲ್, ಶಹಾಪುರ, ಗೋರನಳ್ಳಿ, ಚಿಟ್ಟಾವಾಡಿ ಸೇರಿದಂತೆ ಹಲವೆಡೆ ಬಿರುಸಿನ ಮಳೆಯಾಗಿದೆ.
ಚಿಟಗುಪ್ಪ ತಾಲ್ಲೂಕಿನ ನಿರ್ಣಾ, ಮುತ್ತಂಗಿ, ಉಡಬಾಳ, ಹುಮನಾಬಾದ್, ಭಾಲ್ಕಿ ತಾಲ್ಲೂಕಿನಲ್ಲೂ ವರ್ಷಧಾರೆಯಾಗಿದೆ.
ಸಂಜೆ 4ಗಂಟೆಗೆ ಶುರುವಾದ ಜೋರು ಮಳೆ ಎಡೆಬಿಡದೆ 5.30ರ ವರೆಗೆ ಸುರಿಯಿತು. ಬಳಿಕ ಗುಡುಗು ಮಿಂಚಿನೊಂದಿಗೆ ತುಂತುರು ಮಳೆ ಮುಂದುವರೆಯಿತು. ನಗರದ ಪ್ರಮುಖ ರಸ್ತೆಗಳು, ಚರಂಡಿಗಳಲ್ಲಿ ಮಳೆ ನೀರು ಉಕ್ಕಿ ಹರಿದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿತು.
ಔರಾದ್ ತಾಲ್ಲೂಕಿನ ಧೂಪತಮಹಾಗಾಂವ ಗ್ರಾಮದಲ್ಲಿ 14 ಮಿ.ಮಿ, ಕೌಠಾ (ಬಿ) ಗ್ರಾಮದಲ್ಲಿ 8 ಮಿ.ಮೀ, ಭಾಲ್ಕಿ ತಾಲ್ಲೂಕಿನ ಜೋಳದಾಬಕದಲ್ಲಿ 20 ಮಿ.ಮೀ, ಡೋಂಗರಗಾಂವನಲ್ಲಿ 13 ಮಿ.ಮೀ ಮಳೆಯಾಗಿರುವುದು ವರದಿಯಾಗಿದೆ. ಯಾವುದೇ ಪ್ರಾಣಿ ಹಾನಿ ಸಂಭವಿಸಿಲ್ಲ.
‘ಜಿಲ್ಲೆಯ ಕೆಲವೆಡೆ ಮಳೆಯಾಗಿದೆ. ಆದರೆ, ಇದುವರೆಗೆ ಯಾವುದೇ ಜೀವ ಅಥವಾ ಆಸ್ತಿ ಹಾನಿಯಾಗಿರುವುದು ವರದಿಯಾಗಿಲ್ಲ’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ‘ಪ್ರಜಾವಾಣಿ‘ಗೆ ತಿಳಿಸಿದ್ದಾರೆ.
ಸಿಡಿಲಿಗೆ ಮೂರು ಜಾನುವಾರು ಸಾವು
ಸಿಡಿಲಿನಿಂದ ಭಾಲ್ಕಿ ತಾಲ್ಲೂಕಿನಲ್ಲಿ ಮೂರು ಜಾನುವಾರುಗಳು ಭಾನುವಾರ ಮೃತಪಟ್ಟಿವೆ.
ಭಾಲ್ಕಿ ತಾಲ್ಲೂಕಿನ ರಕ್ಷಾಳ ( ಬಿ) ಗ್ರಾಮದಲ್ಲಿ ಸತ್ತಾರಮಿಯ್ಯಾ ಅವರಿಗೆ ಸೇರಿದ ಎರಡು, ಸಿಕಿಂದ್ರಬಾದ್ ಗ್ರಾಮದ ರೈತ ರಮೇಶ ಶಂಕ್ರೆಪ್ಪ ಅವರಿಗೆ ಸೇರಿದ ಒಂದು ಆಕಳು ಸಿಡಿಲಿಗೆ ಮೃತಪಟ್ಟಿವೆ. ಕೋಸಂ ಗ್ರಾಮದಲ್ಲಿ ಸಿಡಿಲಿನಿಂದ ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡು ಉರಿದಿದೆ.
ಜಿಲ್ಲೆಯ ಬೀದರ್, ಭಾಲ್ಕಿ, ಹುಮನಾಬಾದ್, ಚಿಟಗುಪ್ಪ ಸೇರಿದಂತೆ ಹಲವೆಡೆ ಸಂಜೆ ಆರಂಭಗೊಂಡ ಗುಡುಗು, ಮಿಂಚು ಸಹಿತ ಬಿರುಗಾಳಿ ಮಳೆ ರಾತ್ರಿಯೂ ಮುಂದುವರೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.