ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಮಳೆ: ಔರಾದ್ ತಾಲ್ಲೂಕಿನ ಎಲ್ಲ 28 ಕೆರೆಗಳು ಭರ್ತಿ

Last Updated 20 ಸೆಪ್ಟೆಂಬರ್ 2020, 2:28 IST
ಅಕ್ಷರ ಗಾತ್ರ

ಔರಾದ್: ಕಳೆದ ನಾಲ್ಕು ದಿನಗಳಿಂದ ಸುರಿದ ಭಾರಿ ಮಳೆಗೆ ನಾಲ್ಕೈದು ವರ್ಷಗಳಿಂದ ಬರಿದಾದ ಕೆರೆಗಳಿಗೆ ಜೀವ ಕಳೆ ಬಂದಿದೆ.

ಜಿಲ್ಲೆಯಲ್ಲಿ ಅತಿ ಹೆಚ್ಚು ಕೆರೆ ಹೊಂದಿರುವ ತಾಲ್ಲೂಕಿನ ಬಹುತೇಕ ಕೆರೆಗಳು ನೀರಿಲ್ಲದೆ ಭಣಗುಡುತ್ತಿದ್ದವು. ಆದರೆ ಈ ವರ್ಷ ಸುರಿದ ಮಳೆಯಿಂದ ಎಲ್ಲ 28 ಕೆರೆಗಳು ಭರ್ತಿಯಾಗಿ ನೋಡುಗರ ಕಣ್ಮನ ಸೆಳೆಯುತ್ತಿವೆ.

‘2016ರ ನಂತರ ತಾಲ್ಲೂಕಿನಲ್ಲಿ ಇಷ್ಟು ದೊಡ್ಡ ಪ್ರಮಾಣದ ಮಳೆ ಬಂದಿರಲಿಲ್ಲ. ಬಹಳ ವರ್ಷಗಳ ನಂತರ ಈ ಬಾರಿ ತೇಗಂಪುರ ಕೆರೆ ತುಂಬಿ ಕೋಡಿಯಿಂದ ನೀರು ಹರಿಯುತ್ತಿದೆ’ ಎಂದು ತೇಗಂಪುರ ಗ್ರಾಮದ ಶಿವಕುಮಾರ ಮುಕ್ತೆದಾರ್ ಹೇಳುತ್ತಾರೆ.

‘ಮಾಜಿ ಸಚಿವ ದಿವಂಗತ ಮಾಣಿಕರಾವ ಪಾಟೀಲ ಅವರು ತಾಲ್ಲೂಕಿನಲ್ಲಿ 28ಕ್ಕೂ ಹೆಚ್ಚು ಕೆರೆಗಳ ನಿರ್ಮಿಸಿದ್ದಾರೆ. ಸೂಕ್ತ ನಿರ್ವಹಣೆ ಇಲ್ಲದೆ ಕೆಲ ಕೆರೆಗಳು ಅಳಿವಿನ ಅಂಚಿನಲ್ಲಿವೆ. ತೇಗಂಪುರ, ಔರಾದ್, ಬೆಳಕುಣಿ ಸೇರಿದಂತೆ ಕೆಲ ಕೆರೆಗಳು ತಾಲ್ಲೂಕಿನ ಜನರಿಗೆ ವರವಾಗಿ ಪರಿಣಮಿಸಿವೆ. ಜನರಿಗೆ ಕುಡಿಯುವ ನೀರಿನ ಜತೆ ನೂರಾರು ಎಕರೆ ಜಮೀನಿಗೆ ನೀರುಣಿಸುವ ಕೆರೆಗಳಾಗಿವೆ’ ಎಂದು ಸಾರ್ವಜನಿಕರು ತಿಳಿಸಿದರು.

ಬಿಡುವು: ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ಶುಕ್ರವಾರದಿಂದ ಬಿಡುವ ನೀಡಿದೆ. ಆದರೆ ಮಾಂಜ್ರಾ ನದಿ ಒಳ ಹರಿವು ಮಾತ್ರ ಕಡಿಮೆಯಾಗಿಲ್ಲ. ಹೀಗಾಗಿ ನದಿ ಪಾತ್ರದ ಜನ ಆತಂಕ ದಲ್ಲಿದ್ದಾರೆ. ಮಹಾರಾಷ್ಟ್ರದ ಧನೆಗಾಂವ್ ಜಲಾಶಯ ಭರ್ತಿಯಾಗಿರುವುದರಿಂದ ಆ ನೀರು ಮಾಂಜ್ರಾ ನದಿಗೆ ಬಿಡುವ ಸಾಧ್ಯತೆ ಇದೆ. ನದಿ ಪಾತ್ರದ ಗ್ರಾಮಗಳ ಜನ ಎಚ್ಚರ ವಹಿಸುವಂತೆ ತಹಶೀಲ್ದಾರ್ ಎಂ. ಚಂದ್ರಶೇಖರ್ ತಿಳಿಸಿದ್ದಾರೆ.

‘ಮಳೆಯಿಂದಾಗಿ ರಸ್ತೆಗಳು ಕಿತ್ತು ಹೋಗಿ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ಮುಂಗಾರು ಬೆಳೆ ಪೂರ್ಣ ಪ್ರಮಾಣದಲ್ಲಿ ಹಾಳಾಗಿದೆ. ಸರ್ಕಾರ ತಕ್ಷಣ ಪರಿಹಾರ ಹಣ ಬಿಡುಗಡೆ ಮಾಡುವಂತೆ’ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT