ಶನಿವಾರ, ಸೆಪ್ಟೆಂಬರ್ 18, 2021
26 °C
ಜನಸೇವಾ ಶಾಲೆಯಲ್ಲಿ ಶಿಕ್ಷಕರ ಪಾದಪೂಜೆ ಮಾಡಿದ ವಿದ್ಯಾರ್ಥಿಗಳು

ಗುರುವಿಗೆ ಗೌರವಿಸಿ: ಲೀಲಾ ಕಾರಟಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಅಕ್ಷರ ಕಲಿಸಿದ ಗುರುವನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ನಿರ್ದೇಶಕಿಯಾದ ಶಿಕ್ಷಣ ಉಪ ಸಮಿತಿ ಅಧ್ಯಕ್ಷೆ ಲೀಲಾ ಕಾರಟಗಿ ಸಲಹೆ ಮಾಡಿದರು.

ಇಲ್ಲಿಯ ಪ್ರತಾಪನಗರದ ಜನಸೇವಾ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸೋಮವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಪಾಲಕರಂತೆ ಗುರುವಿನ ಪಾತ್ರವೂ ಬಹಳ ಮಹತ್ವದ್ದಾಗಿದೆ. ಹೀಗಾಗಿ ಗುರುಗಳಿಗೆ ಗೌರವ ಸಮರ್ಪಣೆ ಸೆಪ್ಟೆಂಬರ್ 5ಕ್ಕೆ ಸೀಮಿತವಾಗಬಾರದು. ಜೀವನದುದ್ದಕ್ಕೂ ಅವರನ್ನು ಸ್ಮರಿಸಬೇಕು ಎಂದು ತಿಳಿಸಿದರು.

ಮಕ್ಕಳ ವ್ಯಕ್ತಿತ್ವ ನಿರ್ಮಾಣ ಶಿಕ್ಷಕರಿಂದ ಮಾತ್ರ ಸಾಧ್ಯವಿದೆ. ಶಿಕ್ಷಕರು ಮಕ್ಕಳನ್ನು ತಿದ್ದಿ, ಮಾರ್ಗದರ್ಶನ ಮಾಡಿ, ಅವರನ್ನು ಆದರ್ಶ ಪ್ರಜೆಗಳನ್ನಾಗಿ ರೂಪಿಸುತ್ತಾರೆ. ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಾರೆ ಎಂದು ಹೇಳಿದರು.

ಶಿಕ್ಷಕರಿಗೆ ಶ್ರೇಷ್ಠ ಸ್ಥಾನ ಇದೆ. ಹೀಗಾಗಿ ಶಿಕ್ಷಕರು ವೃತ್ತಿ ಘನತೆ ಹಾಗೂ ಗೌರವವನ್ನು ಕಾಪಾಡಿಕೊಂಡು ಹೋಗಬೇಕು ಎಂದು ತಿಳಿಸಿದರು.

ಇದಕ್ಕೂ ಮೊದಲು ವಿದ್ಯಾರ್ಥಿಗಳು ಶಿಕ್ಷಕರ ಪಾದಪೂಜೆ ಮಾಡಿದರು. ಶಾಲು ಹೊದಿಸಿ ಹೂಮಾಲೆ ಹಾಕಿ ಗೌರವಿಸಿ, ಅವರ ಆಶೀರ್ವಾದ ಪಡೆದರು.

ಜನಸೇವಾ ಶಾಲೆಯ ಆಡಳಿತಾಧಿಕಾರಿ ಸೌಭಾಗ್ಯವತಿ ಮಾತನಾಡಿದರು. ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ, ಕೆಎಎಸ್ ಅಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಜನಸೇವಾ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಸ್ವಾಮಿ, ಶಿಕ್ಷಕರಾದ ಮಹಮ್ಮದ್ ರಫಿ, ದೇವಿಪ್ರಸಾದ್ ಕಲಾಲ್ ಉಪಸ್ಥಿತರಿದ್ದರು.

ರೇವಣಸಿದ್ದಪ್ಪ ಜಲಾದೆ ಸ್ವಾಗತಿಸಿದರು. ಅರ್ಪಿತಾ ನಿರೂಪಿಸಿದರು. ಭಾಗ್ಯಶ್ರೀ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.