ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಲಸೂರ | ಹೊಸ ರೈತ ಸಂಪರ್ಕ ಕೇಂದ್ರ ಆರಂಭಿಸಿ: ರೈತರಿಂದ ಒತ್ತಾಯ

ತಾಲ್ಲೂಕು ವ್ಯಾಪ್ತಿಯ 25 ಗ್ರಾಮಗಳ ರೈತರಿಂದ ಒತ್ತಾಯ
ಗುರುಪ್ರಸಾದ ಮೆಂಟೇ
Published 24 ಜೂನ್ 2024, 4:55 IST
Last Updated 24 ಜೂನ್ 2024, 4:55 IST
ಅಕ್ಷರ ಗಾತ್ರ

ಹುಲಸೂರ: ತಾಲ್ಲೂಕು ಕೇಂದ್ರದಲ್ಲಿ ಒಂದೇ ರೈತ ಸಂಪರ್ಕ ಕೇಂದ್ರವಿದ್ದು, ಬಿತ್ತನೆ ಬೀಜ ವಿತರಣೆ ಸೇರಿದಂತೆ ಇತರ ಕೆಲಸಗಳಿಗಾಗಿ ರೈತರು ತೊಂದರೆ ಅನುಭವಿಸುಂತಾಗಿದೆ. ರೈತರಿಗೆ ಅನುಕೂಲವಾಗುವಂತೆ ಇನ್ನಷ್ಟು ಹೊಸ ರೈತ ಸಂಪರ್ಕ ಕೇಂದ್ರಗಳನ್ನು ಆರಂಭಿಸಬೇಕು ಎಂದು ರೈತರ ಒತ್ತಾಯವಾಗಿದೆ.

ತಾಲ್ಲೂಕಿನ ಕೆಲವು ಗ್ರಾಮಗಳು ಸಾಯಗಾಂವ ಮತ್ತು ಬಸವಕಲ್ಯಾಣ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿಯೇ ಕಾರ್ಯಚರಿಸುತ್ತಿವೆ. ತಾಲ್ಲೂಕು ರಚನೆಯಾಗುವ ಮೊದಲು ಹುಲಸೂರ ಸೇರಿದಂತೆ 25 ಗ್ರಾಮಗಳು ಬಸವಕಲ್ಯಾಣ ತಾಲ್ಲೂಕಿನ ಹೋಬಳಿ ವ್ಯಾಪ್ತಿಯಲ್ಲಿ ಇದ್ದವು.

ತಾಲ್ಲೂಕಿನ ಬೇಲೂರ, ಗೋರಟಾ, ಮುಚಳoಬ, ಮಿರಕಲ, ಗಡಿಗೌಡಗಾಂವ, ಬೇಲೂರ, ತೊಗಲೂರ ಗ್ರಾ.ಪಂ ವ್ಯಾಪ್ತಿಯ 25 ಹಳ್ಳಿಗಳು ಹುಲಸೂರ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಗೆ ಬರುತ್ತವೆ. ಅದರಲ್ಲೂ ಮುಚಳಂಬ, ಗೋರಟಾ ಗ್ರಾ.ಪಂ ವ್ಯಾಪ್ತಿಯ ಹಳ್ಳಿಯ ರೈತರು ಬೀಜ ಹಾಗೂ ರಸಗೊಬ್ಬರವನ್ನು ಖರೀದಿಸಲು ಸುಮಾರು 20 ಕಿ.ಮೀ. ದೂರ ಪ್ರಯಾಣಿಸಬೇಕು. ಈ ನಡುವೆ ಮಳೆಯಾದರೆ ಮತ್ತೆ ಮರಳಿ ಮನೆಗೆ ವಾಪಸ್ಸಾಗಬೇಕಾದ ಪರಿಸ್ಥಿತಿಯಿದೆ.

ತಾಲ್ಲೂಕಿನಲ್ಲಿ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೊಯಾ ಅವರೆ, ತೊಗರಿ, ಉದ್ದು, ಹೆಸರೂ, ಕಬ್ಬು ಸೇರಿ ತೋಟಗಾರಿಕೆ ಬೆಳೆ ಬೆಳೆಯುವ ಕೃಷಿ ಭೂಮಿಯಿದೆ. ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಸಾವಿರಾರು ರೈತರಿದ್ದಾರೆ. ತಾಲ್ಲೂಕಿನಲ್ಲಿ ನೂತನ ರೈತ ಸಂಪರ್ಕ ಕೇಂದ್ರ ಆರಂಭಿಸಿದರೆ ತಾಲ್ಲೂಕು ವ್ಯಾಪ್ತಿಯ ಗ್ರಾಮಗಳ ರೈತರಿಗೆ ಪ್ರಯೋಜನವಾಗಲಿದೆ. ಸ್ಥಳೀಯ ಮಟ್ಟದಲ್ಲೇ ರೈತರಿಗೆ ಎಲ್ಲಾ ಸೇವೆಗಳು ದೊರೆಯಲಿವೆ ಎಂದು ಸ್ಥಳೀಯ ರೈತ ಮುಖಂಡ ದೇವೇಂದ್ರ ಹಲಿಂಗೇ ಆಗ್ರಹಿಸಿದ್ದಾರೆ.

ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ‌ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಹೀಗಾಗಿ ಆಗಾಗ್ಗೆ ರೈತರು ಸಲಹೆ, ಸೂಚನೆಗಳು ಸೇರಿದಂತೆ ವಿವಿಧ ಕೆಲಸಗಳಿಗಾಗಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡುತ್ತಿರುತ್ತಾರೆ. ಆದರೆ ಇಡೀ ತಾಲ್ಲೂಕಿನಿಂದ ರೈತರು ಬಂದರೆ, ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಹೀಗಾಗಿ ಇನ್ನಷ್ಟು ರೈತರ ಸಂಪರ್ಕ ಕೇಂದ್ರಗಳನ್ನು ಆರಂಭವಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

‌‘ರೈತ ಸಂಪರ್ಕ ಕೇಂದ್ರಕ್ಕೆ ರಸ್ತೆ ನಿರ್ಮಿಸಿ’

ಸದ್ಯ ಪಟ್ಟಣದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ತೆರಳಲು ಸೂಕ್ತ ರಸ್ತೆಯಿಲ್ಲ. ನಿತ್ಯ ನೂರಾರು ರೈತರು ಕೇಂದ್ರಕ್ಕೆ ಭೇಟಿ ನೀಡುತ್ತಾರೆ. ಆದರೆ ಇಕ್ಕಟ್ಟಾದ ರಸ್ತೆಯಿಂದಾಗಿ ರೈತರು ತೊಂದರೆ ಅನುಭವಿಸುವಂತಾಗಿದೆ. ಮಳೆಯಾದರೆ ರಸ್ತೆ ಕೆಸರು ಗದ್ದೆಯಂತಾಗುತ್ತದೆ. ಅನೇಕ ರೈತರು ಕೆಸರಿನಲ್ಲಿ ಸಿಲುಕಿ ನೆಲಕ್ಕೆ ಬಿದ್ದಿರುವ ಉದಾಹರಣೆಗಳು ಇವೆ. ದ್ವಿಚಕ್ರ, ತ್ರಿಚಕ್ರ ವಾಹನಗಳು ಕೆಸರಿನಲ್ಲಿ ಸಿಲುಕಿ ಪರದಾಡುವಂತಾಗಿದೆ. ಹೀಗಾಗಿ ರೈತ ಸಂಪರ್ಕ ಕೇಂದ್ರಕ್ಕೆ ರಸ್ತೆ ನಿರ್ಮಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಆಯಾ ಗ್ರಾಮ ಪಂಚಾಯಿತಿಯಲ್ಲಿ ರಿಯಾಯತಿ ಬಿತ್ತನೆಬೀಜ ವಿತರಿಸಲು ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಒಬ್ಬ ಕೃಷಿ ಅಧಿಕಾರಿಯು ಎರಡು ರೈತ ಸಂಪರ್ಕ ಕೇಂದ್ರದ ಜವಾಬ್ದಾರಿ ವಹಿಸಿದ್ದು ತಾಲ್ಲೂಕಿನಲ್ಲಿ ಒಂದೇ ರೈತ ಸಂಪರ್ಕ ಕೇಂದ್ರವಿದೆ

–ಮಾರ್ತಾಂಡ ಮಾಚಕೂರಿ ಸಹಾಯಕ ಕೃಷಿ ನಿರ್ದೇಶಕ ಹುಲಸೂರ ತಾಲ್ಲೂಕು

ನಮ್ಮ ಗ್ರಾಮದಿಂದ ತಾಲ್ಲೂಕಿಗೆ ಹೋಗಲು ಸಮಯಕ್ಕೆ ಸರಿಯಾಗಿ ಸಾರಿಗೆ ವ್ಯವಸ್ಥೆ ತಿರುವುದಿಲ್ಲ. 25 ಕಿ.ಮೀ. ದೂರದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಬಿತ್ತನೆ ಬೀಜ ಖರೀದಿಗೆ ಬಂದರೆ ಸಂಜೆವರೆಗೆ ಕಾಯಬೇಕು. ಮರಳಿ ಮನೆಗೆ ತೆರಳಲು ತೊಂದರೆಯಾಗುತ್ತಿದೆ

–ಭಾಗವತ ಬಿರಾದಾರ ಗಡಿರಾಯಪಳ್ಳಿ ರೈತ

ಕಳೆದ ಎರಡು ವರ್ಷಗಳ ಹಿಂದೆ ನಮ್ಮ ಗ್ರಾ.ಪಂನಲ್ಲಿ ಕೃಷಿ ಇಲಾಖೆ ವತಿಯಿಂದ ಬಿತ್ತನೆಬೀಜ ವಿತರಿಸಲಾಗುತ್ತಿತ್ತು. ಈಗ ತಾಲ್ಲೂಕು ಕೇಂದ್ರದ ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ವಿತರಿಸಲಾಗುತ್ತಿದ್ದು ಕಾರಣ ತಿಳಿದಿಲ್ಲ

–ಸಂದೀಪ್ ಬಿರಾದಾರ ಕಾದೇಪುರ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT