ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ | ಜಿಲ್ಲೆಯಲ್ಲಿ ಭಿಕ್ಷಾಟನೆಗಿಲ್ಲ ಕಡಿವಾಣ; ತಪ್ಪದ ಕಿರಿ ಕಿರಿ

Last Updated 6 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಬೀದರ್‌: ಪುಣ್ಯ ಕ್ಷೇತ್ರಗಳ ಸ್ಥಾನ, ಐತಿಹಾಸಿಕ ಸ್ಮಾರಕ, ಅಂತರರಾಜ್ಯ ಸಂಪರ್ಕ ಕಲ್ಪಿಸುವ ಬೀದರ್‌ ಜಿಲ್ಲೆ ಇದೀಗ ಭಿಕ್ಷುಕರ ತಾಣವಾಗಿ ಗುರುತಿಸಿಕೊಳ್ಳ ತೊಡಗಿದೆ. ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್‌ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳದ ಕಾರಣ ಜಿಲ್ಲೆಯಲ್ಲಿ ನಿರ್ಗತಿಕರು ಹಾಗೂ ಭಿಕ್ಷಾಟನೆ ಮಾಡುವವರ ಸಂಖ್ಯೆ ಹೆಚ್ಚಿದೆ.

ನೆರೆಯ ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದಲೂ ಕೆಲವರು ನಗರಕ್ಕೆ ಭಿಕ್ಷಾಟನೆಗೆ ಬರಲು ಶುರು ಮಾಡಿದ್ದಾರೆ. ಅಂಬೇಡ್ಕರ್‌ ವೃತ್ತ, ಬಸವೇಶ್ವರ ವೃತ್ತ ಹಾಗೂ ಭಗತ್‌ಸಿಂಗ್‌ ವೃತ್ತದಲ್ಲಿ ಭಿಕ್ಷುಕರಿಂದ ಸಾರ್ವಜನಿಕರಿಗೆ ಕಿರಿಕಿರಿ ಹೆಚ್ಚಿದೆ. ವೃತ್ತಗಳಲ್ಲಿ ಟ್ರಾಫಿಕ್‌ ಸಿಗ್ನಲ್‌ ಬೀಳುತ್ತಲೇ ಮಹಿಳೆಯರು ತಟ್ಟೆ ಹಿಡಿದು ಕಾರು ಹಾಗೂ ದ್ವಿಚಕ್ರ ವಾಹನ ಸವಾರರ ಮುಂದೆ ಬಂದು ನಿಂತು ಭಿಕ್ಷಾಟನೆ ಮಾಡುತ್ತಿದ್ದಾರೆ. ಹಣಕ್ಕಾಗಿ ಪೀಡಿಸುತ್ತಿದ್ದಾರೆ.

ನಗರದ ಕೇಂದ್ರ ಬಸ್‌ ನಿಲ್ದಾಣ, ದೇವಿ ಕಾಲೊನಿ ಮಂದಿರ, ಕೆಇಬಿ ಹನುಮಾನ್ ಮಂದಿರ, ಪಾಂಡುರಂಗ ದೇವಸ್ಥಾನ, ಪಾಪನಾಶ ಮಂದಿರ, ಝರಣಿ ನರಸಿಂಹ ದೇವಸ್ಥಾನ ಆವರಣದಲ್ಲೂ ಭಿಕ್ಷುಕರ ಸಂಖ್ಯೆ ಹೆಚ್ಚಾಗಿದೆ. ಕೆಲ ಮಹಿಳೆಯರು ಮೊಬೈಲ್‌ ಇಟ್ಟುಕೊಂಡು ಬೇರೆ ಬೇರೆ ಕಡೆ ಕೆಲವರಿಂದ ಭಿಕ್ಷೆ ಬೇಡಿಸುತ್ತಿದ್ದಾರೆ. ಭಿಕ್ಷಾಟನೆಗೆ ಮಕ್ಕಳನ್ನೂ ಬಳಸಿಕೊಳ್ಳುತ್ತಿದ್ದಾರೆ.

ನಗರದಲ್ಲಿರುವ 100ರಿಂದ 150 ಲೈಂಗಿಕ ಅಲ್ಪಸಂಖ್ಯಾತರ ಕಾಟವೂ ಹೆಚ್ಚಾಗಿದೆ. ಲೈಂಗಿಕ ಅಲ್ಪಸಂಖ್ಯಾತರು ಹಣಕ್ಕಾಗಿ ಸಾರ್ವಜನಿಕರನ್ನು ಪೀಡಿಸುತ್ತಿದ್ದಾರೆ. ಅವರು ಬಂದಾಗ ಭಿಕ್ಷೆ ಕೊಡಲು ನಿರಾಕರಿಸಿದರೆ ರಾದ್ಧಾಂತ ಮಾಡಿ ವ್ಯಾಪಾರ ವಹಿವಾಟಿಗೆ ತೊಡಕು ಉಂಟು ಮಾಡುತ್ತಿದ್ದಾರೆ.

ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಅನುರಾಗ್ ತಿವಾರಿ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಭಿಕ್ಷಾಟನೆ ತಡೆಯಲು ಲೈಂಗಿಕ ಅಲ್ಪಸಂಖ್ಯಾತರಿಗೆ ಕುಂಬಾರಿಕೆ, ಕಸೂತಿ, ಹೊಲಿಗೆ, ಕೇಶ ವಿನ್ಯಾಸದ ತರಬೇತಿ ಕೊಡಿಸಿದ್ದರು. ಭಿಕ್ಷೆಯಲ್ಲೇ ಹೆಚ್ಚು ಹಣ ಸಂಗ್ರಹವಾಗುತ್ತಿರುವ ಕಾರಣ ಅವರು ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ರೈಲು ಬೋಗಿಗಳಲ್ಲೂ ಇವರ ಕಿರಿಕಿರಿ ಮಿತಿ ಮೀರಿದೆ.

‘ಬಸವಕಲ್ಯಾಣದ ರಾಜಾ ಬಾಗಸವಾರ ದರ್ಗಾ, ಚಿಟಗುಪ್ಪ ತಾಲ್ಲೂಕಿನ ಚಾಂಗಲೇರಾದ ವೀರಭದ್ರೇಶ್ವರ ದೇಗುಲ, ಕರಕನಳ್ಳಿಯ ಬಕ್ಕಪ್ರಭು ದೇಗುಲ ಹಾಗೂ ಮನ್ನಾಎಖ್ಖೆಳ್ಳಿ ಬಾಲಮ್ಮ ಮಂದಿರದಲ್ಲಿ ನಿರ್ಗತಿಕರು ಕಾಣಸಿಗುತ್ತಾರೆ. ಹೊಟ್ಟೆ ಪಾಡಿಗೆ ಕೆಲವರಿಗೆ ಭಿಕ್ಷೆ ಬೇಡುವುದು ಅನಿವಾರ್ಯವಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಹೇಳುತ್ತಾರೆ.

‘ಜಿಲ್ಲೆಯಲ್ಲಿ ಎಷ್ಟು ನಿರ್ಗತಿಕರು ಇದ್ದಾರೆ ಎನ್ನುವ ನಿಖರ ಅಂಕಿಸಂಖ್ಯೆಗಳು ಇಲ್ಲ. ಸಮೀಕ್ಷೆ ನಡೆಸಿದ ನಂತರವೇ ಸ್ಪಷ್ಟವಾದ ಚಿತ್ರಣ ದೊರೆಯಲಿದೆ. 2018ರಲ್ಲಿ ನಗರದಲ್ಲಿ ಭಿಕ್ಷಾಟನೆ ತಡೆಗೆ ಕಾರ್ಯಾಚರಣೆ ನಡೆಸಲಾಗಿತ್ತು. ಕೋವಿಡ್‌ ನಂತರ ಕಾರ್ಯಾಚರಣೆ ನಡೆದಿಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಗೌರಿಶಂಕರ ಪ್ರತಾಪುರೆ ವಿವರಿಸುತ್ತಾರೆ.

ನ್ಯಾಯಾಧೀಶರ ಪ್ರಯತ್ನ: 2018ರಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಭಿಕ್ಷಾಟನೆಯನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಾಚರಣೆಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ನಂತರ ಪೊಲೀಸರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಭಿಕ್ಷಾಟನೆಯಲ್ಲಿ ತೊಡಗಿದ್ದವರಿಗೆ ಎಚ್ಚರಿಕೆ ನೀಡಿದ್ದರು. ಕೆಲವರಿಂದ ಮುಚ್ಚಳಿಕೆ ಪತ್ರ ಬರೆಸಿ ಕೊಂಡಿದ್ದರು. ಹೀಗಾಗಿ ಭಿಕ್ಷಾಟನೆ ಸ್ವಲ್ಪ ಮಟ್ಟಿಗೆ ತಗ್ಗಿತ್ತು.

ಹಿಂದೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿದ್ದ ರಾಘವೇಂದ್ರ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಿರ್ಗತಿಕರು ಹಾಗೂ ಭಿಕ್ಷಾಟನೆಯಲ್ಲಿ ತೊಡಗಿದವರಿಗೆ ಕಾನೂನು ತಿಳಿವಳಿಕೆ ಕಾರ್ಯಕ್ರಮ ಆಯೋಜಿಸಿ ತಿಳಿವಳಿಕೆ ನೀಡಲು ಪ್ರಯತ್ನಿಸಿದ್ದರು. ಅವರು ಇರುವವರೆಗೂ ಅಧಿಕಾರಿಗಳು ಸ್ವಲ್ಪ ಮಟ್ಟಿಗೆ ಕೆಲಸ ಮಾಡಿದರು. ಅವರು ವರ್ಗಾವಣೆಯಾದ ನಂತರ ಅವ್ಯವಸ್ಥೆ ಮತ್ತೆ ಮರುಕಳಿಸಿದೆ.

ಜಿಲ್ಲಾ ಕೇಂದ್ರದಲ್ಲಿಲ್ಲ ನಿರ್ಗತಿಕರ ಕೇಂದ್ರ: ಜಿಲ್ಲೆಯಲ್ಲಿ ಸಾವಿರಾರು ಭಿಕ್ಷುಕರು ಪರದಾಡುತ್ತಿದ್ದರೂ ಜಿಲ್ಲಾ ಕೇಂದ್ರದಲ್ಲಿ ನಿರ್ಗತಿಕರ ಕೇಂದ್ರ ಇಲ್ಲ. ನಗರ ಸ್ಥಳೀಯ ಸಂಸ್ಥೆಗಳು ನಾಗರಿಕರಿಂದ ಭಿಕ್ಷುಕರ ಸೇವಾ ಶುಲ್ಕ ಪಡೆದರೂ ಹಣ ವಿನಿಯೋಗಿಸುತ್ತಿಲ್ಲ. ಕೋಟ್ಯಂತರ ರೂಪಾಯಿ ಖಜಾನೆಯಲ್ಲಿದೆ. ನಿರಾಶ್ರಿತರು ತಮ್ಮ ಒಪ್ಪೊತ್ತಿನ ಊಟಕ್ಕಾಗಿ ಅಲೆದಾಡುವುದು ತಪ್ಪಿಲ್ಲ.

‘ನಿರ್ಗತಿಕರು ಹೋಟೆಲ್‌ಗಳು ನೀಡುವ ಅಳಿದುಳಿದ ಆಹಾರ ತಿಂದು ಬದುಕುತ್ತಿದ್ದಾರೆ. ಭಿಕ್ಷಾಟನೆ ಕೊನೆಗೊಳಿಸಲು ಸರ್ಕಾರ ರಾಜ್ಯದ 14 ಜಿಲ್ಲೆಗಳಲ್ಲಿ ಪುನರ್ವಸತಿ ಕೇಂದ್ರಗಳನ್ನು ನಡೆಸುತ್ತಿದೆ. ಬೀದರ್‌ ಜಿಲ್ಲೆಯಲ್ಲಿ ಪುನರ್ವಸತಿ ಪರಿಹಾರ ಸಮಿತಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ’ ಎಂದು ಬುದ್ಧ, ಬಸವ, ಅಂಬೇಡ್ಕರ್‌ ಯುವಕ ಸಂಘದ ಅಧ್ಯಕ್ಷ ಮಹೇಶ ಗೋರನಾಳಕರ್‌ ಬೇಸರ ವ್ಯಕ್ತಪಡಿಸುತ್ತಾರೆ.

ಬೀದರ್‌ ತಾಲ್ಲೂಕಿನ ಗೋರನಳ್ಳಿ ಬಳಿ ಭಿಕ್ಷುಕರ ಪರಿಹಾರ ಕೇಂದ್ರ ಆರಂಭಿಸಲು ರಾಜ್ಯ ಸರ್ಕಾರ 5 ಎಕರೆ ಜಮೀನು ಮಂಜೂರು ಮಾಡಿದರೂ ಪಹಣಿಯಲ್ಲಿ ಸೇರಿಸುವ ಪ್ರಕ್ರಿಯೆ ಐದು ವರ್ಷಗಳಿಂದ ತೆವಳುತ್ತ ಸಾಗಿದೆ.

‘ಮೊದಲು ಪಹಣಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಹೆಸರು ನೋಂದಣಿ ಮಾಡಲಾಗಿತ್ತು. ನಿರಾಶ್ರಿತರ ಪರಿಹಾರ ಕೇಂದ್ರ ಕಾರ್ಯದರ್ಶಿ ಹೆಸರಿಗೆ ಜಮೀನು ನೋಂದಣಿ ಮಾಡುವಂತೆ ಪತ್ರ ಕೊಡಲಾಗಿದೆ. ಎರಡು ವಾರಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ’ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಗಿರೀಶ ರಂಜೋಳಕರ್ ಹೇಳುತ್ತಾರೆ.

‘ನಿರಾಶ್ರಿತರ ಪರಿಹಾರ ಕೇಂದ್ರದ ಪ್ರಧಾನ ಕಚೇರಿ ಬೆಂಗಳೂರಿನಲ್ಲಿ ಇದೆ. ಬೆಂಗಳೂರಿನ ಕಚೇರಿಯೊಂದಿಗೆ ಸಂಪರ್ಕ ಸಾಧಿಸಿ ಕೇಂದ್ರ ಸ್ಥಾಪನೆಗೆ ಪ್ರಯತ್ನ ಮಾಡಲಾಗುವುದು’ ಎಂದು ತಿಳಿಸುತ್ತಾರೆ.

ಎಲ್ಲ ಜಿಲ್ಲೆಗಳಲ್ಲೂ ಪುನರ್ವಸತಿ ಕೇಂದ್ರ ತೆರೆಯಲು ಸರ್ಕಾರ ಕ್ರಮ ವಹಿಸಲಿದೆ ಎಂದು 2016ರ ನವೆಂಬರ್‌ನಲ್ಲಿ ವಿಧಾನ ಪರಿಷತ್ತಿನಲ್ಲಿ ಅಂದಿನ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿಕೆ ಕೊಟ್ಟಿದ್ದರು. ಆದರೆ ಬೀದರ್‌ನಿಂದ ಒಂದು ಸಣ್ಣ ಪ್ರಸ್ತಾವವೂ ಸರ್ಕಾರಕ್ಕೆ ಹೋಗಿಲ್ಲ.

ಸಹಕಾರ: ಗುಂಡು ಅತಿವಾಳ, ಮಾಣಿಕ ಭುರೆ, ಮನ್ಮಥ ಸ್ವಾಮಿ, ಬಸವರಾಜ ಪ್ರಭಾ, ವೀರೇಶ ಮಠಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT