ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ ಭೂಮಿ ಪೂಜೆಯಲ್ಲೇ ಅಸಮಾನತೆ: ಶಿವಯೋಗೀಶ್ವರ ಸ್ವಾಮೀಜಿ ಅಸಮಾಧಾನ

ಶಿವಯೋಗೀಶ್ವರ ಸ್ವಾಮೀಜಿ ತೀವ್ರ ಅಸಮಾಧಾನ
Last Updated 8 ಜನವರಿ 2021, 16:38 IST
ಅಕ್ಷರ ಗಾತ್ರ

ಬೀದರ್: ಬಸವಕಲ್ಯಾಣದಲ್ಲಿ ನಡೆದ ಸಮಾನತೆ ಸಾರಿದ ಅನುಭವ ಮಂಟಪದ ಭೂಮಿ ಪೂಜೆ ಕಾರ್ಯಕ್ರಮದಲ್ಲೇ ಅಸಮಾನತೆ ಕಂಡು ಬಂದಿತು ಎಂದು ಜಿಲ್ಲಾ ಮಠಾಧೀಶರ ಒಕ್ಕೂಟದ ಅಧ್ಯಕ್ಷ ಶಿವಯೋಗೀಶ್ವರ ಸ್ವಾಮೀಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾರತಮ್ಯ ನೀತಿ ಅನುಸರಿಸಿರುವುದನ್ನು ಖಂಡಿಸಲಾಗುತ್ತದೆ ಎಂದು ನಗರದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಕೆಲ ಮಠಾಧೀಶರಿಗೆ ಕಾರ್ಯಕ್ರಮದ ಮಾಹಿತಿ ಕೊಟ್ಟಿರಲಿಲ್ಲ. ಸೂಕ್ತ ಗೌರವವನ್ನೂ ನೀಡಿರಲಿಲ್ಲ ಎಂದು ಬೇಸರದಿಂದ ನುಡಿದರು.

ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಗೊಂದಲದಿಂದ ಕೂಡಿತ್ತು. ಅದನ್ನು ಮೂರು ಸಲ ಮುದ್ರಿಸಲಾಗಿತ್ತು. ಮೇಲು-ಕೀಳು ಭಾವನೆ ಪ್ರದರ್ಶಿಸಿ ಬಸವಾದಿ ಶರಣರ ಚಿಂತನೆಗಳನ್ನು ಅವಮಾನಿಸಲಾಗಿದೆ ಎಂದು ಆಪಾದಿಸಿದರು.

ವೇದಿಕೆ ನಿರ್ಮಾಣದಲ್ಲೂ ಸಾಕಷ್ಟು ಯಡವಟ್ಟು ಮಾಡಲಾಗಿತ್ತು. ಒಬ್ಬರಿಗೆ ಒಂದು ಕಡೆ, ಮತ್ತೊಬ್ಬರಿಗೆ ಮತ್ತೊಂದು ಕಡೆ ಕೂಡಿಸುವ ಮೂಲಕ ಅಸಮಾನತೆ ಸ್ಪಷ್ಟಪಡಿಸಲಾಗಿತ್ತು ಎಂದು ಹೇಳಿದರು.

ಬಸವಣ್ಣನವರು ಎಲ್ಲ ಜಾತಿ, ಧರ್ಮದವರನ್ನು ಒಂದೇ ವೇದಿಕೆಗೆ ತಂದಿದ್ದರು. ಸಮಾನತೆಯನ್ನು ನೈಜ ರೂಪದಲ್ಲಿ ಜಾರಿಗೆ ತಂದಿದ್ದರು. ಆದರೆ, ಕಾರ್ಯಕ್ರಮ ಲಿಂಗಾಯತರಿಗೆ ಸೀಮಿತ ಎಂಬಂತೆ ಮಾಡಲಾಗಿತ್ತು. ಬಸವನಣ್ಣವರ ತತ್ವ ಹಾಗೂ ವಿಚಾರಗಳು ಕೇವಲ ಲಿಂಗಾಯತರಿಗೆ ಸೀಮಿತವಾಗಿವೆಯೇ, ಬಸವಣ್ಣ ಇದನ್ನೇ ಬಯಸಿದ್ದರಾ? ಎಂದು ಪ್ರಶ್ನಿಸಿದರು.

ಬಸವಕಲ್ಯಾಣಕ್ಕೆ ಗತವೈಭವ ತಂದುಕೊಡಲಿರುವ ₹ 500 ಕೋಟಿ ವೆಚ್ಚದ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿರುವುದು ಸಂತಸದ ಸಂಗತಿಯಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗ್ಗೆ ಅಭಿಮಾನ, ಗೌರವ ಇದೆ. ಆದರೆ, ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅಸಮಾನತೆ, ಗೊಂದಲಗಳನ್ನು ಸೃಷ್ಟಿಸಿ ಮುಖ್ಯಮಂತ್ರಿಗೆ ಕೆಟ್ಟ ಹೆಸರು ತರಲು ಪ್ರಯತ್ನಿಸಲಾಗಿದೆ ಎಂದು ಹೇಳಿದರು.

ಅನುಭವ ಮಂಟಪದ ಕೆಲಸ ಬಸವಣ್ಣನವರ ಆಶಯಕ್ಕೆ ಅನುಗುಣವಾಗಿ ನಡೆಯಬೇಕು. ಕಾರ್ಯಕ್ರಮ ಹಾಗೂ ವೇದಿಕೆಯಲ್ಲಿನ ಬೆಳವಣಿಗೆಗಳು ಬಸವಣ್ಣನವರ ಆಶಯಕ್ಕೆ ವಿರುದ್ಧವಾಗಿ ನಡೆದಿದ್ದವು. ಆಯೋಜಕರು ಸಮಾಜದ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT