ಗುರುವಾರ , ಜನವರಿ 30, 2020
20 °C
‘ಪ್ರಜಾವಾಣಿ’ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ.ಗೌತಮ ಅರಳಿ

ಜಾನುವಾರು ಮಾಲೀಕರಿಗೆ ಭರಪೂರ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಜಿಲ್ಲೆಯ ಹವಾಗುಣ ಹೈನುಗಾರಿಕೆಗೆ ಅನುಕೂಲಕರವಾಗಿದೆ. ಮುಂಗಾರು ಅಷ್ಟೇ ಅಲ್ಲ, ಹಿಂಗಾರಿನಲ್ಲೂ ಸಾಕಷ್ಟು ಮೇವು ಬೆಳೆಯುವುದರಿಂದ ಹೈನುಗಾರಿಕೆ ಸುಲಭವಾಗಿದೆ. ಜಿಲ್ಲೆಯ ಕೃಷಿಕರು ಜಾನುವಾರು ಪಾಲನೆಯ ಮೂಲಕ ಅರ್ಥಿಕ ಅಭಿವೃದ್ಧಿ ಸಾಧಿಸಬಹುದು’ ಎನ್ನುವುದು ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ.ಗೌತಮ ಅರಳಿ ಅವರ ಸ್ಪಷ್ಟ ಮಾತು.

‘ಪ್ರಜಾವಾಣಿ’ ಬೀದರ್‌ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಫೋನ್‌– ಇನ್‌ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಎರಡು ಗಂಟೆ ಬಿಡುವಿಲ್ಲದಂತೆ ಅವರು ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಜನರ ಕರೆಗಳನ್ನು ಸ್ವೀಕರಿಸಿದರು. ಕೆಲ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಒದಗಿಸಿದರು. ಕಾರ್ಯಕ್ರಮ ನಡೆಯುತ್ತಿರುವಾಗಲೇ ಹುಮನಾಬಾದ್ ತಾಲ್ಲೂಕಿನ ಸಿಂದಬಂದಗಿ ಗ್ರಾಮಕ್ಕೆ ಪಶು ವೈದ್ಯರನ್ನು ಕಳಿಸಿ ಹಸುವಿಗೆ ಚಿಕಿತ್ಸೆ ಕೊಡಿಸಿದರು.

ಜನವರಿಯಲ್ಲಿ ಬೀದರ್‌ನಲ್ಲಿ ರಾಜ್ಯ ಮಟ್ಟದ ಪಶು ಮೇಳ ನಡೆಯಲಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಉತ್ತಮ ತಳಿಯ ಪಶುಗಳು ಮೇಳಕ್ಕೆ ಬರಲಿವೆ. ಜಾನುವಾರು ಮಾಲೀಕರು ಪಶುಗಳ ತಳಿ ಹಾಗೂ ಹೊಸ ತಂತ್ರಜ್ಞಾನಗಳ ಬಗ್ಗೆ ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.

ರೈತರು ಹಾಗೂ ಜಾನುವಾರು ಮಾಲೀಕರು ಕೇಳಿದ ಪ್ರಶ್ನೆಗಳು ಹಾಗೂ ಉಪ ನಿರ್ದೇಶಕರು ನೀಡಿದ ಉತ್ತರ ಇಲ್ಲಿವೆ.

ಶಿವಕುಮಾರ ಸ್ವಾಮಿ, ಬಾವಗಿ, ತಾ.ಬೀದರ್

ನಮ್ಮೂರಲ್ಲಿ ಸುಮಾರು 700 ಮನೆಗಳಿವೆ. ಎಮ್ಮೆ, ಆಕಳು, ಕುರಿ ಬಹಳಷ್ಟು ಸಂಖ್ಯೆಯಲ್ಲಿವೆ. ಪಶು ಆಸ್ಪತ್ರೆ ಇಲ್ಲದ ಕಾರಣ 8 ಕಿ.ಮೀ ದೂರದ ಸಂಗೋಳಗಿಗೆ ಹೋಗಬೇಕಾಗಿದೆ. ಗ್ರಾಮಕ್ಕೆ ಪಶು ಆಸ್ಪತ್ರೆ ಮಂಜೂರು ಮಾಡಬೇಕು.

ಐದರಿಂದ ಆರು ಸಾವಿರ ಜಾನುವಾರು ಇರುವ ಕಡೆ ಪಶು ಆಸ್ಪತ್ರೆ ಆರಂಭಿಸಬೇಕು ಎನ್ನುವ ನಿಯಮ ಇದೆ. ಜಿಲ್ಲೆಯಲ್ಲಿ ಜಾನುವಾರು ಸಂಖ್ಯೆಗಿಂತ ಹೆಚ್ಚು ಆಸ್ಪತ್ರೆಗಳು ಇವೆ. ಆದರೆ, ಗ್ರಾಮಕ್ಕೆ ವಾರದಲ್ಲಿ ಒಂದೆರಡು ಬಾರಿ ಪಶು ಆಸ್ಪತ್ರೆ ಸಿಬ್ಬಂದಿಯನ್ನು ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗುವುದು.

ಬಸಯ್ಯ ಸ್ವಾಮಿ, ಕಮಠಾಣ, ತಾ. ಬೀದರ್

ಗ್ರಾಮದ ಪಶು ಆಸ್ಪತ್ರೆಯಲ್ಲಿ ವೈದ್ಯರು ಇರುವುದೇ ಇಲ್ಲ. ಫೋನ್ ಮಾಡಲು ಹೇಳುತ್ತಿದ್ದಾರೆ. ಹಾಗಾದರೆ, ಜಾನುವಾರಿಗೆ ಚಿಕಿತ್ಸೆ ಕೊಡಿಸುವುದು ಹೇಗೆ?, ಜಾನುವಾರು ವಿಮೆ ಮಾಹಿತಿ ಪಡೆಯುವುದು ಹೇಗೆ?

ಪರಿಶೀಲನೆ ನಡೆಸಲಾಗುವುದು. ಕರ್ತವ್ಯ ಲೋಪ ಎಸಗಿದರೆ ಕಾರಣ ಕೇಳಿ ನೋಟಿಸ್ ಕೊಡಲಾಗುವುದು.

 ರಮೇಶ ಮೇತ್ರೆ, ಕಮಲನಗರ

ಪಶು ಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸುವುದು ಯಾವಾಗ?

ಯೋಜನೆಯಡಿ ಆಯ್ಕೆಗೆ ಅರ್ಜಿ ಸಲ್ಲಿಸುವ ಅವಧಿ ಸೆಪ್ಟೆಂಬರ್ 15ಕ್ಕೆ ಮುಗಿದಿದೆ. ಮುಂದಿನ ವರ್ಷ ಅರ್ಜಿ ಸಲ್ಲಿಸಬಹುದು.

ಆನಂದ ರೆಡ್ಡಿ, ಸಿಂದಬಂದಗಿ, ತಾ. ಹುಮನಾಬಾದ್

ಅಪಘಾತದಲ್ಲಿ ನನ್ನ ಎರಡು ಎಮ್ಮೆಗಳು ಸತ್ತಿವೆ. ಸರ್ಕಾರದಿಂದ ಪರಿಹಾರ ಸಿಗುವುದೇ?

ವಾಹನ ಡಿಕ್ಕಿ ಹೊಡೆದು ಮೃತಪಟ್ಟರೆ ಪೊಲೀಸ್ ಠಾಣೆಗೆ ದೂರು ಕೊಡಬೇಕು. ವಾಹನಕ್ಕೆ ವಿಮೆ ಇದ್ದರೆ ಜಾನುವಾರಿನ ಪೂರ್ಣ ಮೊತ್ತ ದೊರೆಯಲಿದೆ. ಯಾವ ವಾಹನ ಡಿಕ್ಕಿ ಹೊಡೆದಿದೆ ಎನ್ನುವುದು ಗೊತ್ತಾಗದಿದ್ದರೆ ಇಲಾಖೆ ₹10 ಸಾವಿರ ಪರಿಹಾರ ಕೊಡಲಿದೆ.

ಶಿವರಾಜ ಅಲ್ಮಾಜೆ, ಔರಾದ್

ಗೋ ಶಾಲೆಗಳಲ್ಲಿರುವ ಜಾನುವಾರುಗಳಿಗೆ ಮೇವು ಪೂರೈಸಲು ಅವಕಾಶ ಇದೆಯಾ?, ಅಲ್ಲಿಯ ಜಾನುವಾರು ಮೃತಪಟ್ಟರೆ ಪರಿಹಾರ ಸಿಗಲಿದೆಯಾ?

ಅದಕ್ಕೆ ಅವಕಾಶ ಇಲ್ಲ

ಸೋಮನಾಥ ಮೇತ್ರೆ, ರಕ್ಷಾಳ, ತಾ. ಔರಾದ್

ಕಳೆದ ವರ್ಷ ಪಶು ಭಾಗ್ಯ ಯೋಜನೆಯಡಿ ಆಯ್ಕೆಯಾಗಿದ್ದೇನೆ. ಆದರೆ, ಬ್ಯಾಂಕ್‍ನವರು ಸಾಲ ಮಂಜೂರಾತಿಗೆ ವಿಳಂಬ ಮಾಡುತ್ತಿದ್ದಾರೆ.

ಸಮಸ್ಯೆ ಪರಿಹರಿಸಲು ಸಂಬಂಧಪಟ್ಟವರ ಗಮನ ಸೆಳೆಯಲಾಗುವುದು.

ನಿರ್ಮಲಕಾಂತ ಪಾಟೀಲ, ಬ್ಯಾಲಹಳ್ಳಿ (ಡಬ್ಲ್ಯೂ), ತಾ. ಭಾಲ್ಕಿ

ಜಾನುವಾರು ವಿಮಾ ಕಂತು ಮೊತ್ತ ಎಷ್ಟಿರುತ್ತದೆ?

ಜಾನುವಾರಿನ ಮೌಲ್ಯದ ಶೇ 2 ರಷ್ಟು ವಿಮಾ ಕಂತು ಇರುತ್ತದೆ. ಉದಾ: ₹ 50 ಸಾವಿರ ಮೌಲ್ಯ ಇದ್ದರೆ ಒಂದು ಸಾವಿರ ಪಾವತಿಸಬೇಕಾಗುತ್ತದೆ. ಅದರಲ್ಲಿ ಶೇ 50 ರಷ್ಟು ಸಬ್ಸಿಡಿ ಇರುತ್ತದೆ. ಅಂದರೆ 500 ಪಾವತಿಸಬೇಕಾಗುತ್ತದೆ. ಇನ್ನು ಬಿಪಿಎಲ್ ಕುಟುಂಬಗಳು ₹300 ಮಾತ್ರ ಪಾವತಿಸಬೇಕಾಗಲಿದೆ.

ವೀರಭದ್ರಪ್ಪ ಉಪ್ಪಿನ್, ಬೀದರ್

ಬೀದರ್ ನಗರದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಇದನ್ನು ತಪ್ಪಿಸಲು ಕ್ರಮ ಕೈಗೊಳ್ಳಿ.

ಇದು ನಗರಸಭೆ ಜವಾಬ್ದಾರಿ. ನಗರಸಭೆಯವರ ಗಮನಕ್ಕೆ ತನ್ನಿ.

ಗುರುನಾಥ ರೆಡ್ಡಿ, ಅತಿವಾಳ, ತಾ. ಬೀದರ್

ಎರಡು ಗಿರ್ ಹಸು, ಮುರ್ರಾ ಎಮ್ಮೆ ತಂದಿದ್ದೇನೆ. ನಿರೀಕ್ಷೆಯಷ್ಟು ಹಾಲು ಕೊಡುತ್ತಿಲ್ಲ. ಏನಾದರೂ ಪರಿಹಾರ ಹೇಳಿ.

ಹೈನುರಾಸುಗಳಿಗೆ ಹೊಟ್ಟೆ ತುಂಬ ಆಹಾರ ಕೊಡಬೇಕು ಚೆನ್ನಾಗಿ ನೋಡಿಕೊಳ್ಳಬೇಕು ಅದಾಗಿಯೂ ಕಡಿಮೆ ಹಾಲು ಕೊಡುತ್ತಿದ್ದರೆ ಸಮಸ್ಯೆಯನ್ನು ಪಶು ವೈದ್ಯರ ಗಮನಕ್ಕೆ ತರಬೇಕು.

 ಬಾಲಾಜಿ ಕುಂಬಾರ, ಚಟ್ನಾಳ, ತಾ. ಔರಾದ್‌

ಪಶು ಭಾಗ್ಯ ಯೋಜನೆಯಡಿ ಫಲಾನುಭವಿಗಳನ್ನು ಹೇಗೆ ಆಯ್ಕೆ ಮಾಡುತ್ತೀರಿ?

ಪಶು ಭಾಗ್ಯ ಯೋಜನೆಯಡಿ ಯಾರೂ ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿದೆ. ಶಾಸಕರ ಅಧ್ಯಕ್ಷತೆಯ ಸಮಿತಿ ತೀರ್ಮಾನ ಕೈಗೊಳ್ಳಲಿದೆ.

ಸೋಮನಾಥ ಮೇತ್ರೆ, ರಕ್ಷಾಳ, ತಾ. ಔರಾದ್‌

ಹೈನುಗಾರಿಕೆಗೆ ಬ್ಯಾಂಕ್‌ಗಳು ಸಾಲ ಕೊಡುತ್ತಿಲ್ಲ, ಏನು ಮಾಡಬೇಕು?.

ನಬಾರ್ಡ್‌ ಯೋಜನೆಯಲ್ಲಿ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಅಭ್ಯರ್ಥಿಗೆ ಶೇಕಡ 25ರಷ್ಟು ಹಾಗೂ ಎಸ್‌ಸಿ, ಎಸ್‌ಟಿಗೆ ಶೇಕಡ 33 ರಷ್ಟು ರಿಯಾಯಿತಿ ದೊರೆಯಲಿದೆ. ನಿಯಮಾನುಸಾರ ಅರ್ಜಿ ಸಲ್ಲಿಸಿದರೆ ಬ್ಯಾಂಕ್‌ಗಳು ಸಾಲ ಕೊಡಲಿವೆ.

ಸಿದ್ರಾಮ ಪಾಟೀಲ, ಕೊಟಗ್ಯಾಳ, ತಾ.ಭಾಲ್ಕಿ

ಜಾನುವಾರುಗಳಿಗೆ ಕಾಲುಬಾಯಿ ರೋಗ ಬಂದಿದೆ, ಏನು  ಮಾಡಬೇಕು?

ಪ್ರತಿ ಆರು ತಿಂಗಳಿಗೆ ಒಮ್ಮೆ ಇಲಾಖೆಯಿಂದ ಉಚಿತ ಲಸಿಕೆ ಹಾಕಲಾಗುತ್ತಿದೆ. ಜರ್ಸಿ ಆಕಳಿಗೆ ಬೇಗ ರೋಗ ಬರುತ್ತದೆ. 10 ಲೀಟರ್‌ ಹಾಲು ಕೊಡುವ ಆಕಳು ಹಾಲನ್ನೇ ಕೊಡುವುದಿಲ್ಲ.

ಅವುಗಳಿಗೆ ಸರಿಯಾಗಿ ಪಶು ಆಹಾರ ಕೊಡಬೇಕು. ಕಾಲಕಾಲಕ್ಕೆ ಲಸಿಕೆ ಹಾಕಿಸಬೇಕು.

ನಾಯಿ, ಬೆಕ್ಕಿಗೆ ವಿಮೆ ಇದೆಯೇ?

‘ಪಶು ಸಂಗೋಪನಾ ಇಲಾಖೆಯಿಂದ ನಾಯಿ, ಬೆಕ್ಕಿಗೆ ಉಚಿತ ವಿಮೆ ಸೌಲಭ್ಯ ಲಭ್ಯವಿಲ್ಲ. ಶ್ವಾನಪ್ರಿಯರು ತಮ್ಮ ಸ್ವಂತ ಖರ್ಚಿನಲ್ಲಿ ಖಾಸಗಿಯಾಗಿ ವಿಮೆ ಮಾಡಲು ಅವಕಾಶ ಇದೆ’ ಎಂದು ಡಾ.ಗೌತಮ ಅರಳಿ ತಿಳಿಸಿದರು.

ಚಿಟಗುಪ್ಪ ತಾಲ್ಲೂಕಿನ ನಿರ್ಣಾದ ಎಂ.ಮಹೇಶ ಅವರು ‘ಪಶು ಸಂಗೋಪನಾ ಇಲಾಖೆಯಿಂದ ನಾಯಿ, ಬೆಕ್ಕಿಗೆ ವಿಮೆ ಸೌಲಭ್ಯ ಇದೆಯೇ, ಇದ್ದರೆ  ಮಾಹಿತಿ ಕೊಡಿ’ ಎಂದು ಪ್ರಶ್ನಿಸಿದಾಗ ಅವರು ಚುಟುಕಾಗಿ ಉತ್ತರಿಸಿದರು.

ಪ್ರತಿಕ್ರಿಯಿಸಿ (+)