ಶುಕ್ರವಾರ, ಮೇ 14, 2021
25 °C
ದುರಸ್ತಿಗೆ ಜಾಗೀರದಾರ್ ಆಗ್ರಹ

ರೋಗಿಗಳ ಸಂಕಷ್ಟ: ಸ್ಕ್ಯಾನಿಂಗ್ ಯಂತ್ರ ದುರಸ್ತಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಇಲ್ಲಿಯ ಬ್ರಿಮ್ಸ್ ಆಸ್ಪತ್ರೆಯಲ್ಲಿನ ಸಿಟಿ ಸ್ಕ್ಯಾನ್ ಯಂತ್ರ ಹಾಳಾದ ಕಾರಣ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಂಜಯ್ ಜಾಗೀರದಾರ್ ದೂರಿದ್ದಾರೆ.

‘ನಾಲ್ಕು ದಿನಗಳ ಹಿಂದೆ ಸಿಟಿ ಸ್ಕ್ಯಾನ್ ಯಂತ್ರ ಕೆಟ್ಟು ಹೋಗಿದೆ. ಹೊರಗಡೆ ಸಿಟಿ ಸ್ಕ್ಯಾನ್ ಮಾಡಿಸಿಕೊಂಡು ಬರಲು ವೈದ್ಯರು ಚೀಟಿ ಬರೆದುಕೊಡುತ್ತಿದ್ದಾರೆ’ ಎಂದು ಹೇಳಿದ್ದಾರೆ.

‘ಕೋವಿಡ್ ಸೋಂಕು ಖಚಿತಪಡಿಸುವಲ್ಲಿ ಸದ್ಯ ಸಿಟಿ ಸ್ಕ್ಯಾನ್ ವರದಿ ಪ್ರಮುಖವಾಗಿದೆ. ಖಾಸಗಿ ಕೇಂದ್ರಗಳಲ್ಲಿ ಸಿಟಿ ಸ್ಕ್ಯಾನ್ ಮಾಡಿಸಲು ₹4,500 ಶುಲ್ಕ ಪಡೆಯುತ್ತಿದ್ದು, ಬಡ ರೋಗಿಗಳು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಸಂಬಂಧಪಟ್ಟವರು ಕೂಡಲೇ ಸಿಟಿ ಸ್ಕ್ಯಾನ್ ಯಂತ್ರ ದುರಸ್ತಿಪಡಿಸಿ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಒತ್ತಾಯಿಸಿದ್ದಾರೆ.

‘ಬ್ರಿಮ್ಸ್ ಕೋವಿಡ್ ಆಸ್ಪತ್ರೆಯಲ್ಲಿ ಹಿರಿಯ ವೈದ್ಯರು ಸೋಂಕಿತರ ಆರೋಗ್ಯ ಸ್ಥಿತಿ ಪರಿಶೀಲಿಸುತ್ತಿಲ್ಲ. ಕೇವಲ ಸ್ಟಾಫ್‍ನರ್ಸ್‍ಗಳು ನಿರ್ವಹಿಸುತ್ತಿದ್ದಾರೆ. ವೈದ್ಯರಾರೂ ತಮ್ಮ ಬಳಿ ಬಂದು ಆರೋಗ್ಯ ವಿಚಾರಿಸದ ಕಾರಣ ರೋಗಿಗಳಲ್ಲಿ ಅಸುರಕ್ಷತೆ ಭಾವ ಕಾಡುತ್ತಿದೆ’ ಎಂದು ಹೇಳಿದ್ದಾರೆ.

‘ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚುತ್ತಿರುವುದರಿಂದ ಜನ ಆತಂಕದಲ್ಲಿ ಇದ್ದಾರೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್, ಬೆಡ್, ರೆಮ್‍ಡಿಸಿವಿರ್ ಕೊರತೆ ಇದೆ ಎನ್ನುವ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ. ಸಾರ್ವಜನಿಕರ ಮನೋಬಲ ವೃದ್ಧಿಗಾಗಿ ಜಿಲ್ಲೆಯ ಎಲ್ಲ ಕೋವಿಡ್ ಆಸ್ಪತ್ರೆಗಳಲ್ಲಿ ಲಭ್ಯ ಇರುವ ಬೆಡ್‍ಗಳ ಸಂಖ್ಯೆಯನ್ನು ನಿತ್ಯ ಫಲಕದ ಮೇಲೆ ಹಾಕಬೇಕು. ರೆಮ್‍ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

‘ಜಿಲ್ಲಾ ಆಸ್ಪತ್ರೆಯಲ್ಲಿ ಎನ್‍ಬಿಬಿಪಿ ಮಷೀನ್ ಇದ್ದರೂ, ಅದನ್ನು ನಡೆಸುವವರೇ ಇಲ್ಲದಿರುವುದು ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಸರ್ಕಾರ ಕೂಡಲೇ ಆಸ್ಪತ್ರೆಯ ವ್ಯವಸ್ಥೆಯನ್ನು ಸರಿಪಡಿಸಬೇಕು. ಕೋವಿಡ್ ಸೋಂಕಿತರಿಗೆ ಉತ್ತಮ ವೈದ್ಯಕೀಯ ಸೇವೆ ದೊರಕುವಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.