ಗುರುವಾರ , ಆಗಸ್ಟ್ 11, 2022
21 °C
ಜನವರಿ 5ರಂದು ಡಿಡಿಪಿಐ ಕಚೇರಿ ಎದುರು ಧರಣಿ ಸತ್ಯಾಗ್ರಹ

ಶಾಲೆ ಆರಂಭಕ್ಕೆ ಖಾಸಗಿ ಸಂಸ್ಥೆಗಳ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಪ್ರಾಥಮಿಕ ಶಾಲೆಗಳನ್ನು ಶೀಘ್ರ ಪ್ರಾರಂಭಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘ ಜನವರಿ 5ರಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದೆ.

ನಗರದ ಒಯಸ್ಟರ್ ಸ್ಕೂಲ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆದ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಭರಶೆಟ್ಟಿ ಈ ವಿಷಯ ತಿಳಿಸಿದರು.

ಬೇಡಿಕೆಗಳ ಕುರಿತು ಸರ್ಕಾರದ ಮೇಲೆ ಒತ್ತಡ ತರಲು ಜನವರಿಯಲ್ಲಿ ಆಯಾ ಶಾಸಕರ ಮನೆ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಕೊರೊನಾ ಪ್ರಭಾವ ಕಡಿಮೆಯಾಗಿದೆ. ಶಾಲೆಗಳಿಲ್ಲದ ಕಾರಣ ಮಕ್ಕಳು ಬಾಲ ಕಾರ್ಮಿಕರಾಗುತ್ತಿರುವ ವರದಿಗಳೂ ಇವೆ. ಹೀಗಾಗಿ ಕೊರೊನಾ ನಿಯಮಗಳ ಪಾಲನೆಯೊಂದಿಗೆ ಒಂದರಿಂದ 8ರ ವರೆಗಿನ ತರಗತಿಗಳನ್ನು ಕೂಡಲೇ ಆರಂಭಿಸಬೇಕು ಎಂದು ಆಗ್ರಹಿಸಿದರು.

ಶಾಲೆಗಳು ಆರಂಭವಾಗದ ಕಾರಣ ಖಾಸಗಿ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಚಟುವಟಿಕೆಗಳಿಗೆ ಆರ್ಥಿಕ ಸಮಸ್ಯೆ ಎದುರಿಸುತ್ತಿವೆ. ಸರ್ಕಾರ, 2019-20ನೇ ಸಾಲಿನ ಆರ್‌ಟಿಇ ಬಾಕಿ ಹಾಗೂ 2020-21ನೇ ಸಾಲಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಬೇಡಿಕೆ ಮಂಡಿಸಿದರು.

ಖಾಸಗಿ ಶಾಲೆಗಳು ಮುಚ್ಚಿದ್ದರಿಂದ ಶಿಕ್ಷಕರು ವೇತನ ಇಲ್ಲದೆ ಕುಟುಂಬ ನಿರ್ವಹಣೆಗೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವಿವಿಧ ವೃತ್ತಿ ನಿರತರ ಮಾದರಿಯಲ್ಲಿ ಖಾಸಗಿ ಶಿಕ್ಷಕರಿಗೂ ವಿಶೇಷ ಪ್ಯಾಕೇಜ್ ಪ್ರಕಟಿಸಬೇಕು. ಶಾಲಾ ನವೀಕರಣ ಸರಳೀಕರಿಸಬೇಕು. ಸಂವಿಧಾನದ 371(ಜೆ) ತಿದ್ದುಪಡಿ ಕಾಯ್ದೆ ಅಡಿ ಖಾಸಗಿ ಶಾಲಾ ಅಭಿವೃದ್ಧಿಗೆ ಅನುದಾನ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಮೇ ಅಂತ್ಯದೊಳಗೆ ಜಿಲ್ಲೆಯ 137 ಖಾಸಗಿ ಶಾಲೆಗಳನ್ನು ಮುಚ್ಚಲಾಗುವುದು ಎಂದು ಶಿಕ್ಷಣ ಸಚಿವರು ನೀಡಿರುವ ಹೇಳಿಕೆಯನ್ನು ಖಂಡಿಸಲಾಗುತ್ತದೆ. ಹಾಗೇನಾದರೂ ಆದಲ್ಲಿ ಜಿಲ್ಲೆಯ ಎಲ್ಲ ಖಾಸಗಿ ಅನುದಾನ ರಹಿತ ಶಾಲೆಗಳನ್ನು ಮುಚ್ಚಿ ಪ್ರತಿಭಟನೆ ನಡೆಸಲಾಗುವುದು ಎಂದು ಭರಶೆಟ್ಟಿ ಎಚ್ಚರಿಕೆ ನೀಡಿದರು.

ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಮುಕ್ರಂ ಪಟೇಲ್, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಬಸವರಾಜ ಶೆಟಕಾರ್, ಸುರೇಶ ಪಾಟೀಲ, ಅನೂಪ್ ಪಾಠಕ್, ಸುರೇಶ ಕುಂಬಾರ, ಪ್ರಮುಖರಾದ ರಾಜು ಮಣಗೇರೆ, ಸಲೀಂ ಪಾಶಾ, ಸಂದೀಪ ಶೆಟಕಾರ್, ಕಾಮಶೆಟ್ಟಿ ಚಿಕ್ಕಬಸೆ, ಚಂದ್ರಕಾಂತ ಪಾಟೀಲ, ಬಾಬು ಗೊಂಡ, ವೀರೇಶ ಯದಲಾಪುರ, ವಿಷ್ಣು ಬೋಲಸುರೆ, ಸಂಜೀವಕುಮಾರ ಶೆಟಕಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.