ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗವಂತನ ಸವಾಲು ಸ್ವೀಕರಿಸಿದ ಈಶ್ವರ

ಬಹಿರಂಗ ಚರ್ಚೆಗೆ ನವೆಂಬರ್ 5ರಂದು ಬೆಳಿಗ್ಗೆ 11 ಗಂಟೆಗೆ ಸಮಯ ನಿಗದಿ
Last Updated 25 ಅಕ್ಟೋಬರ್ 2020, 7:56 IST
ಅಕ್ಷರ ಗಾತ್ರ

ಬೀದರ್‌: ಸಂಸದ ಭಗವಂತ ಖೂಬಾ ಹಾಕಿರುವ ಸವಾಲನ್ನು ಸ್ವೀಕರಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಅಧ್ಯಕ್ಷ ಈಶ್ವರ ಖಂಡ್ರೆ, ಬಹಿರಂಗ ಚರ್ಚೆಗೆ ನವೆಂಬರ್ 5ರಂದು ಬೆಳಿಗ್ಗೆ 11ಕ್ಕೆ ಸಮಯ ನಿಗದಿಪಡಿಸಿದ್ದಾರೆ. ಬೀದರ್‌ನ ಜಿಲ್ಲಾ ರಂಗ ಮಂದಿರ ಅಥವಾ ಗಣೇಶ ಮೈದಾನ ಎಲ್ಲಿಯಾದರೂ ಬರಲಿ ಸಂಸದರ ಸವಾಲುಗಳಿಗೆ ಬಹಿರಂಗವಾಗಿ ಉತ್ತರಿಸಲು ಸಿದ್ಧ ಎಂದು ಪಂಥಾಹ್ವಾನ ನೀಡಿದ್ದಾರೆ.

ಸಾರ್ವಜನಿಕರು, ವಸತಿ ಯೋಜನೆ ಫಲಾನುಭವಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳ ಸಮ್ಮುಖದಲ್ಲೇ ಚರ್ಚೆಯಾಗಬೇಕು ಎಂದು ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಖೂಬಾ ಅವರಿಗೆ ಷರತ್ತು ಹಾಕಿದರು.

‘ಬಡವರ ಮನೆ ಕಸಿದುಕೊಂಡ ಖೂಬಾ ಅವರು ಬಹಿರಂಗ ವೇದಿಕೆಯಲ್ಲಿ ಉತ್ತರಿಸಬೇಕು. ಬೇಕಿದ್ದರೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ ಅವರನ್ನೂ ಜತೆಗೆ ಕರೆದುಕೊಂಡು ಬರಲಿ’ ಎಂದರು.

‘ಸಿಪೆಟ್‌ ಬೇರೆ ಕಡೆಗೆ ಸ್ಥಳಾಂತರ ಆಗಿದೆ. ಹೆದ್ದಾರಿ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಬೀದರ್– ಔರಾದ್‌ ರಸ್ತೆ ಬಂದ್‌ ಆಗಿದೆ. ಭೀಮಣ್ಣ ಖಂಡ್ರೆ ಅವರು ಸಲ್ಲಿಸಿರುವ ಸೇವೆಯಷ್ಟು ಖೂಬಾಗೆ ವಯಸ್ಸಿಲ್ಲ. ಭೀಮಣ್ಣ ಅವರ ಕೊಡುಗೆ ಬಗ್ಗೆ ಕೇಳುತ್ತಿರುವ ಖೂಬಾ ಅವರೇ ನಿಮಗೆ ನಾಚಿಕೆ, ಮಾನ, ಮರ್ಯಾದೆ ಇದೆಯೇ’ ಎಂದು ಪ್ರಶ್ನಿಸಿದರು.

‘ಜಿಲ್ಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ ಗಳು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ಕೊಡುತ್ತಿಲ್ಲ. ಖೂಬಾಗೆ ಈ ಬಗ್ಗೆ ಪ್ರಶ್ನಿಸುವ ಧೈರ್ಯವಿಲ್ಲ. ನನ್ನ ಪರಿವಾರದವರು ಗುತ್ತಿಗೆ ಕೆಲಸ ಮಾಡುತ್ತಿಲ್ಲ. ಅವರು ಯಾರೋ ಒಬ್ಬರು ಗುತ್ತಿಗೆದಾರರ ಪರವಾಗಿ ಮಾತನಾಡಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಬಟ್ಟೆ ತೊಳೆಯುವ ಗುತ್ತಿಗೆ ಪಡೆದವರು ನಿಮ್ಮ ಕುಟುಂಬದವರು. ಆದರೆ, ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದೀರಿ’ ಎಂದು ಹರಿಹಾಯ್ದರು.

‘ಖೂಬಾ, ಬೀದರ್ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಯೋಚಿಸುತ್ತಿಲ್ಲ. ಸಂಕಷ್ಟದಲ್ಲಿರುವ ರೈತರಿಗೆ ಅನುದಾನ ಬಿಡುಗಡೆ ಮಾಡಿಸಲು ಪ್ರಯತ್ನಿಸುವ ಬದಲು ಸೇಡಿನ ರಾಜಕೀಯ ಮಾಡಲು ಹೊರಟಿದ್ದಾರೆ’ ಎಂದು ಆರೋ‍ಪಿಸಿದರು.

ಖೂಬಾ ಪುಕ್ಕಲು ಸಂಸದ:‘ಜಿಲ್ಲೆಯಲ್ಲಿ ಮೂರು ಬಾರಿ ಅತಿವೃಷ್ಟಿಯಾದರೂ ಸಂಸದ ಖೂಬಾ ಅವರು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗೆ ವಿಶೇಷ ಪ್ಯಾಕೇಜ್‌ ಕೊಡುವಂತೆ ಒಮ್ಮೆಯೂ ಮನವಿ ಮಾಡದೆ ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಖೂಬಾ ಒಬ್ಬ ಪುಕ್ಕಲು ಸಂಸದ. ಕೇಂದ್ರ ಸರ್ಕಾರ ನೆರೆಯ ಮಹಾರಾಷ್ಟ್ರಕ್ಕೆ ₹10 ಸಾವಿರ ಕೋಟಿ ಬಿಡುಗಡೆ ಮಾಡಿದೆ. ಆದರೆ ರಾಜ್ಯದಲ್ಲಿ ಪರಿಹಾರ ಕಾರ್ಯ ಶೂನ್ಯವಾಗಿದೆ. ಲಾಟರಿ ಹೊಡೆದಂತೆ ಎರಡು ಬಾರಿ ಸಂಸದರಾಗಿರುವ ಅವರ ಸಾಧನೆ ಶೂನ್ಯ. ಖೂಬಾ ಅವರಿಗೆ ಭೀಮಣ್ಣ ಖಂಡ್ರೆ ಅವರ ಬಗ್ಗೆ ಮಾತನಾಡುವ ಯಾವ ಯೋಗ್ಯತೆಯೂ ಇಲ್ಲ’ ಎಂದರು.

‘ಭೀಮಣ್ಣ ಖಂಡ್ರೆ ಅವರು ಪ್ರಚಾರಕ್ಕೆ ಎಲ್ಲರಿಗೂ ಹೇಳಿಕೊಂಡು ಕೆಲಸ ಮಾಡಿಲ್ಲ. ನಿಜಾಮರ ವಿರುದ್ಧ ಹೋರಾಟ ನಡೆಸಿ ಸ್ವಾತಂತ್ರ್ಯ ಪಡೆಯುವಲ್ಲಿ ಹಾಗೂ ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪಾಲ್ಗೊಂಡಿದ್ದು ಜಿಲ್ಲೆಯ ಜನತೆಗೆ ತಿಳಿದಿದೆ. ಲಿಂಗಾಯತರಿಗೆ ಖಂಡ್ರೆ ಕುಟುಂಬದ ಕೊಡುಗೆ ಏನು ಎಂದು ಖೂಬಾ ಪ್ರಶ್ನಿಸಿದ್ದಾರೆ. ಬಸವ ತತ್ವದ ಅಡಿಯಲ್ಲಿ ಬದುಕು ಸಾಗಿಸಿರುವ ಅವರು ಒಂದು ಜಾತಿಗೆ ಸೀಮಿತವಾಗಿ ಕೆಲಸ ಮಾಡಿಲ್ಲ’ ಎಂದು ತಿರುಗೇಟು ನೀಡಿದರು.

‘ಎಲ್ಲ ಜಾತಿ ಧರ್ಮದವರ ಏಳ್ಗೆಗೆ ಶ್ರಮಿಸಿದ್ದಾರೆ. ಬಿಎಸ್‌ಎಸ್‌ಕೆ, ಮಹಾತ್ಮ ಸಹಕಾರ ಸಕ್ಕರೆ, ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅನುಭವ ಮಂಟಪ ಯಾವಾಗ ಶುರುವಾಯಿತು ಎನ್ನುವುದೂ ಖೂಬಾಗೆ ಗೊತ್ತಿಲ್ಲ. 1955ರಲ್ಲಿ ಜಯ ಚಾಮರಾಜ ಒಡೆಯರ ಶಂಕುಸ್ಥಾಪನೆ ನೆರವೇರಿಸಿದ್ದಾರೆ. 1972ರಲ್ಲಿ ಮುರುಘಾಮಠದ ಮಹಾಂತಪ್ಪ ಅವರು ಚೆನ್ನಬಸವ ಪಟ್ಟದ್ದೇವರಿಗೆ ಪೂರ್ಣಗೊಳಿಸಲು ಮನವಿ ಮಾಡಿದ್ದರು. ಹೀಗಾಗಿ ಭಾಲ್ಕಿಯಿಂದ ಬಸವಕಲ್ಯಾಣದ ವರೆಗೆ ಚೆನ್ನಬಸವ ಪಟ್ಟದ್ದೇವರು ಹಾಗೂ ಭೀಮಣ್ಣ ಖಂಡ್ರೆ ಪಾದಯಾತ್ರೆ ಮಾಡಿದ್ದರು. ಶ್ರೀಗಳು ತಪೋನಿಷ್ಠೆ ಕೈಗೊಂಡಿದ್ದರು. ಆಗ ಭೀಮಣ್ಣ ಖಂಡ್ರೆ ಅವರು ₹ 25 ಸಾವಿರ ಮೊತ್ತದ ಚೆಕ್‌ ಕೊಟ್ಟಿದ್ದರು. ಬಸವ ಸಮಿತಿಯಿಂದಲೂ ದೇಣಿಗೆ ಕೊಡಲಾಗಿತ್ತು’ ಎಂದು ತಿಳಿಸಿದರು.

‘ನಾನು ಪೌರಾಡಳಿತ ಸಚಿವನಾಗಿ ದ್ದಾಗ ಅನುಭವ ಮಂಟಪದ ಅಭಿವೃದ್ಧಿಗೆ ಯೋಜನೆ ರೂಪಿಸಿದೆ. ಗೊ.ರು. ಚನ್ನಬಸಪ್ಪ ಅವರ ಮನೆಗೆ ಹೋಗಿ ಮನವಿಯನ್ನೂ ಮಾಡಿಕೊಂಡಿದ್ದೆ. ಶಾಸಕರಾದ ರಾಜಶೇಖರ ಪಾಟೀಲ, ರಹೀಂ ಖಾನ್ ಹಾಗೂ ಮಲ್ಲಿಕಾರ್ಜುನ ಖೂಬಾ ಅವರು ಸಭೆಯಲ್ಲಿ ಪಾಲ್ಗೊಂಡು ಬೆಂಬಲ ನೀಡಿದ್ದರು. ಆದರೆ, ಭಗವಂತ ಖೂಬಾ ಅನುಭವ ಮಂಟಪದ ಒಂದು ಸಭೆಗೂ ಹಾಜರಾಗಿರಲಿಲ್ಲ’ ಎಂದು ಹೇಳಿದರು.

‘2018ರಲ್ಲಿ ಸರ್ಕಾರ ಅನುಭವ ಮಂಟಪಕ್ಕೆ ಅನುದಾನ ಕೊಡುವ ಭರವಸೆ ಕೊಟ್ಟಿತ್ತು. ಆದರೆ, ಆಪರೇಷನ್‌ ಕಮಲದ ನಂತರ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರ ₹100 ಕೋಟಿ ಬಿಡುಗಡೆ ಮಾಡಿದೆ ಎಂದು ಖೂಬಾ ಹೇಳುತ್ತಿದ್ದಾರೆ. ಈ ಹಣ ಎಲ್ಲಿದೆ’ ಎಂದು ಪ್ರಶ್ನಿಸಿದರು.

‘ಸಚಿವನಾಗಿದ್ದಾಗ 22 ತಿಂಗಳಲ್ಲಿ ಬೀದರ್‌ಗೆ ₹112 ಕೋಟಿ ಹಾಗೂ ಬಸವಕಲ್ಯಾಣಕ್ಕೆ ₹ 54.40 ಕೋಟಿ ಕೊಟ್ಟಿದ್ದೆ. ನನ್ನ ಅಧಿಕಾರವಧಿಯಲ್ಲಿ ಬಿಡುಗಡೆಯಾದ ಅನುದಾನದಲ್ಲೇ ಇನ್ನೂ ಕೆಲಸಗಳು ನಡೆಯುತ್ತಿವೆ. ನೌಬಾದ್‌ನಿಂದ ಹೈದರಾಬಾದ್‌ ರಸ್ತೆ ವರೆಗೆ ರಸ್ತೆ ಮಾಡಲು ಅನುದಾನ ಒದಗಿಸಿದ್ದೆ. ಬೀದರ್‌ ರಿಂಗ್‌ ರಸ್ತೆ ಪ್ರಸ್ತಾವ ಮಾಡಿದ್ದೇ ನಾನು ಹಾಗೂ ರಾಜಶೇಖರ’ ಎಂದು ತಮ್ಮ ಅಧಿಕಾರವಧಿಯಲ್ಲಿನ ಕೊಡುಗೆಯನ್ನು ವಿವರಿಸಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT