ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಡಿಸಿಸಿ ಬ್ಯಾಂಕ್ ಮೇಲೆ ಐ.ಟಿ. ಅಧಿಕಾರಿಗಳ ದಾಳಿ

Published 12 ಏಪ್ರಿಲ್ 2024, 10:21 IST
Last Updated 12 ಏಪ್ರಿಲ್ 2024, 10:21 IST
ಅಕ್ಷರ ಗಾತ್ರ

ಬೀದರ್: ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಖಾತೆ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಸಹೋದರ ಅಧ್ಯಕ್ಷರಾಗಿರುವ ನಗರದ ಬೀದರ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ (ಡಿಸಿಸಿ) ಮೇಲೆ ಆದಾಯ ತೆರಿಗೆ (ಐ.ಟಿ) ಇಲಾಖೆಯ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ.

ಕಲಬುರಗಿ, ಯಾದಗಿರಿ ಹಾಗೂ ತೆಲಂಗಾಣದ ಅಧಿಕಾರಿಗಳನ್ನು ಒಳಗೊಂಡ ತಂಡದ ಸುಮಾರು 15 ಅಧಿಕಾರಿಗಳು ಬ್ಯಾಂಕ್ ಮೇಲೆ ದಾಳಿ ನಡೆಸಿದ್ದು, ಬ್ಯಾಂಕಿನ ಮುಖ್ಯ ದ್ವಾರಗಳಿಗೆ ಬೀಗ ಜಡಿದು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಬ್ಯಾಂಕಿನ ಅಧಿಕಾರಿ, ಸಿಬ್ಬಂದಿಯ ಮೊಬೈಲ್ ಗಳನ್ನು ಜಪ್ತಿ ಮಾಡಿದ್ದಾರೆ. ಒಳಗಿನಿಂದ ಹೊರಗೆ, ಹೊರಗಿನಿಂದ ಒಳಗೆ ಯಾರಿಗೂ ಬಿಡುತ್ತಿಲ್ಲ. ಪ್ರವೇಶ ದ್ವಾರದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಸಚಿವ ಈಶ್ವರ ಖಂಡ್ರೆಯವರ ಮಗ ಸಾಗರ್ ಖಂಡ್ರೆ ಬೀದರ್ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ಸಚಿವರ ಸಹೋದರ ಅಮರಕುಮಾರ್ ಖಂಡ್ರೆ ಬ್ಯಾಂಕಿನ ಅಧ್ಯಕ್ಷರಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಬೇಕಾಬಿಟ್ಟಿ ಸಾಲ ನೀಡಲಾಗುತ್ತಿದೆ ಎಂಬ ಆರೋಪಗಳ ಮೇರೆಗೆ ಈ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

2023ರ ಅಕ್ಟೋಬರ್ ನಲ್ಲಿ ನಡೆದ ಚುನಾವಣೆಯಲ್ಲಿ‌ ಅಮರಕುಮಾರ್ ಖಂಡ್ರೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದರೊಂದಿಗೆ ಖಂಡ್ರೆ ಹಿಡಿತನಕ್ಕೆ ಬ್ಯಾಂಕ್ ಬಂದಿತ್ತು. ಆ ಚುನಾವಣೆಯಲ್ಲಿ ಹಾಲಿ ಸಂಸದರೂ ಆದ ಕೇಂದ್ರ ಸಚಿವ ಭಗವಂತ ಖೂಬಾ ಅವರು ಖಂಡ್ರೆ ವಿರೋಧಿ ಬಣವನ್ನು ಬೆಂಬಲಿಸಿದ್ದರು. ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡೆ ಈ ದಾಳಿ ನಡೆಸಲಾಗಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.

ಡಿಸಿಸಿ ಬ್ಯಾಂಕ್ ಮೇಲೆ ಆದಾಯ ತೆರಿಗೆ ಇಲಾಖೆಯವರು ದಾಳಿ ನಡೆಸಿದ್ದಾರೆ. ಪೊಲೀಸ್ ಬಂದೋಬಸ್ತ್ ಕೇಳಿದ್ದರಿಂದ ಒದಗಿಸಲಾಗಿದೆ. ಒಳಗೇನು ನಡೆಯುತ್ತಿದೆ ನಮಗೆ ಗೊತ್ತಿಲ್ಲ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT