ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಂಗಮರು ಪರಿಶಿಷ್ಟ ಜಾತಿ ಪ್ರಮಾಣಪತ್ರಕ್ಕೆ ಅರ್ಹರಲ್ಲ

ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಸಿಎಂ ಭೇಟಿ: ಖಂಡನೆ
Last Updated 4 ಫೆಬ್ರುವರಿ 2021, 14:16 IST
ಅಕ್ಷರ ಗಾತ್ರ

ಬೀದರ್‌: ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ನೇತೃತ್ವದ ನಿಯೋಗವು ವೀರಶೈವ ಪಂಗಡಕ್ಕೆ ಸೇರಿದ ಬೇಡ ಜಂಗಮರಿಗೆ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿರುವುದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಖಂಡಿಸಿದ್ದಾರೆ.

ದೇಶದಲ್ಲಿ 1,500 ಜಾತಿಗಳು ಪರಿಶಿಷ್ಟ ಜಾತಿ ಹಾಗೂ 1,000 ಜಾತಿಗಳು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿವೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 101 ಜಾತಿಗಳು ಇವೆ. ಅಳಿಲು, ನರಿಯನ್ನು ಆಹಾರವಾಗಿ ಸೇವಿಸುತ್ತಿದ್ದ ಬುಡ್ಗ ಜಂಗಮರು ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆಯಲು ಅರ್ಹರಾಗಿದ್ದಾರೆ ಎಂದು ತಿಳಿಸಿದ್ದಾರೆ.

ವೀರಶೈವ, ಲಿಂಗಾಯತರು ರಾಜ್ಯದಲ್ಲಿ ಹಿಂದುಳಿದ ವರ್ಗಗಳ (3ಬಿ) ಗುಂಪಿನಲ್ಲಿ ಮೀಸಲಾತಿ ಪಡೆಯುತ್ತಿದ್ದಾರೆ. ವೀರಶೈವ–ಲಿಂಗಾಯತರಲ್ಲಿನ ಜಂಗಮರು ಪರಿಶಿಷ್ಟರಲ್ಲ. ಜಂಗಮ ಜಾತಿಯ ಕೆಲವರು ಅವರ ಜಾತಿಗಳಿಗೆ ಸೇರಿದವರ ಮನೆಗಳಲ್ಲಿ ಮಾತ್ರ ಭಿಕ್ಷೆ ಬೇಡುವ ಪದ್ಧತಿ ಇದೆ. ಕೆಲವರು ಜಂಗಮ ಪದದ ದುರ್ಬಳಕೆ ಮಾಡಿಕೊಂಡು ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕೆಲವರು ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಪರಿಶಿಷ್ಟರಿಗೆ ಮಿಸಲಾತಿಯಲ್ಲಿ ಸಿಗಬೇಕಾದ ಕಾಲೇಜು ಸೀಟುಗಳು, ಶಿಷ್ಯವೇತನ, ಸರ್ಕಾರಿ ಉದ್ಯೋಗ ಗಿಟ್ಟಿಸಿ ಪರಿಶಿಷ್ಟರಿಗೆ ಅನ್ಯಾಯ ಮಾಡಿದ್ದಾರೆ. ವೀರಭದ್ರ ಚನ್ನಮಲ್ಲ ಸ್ವಾಮೀಜಿ ಪ್ರಗತಿಪರರೆಂದು ಸುಳ್ಳು ಹೇಳಿಕೊಂಡು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಯಾವ ಕಾರಣಕ್ಕೂ ವೀರಶೈವ ಪಂಗಡದ ಜಂಗಮರಿಗೆ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಕೊಟ್ಟು ಪರಿಶಿಷ್ಟರಿಗೆ ಅನ್ಯಾಯ ಮಾಡಬಾರದು ಎಂದು ಕೆಡಿಎಸ್‌ಎಸ್‌ ಜಿಲ್ಲಾ ಸಂಚಾಲಕ ಉಮೇಶಕುಮಾರ ಸ್ವಾರಳ್ಳಿಕರ್, ಡಿಎಸ್‌–4 ರಾಜ್ಯ ಉಪಾಧ್ಯಕ್ಷ ರಾಜಕುಮಾರ ಮೂಲಭಾರತಿ, ಅಂಬೇಡ್ಕರ್‌ ಯುವ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ ನಿರಾಟೆ, ಡಿಎಸ್‌ಎಸ್‌ಕೆ(ಭೀಮಮಾರ್ಗ) ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಚಿಟ್ಟಾ, ಭೋವಿ ವಡ್ಡರ ಸಮಾಜ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಸಂತೋಷ ಏಣಕೂರೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT