ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಲಸೂರ | ವಿದ್ಯುತ್ ಮಾರ್ಗ ನಿರ್ವಹಣೆಗೆ ಜೆಸ್ಕಾಂ ನಿರ್ಲಕ್ಷ್ಯ: ಸಾರ್ವಜನಿಕರ ಆರೋಪ

ಗುರುಪ್ರಸಾದ ಮೆಂಟೇ
Published : 9 ಸೆಪ್ಟೆಂಬರ್ 2024, 4:20 IST
Last Updated : 9 ಸೆಪ್ಟೆಂಬರ್ 2024, 4:20 IST
ಫಾಲೋ ಮಾಡಿ
Comments

ಹುಲಸೂರ: ಒಂದೆಡೆ ಬಾಗಿದ ವಿದ್ಯುತ್‌ ಕಂಬಗಳು, ಜಮೀನುಗಳಲ್ಲಿ ಕೈಗೆಟುಕುವಷ್ಟು ಜೋತು ಬಿದ್ದ ತಂತಿಗಳು, ಬಳ್ಳಿ ಆವರಿಸಿದ ವಿದ್ಯುತ್‌ ಕಂಬ– ಪರಿವರ್ತಕಗಳು, ಅಪಾಯ ಆಹ್ವಾನಿಸುವ ಫೀಡರ್‌ ಪಿಲ್ಲರ್‌ ಡಬ್ಬಗಳು, ಮರ–ಗಿಡಗಳ ಟೊಂಗೆಗಳನ್ನು ಮುತ್ತಿಕ್ಕುವ ವಿದ್ಯುತ್‌ ತಂತಿಗಳು...

ಮತ್ತೊಂದೆಡೆ ಅನಿಯಮಿತ ವಿದ್ಯುತ್ ಕಡಿತ, ವಿದ್ಯುತ್‌ ಪರಿವರ್ತಕಗಳ ದುರಸ್ತಿಗೆ ನಿರ್ಲಕ್ಷ್ಯ, ವಾಲಿದ ಕಂಬಗಳ ಸರಿಪಡಿಸಲು ಮೀನಮೇಷ, ಗ್ರಾಮೀಣ ಭಾಗದ ಸಮಸ್ಯೆ ಪರಿಹಾರಕ್ಕೆ ಸಿಗದ ಆದ್ಯತೆ, ವಿದ್ಯುತ್‌ ಪೂರೈಕೆ ಮಾರ್ಗಗಳ ನಿರ್ವಹಣೆ ನಿರ್ಲಕ್ಷ್ಯ...

ಹೀಗೆ ಜೆಸ್ಕಾಂ ವಿರುದ್ಧದ ಸಾರ್ವಜನಿಕರ ದೂರುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಸರಣಿ ಪ್ರತಿಭಟನೆಗಳು, ಜನರಿಂದ ದೂರುಗಳು ದಾಖಲಾದರೂ, ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂಬ ಆರೋಪಗಳಿವೆ.

ಉತ್ತಮ ಮಳೆಯಿಂದಾಗಿ ವಿದ್ಯುತ್‌ ಕೊರತೆ ಇಲ್ಲದಿದ್ದರೂ, ವಿತರಣೆ ಜಾಲದಲ್ಲಿ ಲೋಪವಿದೆ. ಅದರ ಫಲವಾಗಿ ಗ್ರಾಮೀಣ ಜನ ತೊಂದರೆ ಅನುಭವಿಸುತ್ತಿದ್ದಾರೆ. ವಿದ್ಯುತ್ ಕಂಬಗಳು, ಪರಿವರ್ತಕಗಳು ಹಾಗೂ ತಂತಿಗಳ ನಿರ್ವಹಣೆಯಲ್ಲಿ ತಾಲ್ಲೂಕಿನಲ್ಲಿ ಜೆಸ್ಕಾಂ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಬಲಿ ಪಡೆಯಲು ಕಾದಿರುವ ಮೃತ್ಯು ತಾಣಗಳಾಗಿ ಈ ಸ್ಥಳಗಳು ಕಾಣುತ್ತವೆ. ಆದರೆ ಜೆಸ್ಕಾಂ ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಜಾಣ ಕುರುಡತನ ಪ್ರದರ್ಶಿಸುತ್ತಿದ್ದಾರೆ.

‘ಮಳೆಗಾಲದಲ್ಲಿ ವಿದ್ಯುತ್ ಅಪಾಯ ತುಸು ಹೆಚ್ಚು. ಮಳೆ ಬಂದಾಗ ಮರದ ರೆಂಬೆ–ಕೊಂಬೆಗಳು ತಂತಿಗಳಿಗೆ ತಾಕಿ ಬೆಂಕಿ ಕಾಣಿಸುವುದು ಸಾಮಾನ್ಯ. ಈ ಬಗ್ಗೆ ತಿಳಿದಿದ್ದರೂ ಜೆಸ್ಕಾಂ ನಿರ್ಲಕ್ಷ್ಯವಹಿಸಿದೆ. ಅವಘಡ ಸಂಭವಿಸಿದ ನಂತರ ಸ್ಥಳಕ್ಕೆ ದೌಡಾಯಿಸುವ ಅಧಿಕಾರಿಗಳು, ಅವಘಡ ನಡೆಯುವ ಮುನ್ನವೇ ಎಚ್ಚರಿಕೆಯ ಕ್ರಮಗಳನ್ನು ಕೈಗೊಂಡರೆ ಅನಾಹುತ ತಡೆಯಬಹುದು’ ಎಂಬುದು ಸಾರ್ವಜನಿಕರ ಅಭಿಪ್ರಾಯ.

ಅಸಮರ್ಪಕ ನಿರ್ವಹಣೆ:

ಪಟ್ಟಣ ಸೇರಿದಂತೆ ಬೇಲೂರ, ಹುಲಸೂರ, ಮೀರಖಲ, ಗೋರಟಾ, ಗಡಿಗೌಡಗಾಂವ್, ಮುಚಳಂಬ, ತೊಗಲುರ ಗ್ರಾಮ ಪಂಚಾಯಿತಿಗಳ ಉಪವಿಭಾಗಮಟ್ಟದ ಬಹುತೇಕ ರೈತರ ಜಮೀನು, ರಸ್ತೆ, ಬೀದಿಗಳಲ್ಲಿ ಅಸಮರ್ಪಕ ನಿರ್ವಹಣೆಯಿಂದಾಗಿ ವಿದ್ಯುತ್ ಕಂಬಗಳು ಬಾಗಿವೆ. ಅವಘಡಕ್ಕೆ ಆಹ್ವಾನ ನೀಡುತ್ತಿವೆ. ಕೆಲವೆಡೆ ಬೆಳೆಗಳು ಸುಟ್ಟ ಉದಾಹರಣೆಯೂ ಇವೆ. ದುರಸ್ತಿಪಡಿಸುವಂತೆ ತಿಳಿಸಿದರೂ ಕ್ರಮವಾಗದೆ ಅವಘಡಗಳು ಸಂಭವಿಸಿವೆ ಎನ್ನುತ್ತಾರೆ ಸಾರ್ವಜನಿಕರು.

‘ಕೆಲವೆಡೆ ಟಿಸಿ ಸುಟ್ಟರೂ ಜೆಸ್ಕಾಂನಿಂದ ತಕ್ಷಣ ಸ್ಪಂದನೆ ಸಿಗುತ್ತಿಲ್ಲ. ಕಚೇರಿಗೆ ಮನವಿ ಸಲ್ಲಿಸಿದರೂ ಪರಿಶೀಲಿಸಲ್ಲ. ಟಿಸಿಗಳ ಅವಾಂತರದಿಂದ ಬೆಂಕಿ ತಗುಲಿ ಬೆಳೆಗಳು ನಾಶವಾದ ಮತ್ತು ರೈತರು ನಷ್ಟ ಅನುಭವಿಸಿದ ಉದಾಹರಣೆಗಳಿಗೆ ಲೆಕ್ಕವಿಲ್ಲ’ ಎಂಬುದು ರೈತ ಸಂಘಟನೆ ಮುಖಂಡ ದೇವೇಂದ್ರ ಹಲಿಂಗೇ ದೂರು.

‘ಪಟ್ಟಣದ ಸರ್ವೆ ನಂಬರ್ 398ರ ಹೊಲ– ಗದ್ದೆಗಳಲ್ಲಿ ಹಲವೆಡೆ ವಿದ್ಯುತ್ ಕಂಬಗಳು ವಾಲಿವೆ. ತಂತಿಗಳು ಜೋತು ಬಿದ್ದಿದ್ದು, ರೈತರ ಆತಂಕಕ್ಕೆ ಕಾರಣವಾಗಿ ಅಪಾಯ ಆಹ್ವಾನಿಸುತ್ತಿವೆ. ಅವುಗಳನ್ನು ತಕ್ಷಣ ಸರಿಪಡಿಸಬೇಕು’ ಎಂದು ರೈತರಾದ ಶಿವಾಜಿ ನಾರಾಯಣ ಗಿರಿ, ವೈಜಿನಾಥ ಸ್ವಾಮಿ ಆಗ್ರಹಿಸಿದರು.

ಅಸಮರ್ಪಕ ಜಂಗಲ್‌ ಕಟಿಂಗ್‌:

ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಬಹುತೇಕ ವಿದ್ಯುತ್‌ ಮಾರ್ಗ ಹೊಲಗಳು ಹಾಗೂ ಅರಣ್ಯ ಪ್ರದೇಶದಲ್ಲಿದೆ. ಜಂಗಲ್‌ ಕಟಿಂಗ್ ಸಮರ್ಪಕವಾಗಿ ನಡೆಯದ ಕಾರಣ ಗುಣಮಟ್ಟದ ವಿದ್ಯುತ್ ಪೂರೈಕೆ ಸವಾಲಾಗಿದೆ.

‘ಗ್ರಾಮೀಣ ಭಾಗದಲ್ಲಿ ವಿದ್ಯುತ್ ತಂತಿಗೆ ಧಕ್ಕೆಯಾದರೆ ಎರಡ್ಮೂರು ದಿನ ವಿದ್ಯುತ್ ಕಡಿತವಾಗುತ್ತದೆ. ಮಳೆಗಾಲದಲ್ಲಿ ಈ ಸಮಸ್ಯೆ ಹೆಚ್ಚು. ಎಲ್ಲಿ ಸಮಸ್ಯೆಯಾಗಿದೆ ಎಂಬುದನ್ನು ಹುಡುಕುವುದರಲ್ಲೇ ದಿನಗಳು ಕಳೆಯುತ್ತವೆ. ಹೀಗಾಗಿ ಜಂಗಲ್ ಕಟಿಂಗ್ ಕಾರ್ಯ ಮಾಡುವಾಗಲೇ ವ್ಯವಸ್ಥಿತವಾಗಿ ಮಾಡಬೇಕು. ಇಲ್ಲವಾದರೆ ನಿರಂತರ ವಿದ್ಯುತ್ ಪೂರೈಕೆ ಕನಸಿನ ಮಾತು’ ಎಂಬುದು ಗ್ರಾಮೀಣ ಭಾಗದ ಜನರ ಅಂಬೋಣ.

ಹುಲಸೂರ ರೈತ ಶಿವಾಜಿ ನಾರಾಯಣ ಗಿರಿ ಅವರ ಹೊಲದಲ್ಲಿ ಬಾಗಿರುವ ವಿದ್ಯುತ್ ಕಂಬಗಳು
ಹುಲಸೂರ ರೈತ ಶಿವಾಜಿ ನಾರಾಯಣ ಗಿರಿ ಅವರ ಹೊಲದಲ್ಲಿ ಬಾಗಿರುವ ವಿದ್ಯುತ್ ಕಂಬಗಳು
ಈಗಾಗಲೇ ಜಂಗಲ್ ಕಟಿಂಗ್ ಕಾರ್ಯವನ್ನು ಗುತ್ತಿಗೆದಾರರಿಗೆ ವಹಿಸಲಾಗಿದೆ. ನಮ್ಮ ಗಮನಕ್ಕೆ ಬಾರದ ಸಮಸ್ಯೆಗಳು ಇದ್ದರೆ ಅವುಗಳನ್ನು ಪತ್ತೆಮಾಡಿ ಆದಷ್ಟು ಬೇಗ ಪರಿಹರಿಸಲಾಗುವುದು
ಗಣಪತಿ ಮೈನಾಳೆ ಜೆಸ್ಕಾಂ ಎಇಇ ಹುಲಸೂರ
ನನ್ನ ಹೊಲದಲ್ಲಿ ವಿದ್ಯುತ್ ಕಂಬ ಶಿಥಿಲವಾಗಿದೆ. ತಂತಿಗಳು ಕೈಗೆ ತಾಕುವಷ್ಟು ಜೋತುಬಿದ್ದಿವೆ. ಉಳುಮೆ ಮಾಡಲಾದ ಸ್ಥಿತಿಯಿದೆ. ನಾವೇ ಕಟ್ಟಿಗೆ ಮೂಲಕ ತಂತಿಗಳು ತಾಕದಂತೆ ಮೇಲೆತ್ತಿ ನಿಲ್ಲಿಸಿದ್ದೇವೆ
ಶಿವಾಜಿ ನಾರಾಯಣ ಗಿರಿ ರೈತ ಹುಲಸೂರ
ಬಳ್ಳಿಗಳು ಬೆಳೆದು ವಿದ್ಯುತ್ ಕಂಬಗಳನ್ನು ಆವರಿಸಿವೆ. ಲೈನ್ ಮೇಲೆ ಮರಗಳ ಟೊಂಗೆಗಳು ಚಾಚಿವೆ. ಇದರಿಂದ ಗ್ರಾಮೀಣ ಭಾಗಕ್ಕೆ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ
ಆಕಾಶ ಖಂಡಾಳೇ ಸಾಮಾಜಿಕ ಕಾರ್ಯಕರ್ತ
ಕಡಿದು ಬಿದ್ದ ಜೋತು ಬಿದ್ದ ವಿದ್ಯುತ್ ತಂತಿಯಿಂದ ಹೊಲಗಳಲ್ಲಿ ಜಿಂಕೆ ಇತರೆ ಜಾನುವಾರುಗಳಿಗೆ ಅವಘಡ ಸಂಭವಿಸಿದರೆ ಯಾರು ಹೊಣೆ? ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮವಹಿಸಬೇಕು
ಸಿದ್ರಾಮ ಕಾಮಣ್ಣ ಅಧ್ಯಕ್ಷ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ
‘ಕತ್ತಲೆ ನೀಗಿದ ನಿರಂತರ ಜ್ಯೋತಿ’
‘ತಾಲ್ಲೂಕಿನಲ್ಲಿ ರೈತರ ಜಮೀನುಗಳಲ್ಲಿರುವ ಪಂಪ್‌ಸೆಟ್‌ಗಳಿಗೆ ಮಾತ್ರ ಏಳು ಗಂಟೆ ತ್ರಿಫೇಸ್ ವಿದ್ಯುತ್ ನೀಡಲಾಗುತ್ತಿದೆ. ತಾಲ್ಲೂಕಿನಾದ್ಯಂತ ಹಳ್ಳಿಗಳಿಗೆ 2010ರಲ್ಲಿಯೇ ನಿರಂತರ ವಿದ್ಯುತ್ ಜ್ಯೋತಿ ಯೋಜನೆ ಜಾರಿಗೆ ಬಂದಿದೆ. ತಾಲ್ಲೂಕಿನ ಶೇ 80ರಷ್ಟು ಕಡೆ ದಿನದ 24 ಗಂಟೆಯೂ ವಿದ್ಯುತ್‌ ಪೂರೈಕೆ ಇದೆ. ಮಳೆಗಾಲದಲ್ಲಿ ಮಳೆ ಮತ್ತು ಗಾಳಿಯಿಂದಾಗಿ ಅಲ್ಲಲ್ಲಿ ತೊಂದರೆಗಳು ಎದುರಾಗುತ್ತದೆ. ಅದರಲ್ಲೂ ಅರಣ್ಯದಂಚಿನ ಹಳ್ಳಿಗಳಲ್ಲಿ ಹೆಚ್ಚು ಸಮಸ್ಯೆ ಇರುತ್ತದೆ’ ಎನ್ನುತ್ತಾರೆ ಜೆಸ್ಕಾಂ ವಲಯ ಅಧಿಕಾರಿ ಜಗದೀಶ ಸಂಶಿ.
ಜೆಸ್ಕಾಂನಿಂದ ಎಸ್‌ಎಂಎಸ್ ಸೇವೆ
ವಿದ್ಯುತ್ ಸಂಬಂಧಿತ ಸಮಸ್ಯೆ ಪರಿಹರಿಸಲು ಜೆಸ್ಕಾಂನಿಂದ ಎಸ್‌ಎಂಎಸ್ ಸೇವೆ ಆರಂಭಿಸಲಾಗಿದೆ. ಗ್ರಾಹಕ ಸೇವಾ ಕೇಂದ್ರದಲ್ಲಿ ಸ್ವೀಕರಿಸಿದ ದೂರನ್ನು ಪಿಜಿಆರ್‌ಎಸ್‌ (ಸಾರ್ವಜನಿಕ ಕುಂದುಕೊರತೆ ಪರಿಹಾರ ವ್ಯವಸ್ಥೆ) ಸಾಫ್ಟ್‌ವೇರ್‌ನಲ್ಲಿ ತಕ್ಷಣವೇ ನೋಂದಾಯಿಸಿ ಡಾಕೆಟ್ ಸಂಖ್ಯೆ ಗ್ರಾಹಕರ ಮೊಬೈಲ್‌ ಸಂಖ್ಯೆಗೆ ಎಸ್‌ಎಂಎಸ್‌ ಮೂಲಕ ಕಳುಹಿಸಲಾಗುತ್ತದೆ. ದೂರು ಪರಿಹರಿಸಲು ಸಂಬಂಧಿಸಿದ ಉಪವಿಭಾಗಾಧಿಕಾರಿಗಳಿಗೆ ತಿಳಿಸಲಾಗುತ್ತದೆ. ಸರ್ವೀಸ್ ಸ್ಟೇಷನ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸುತ್ತಾರೆ. ದೂರು ಪರಿಹರಿಸಿದ ನಂತರ ಗ್ರಾಹಕರಿಂದ ದೃಢೀಕರಣ ಪಡೆದು ದೂರು ಇತ್ಯರ್ಥಪಡಿಸಲಾಗುತ್ತದೆ. ಗ್ರಾಹಕರು ತಮ್ಮ ದೂರುಗಳ ಸ್ಥಿತಿಗತಿಯನ್ನು http://pgrs. pragyaware.com/Home.aspxನಲ್ಲಿ ಟ್ರ್ಯಾಕ್ ಮಾಡಬಹುದು. ಸಹಾಯವಾಣಿ: ವಿದ್ಯುತ್‌ ಸಂಬಂಧಿತ ಯಾವುದೇ ಸಮಸ್ಯೆಗೆ 24x7 ಜೆಸ್ಕಾಂ ಸಹಾಯವಾಣಿ ಸಂಖ್ಯೆ 1912ಗೆ ಕರೆ ಮಾಡಿ ಅಥವಾ ಸಹಾಯವಾಣಿ ಸಂಖ್ಯೆ 97693 68959ಕ್ಕೆ ಎಸ್‌ಎಂಎಸ್‌ ಕಳುಹಿಸಬಹುದು. ವಾಟ್ಸ್‌ಆ್ಯಪ್ ಸಂಖ್ಯೆ 94808 47593ಗೆ ಚಿತ್ರ ವಿಡಿಯೊ ತೆಗೆದು ಸ್ಥಳದ ವಿವರಗಳೊಂದಿಗೆ ಹಂಚಿಕೊಳ್ಳಬಹುದು ಎಂದು ಜೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT