ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಗತಿಯಲ್ಲಿ ಸಾಗಿದ ಜೆಜೆಎಂ ಕಾಮಗಾರಿ

ಡಾವರಗಾಂವ್: ತಗ್ಗು, ಗುಂಡಿಗಳಿಂದ ಬೇಸತ್ತ ಗ್ರಾಮಸ್ಥರು
Last Updated 25 ಜನವರಿ 2023, 6:27 IST
ಅಕ್ಷರ ಗಾತ್ರ

ಖಟಕಚಿಂಚೋಳಿ: ಸಮೀಪದ ಡಾವರಗಾಂವ್ ಗ್ರಾಮದಲ್ಲಿ ಜಲಜೀವನ ಮಿಷನ್ ಯೋಜನೆಯಡಿ ನಡೆಯುತ್ತಿ ರುವ ಕಾಮಗಾರಿ ಮಂದಗತಿಯಿಂದ ಸಾಗಿದ್ದು, ಎಲ್ಲೆಡೆ ಅಗೆದು ಬಿಡಲಾಗಿದೆ. ಇದರಿಂದ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಗ್ರಾಮೀಣ ಭಾಗದ ಪ್ರತಿ ಮನೆಮನೆಗೂ ನಲ್ಲಿ ಸಂಪರ್ಕದ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂಬುದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಆದರೆ ಈ ಗ್ರಾಮದಲ್ಲಿ ಕಳೆದ ಎರಡು ತಿಂಗಳ ಹಿಂದೆ ಎಲ್ಲೆಡೆ ರಸ್ತೆ ಅಥವಾ ಮನೆ ಅಂಗಳವನ್ನು ಅಗೆದು ಬಿಡಲಾಗಿದೆ. ಇದರಿಂದ ರಾತ್ರಿ ಸಮಯದಲ್ಲಿ ಸಾರ್ವಜನಿಕರು ಓಡಾಡಲು ತುಂಬಾ ತೊಂದರೆ ಆಗುತ್ತಿದೆ.

‘ಗ್ರಾಮದ ಕೆಲವು ಕಡೆ ಪೈಪ್ ಹಾಕಲು ಸಿ.ಸಿ ರಸ್ತೆಗಳನ್ನು ಅಗೆದು ಸುಮಾರು ದಿನಗಳಾದರೂ ಅವುಗಳನ್ನು ಮುಚ್ಚದೆ ನಿರ್ಲಕ್ಷ್ಯ ವಹಿಸಲಾಗಿದೆ. ಇದರಿಂದಾಗಿ ವಾಹನ ಸವಾರರು, ವೃದ್ಧರು ಹಾಗೂ ಮಕ್ಕಳು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ನಡೆದಾಡಲು ತೊಂದರೆ ಆಗುತ್ತಿದೆ’ ಎಂದು ಗ್ರಾಮಸ್ಥರು ದೂರುತ್ತಾರೆ.

‘ಮನೆಯ ಮುಂದೆ ಪೈಪ್‌ಲೈನ್‌ ಕಾಮಗಾರಿಗಾಗಿ ಅಗೆದಿರುವ ತಗ್ಗು ಗುಂಡಿಗಳಲ್ಲಿ ಹೊಲಸು ನೀರು ನಿಂತು ದುರ್ವಾಸನೆ ಬೀರುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ’ ಎಂದು ಗಣೇಶ ಮಡಿವಾಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಗ್ರಾಮದ ರೇವಣಪ್ಪ ಮದರಗಾಂವೆ ಹಾಗೂ ಶ್ರೀದೇವಿ ಎನ್ನುವವರು ತಗ್ಗಿನಲ್ಲಿ ಬಿದ್ದು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಪಂಚಾಯಿತಿ ಅಧಿಕಾರಿಗಳು ಸದ್ಯ ಅಗೆದ ಬಹುತೇಕ ಗುಂಡಿಗಳನ್ನು ಪೈಪ್ ಹಾಕದೇ ತಾತ್ಕಾಲಿಕವಾಗಿ ಮುಚ್ಚಿಸಿದ್ದಾರೆ. ಇದರಿಂದ ಕಾಮಗಾರಿ ಮತ್ತೆ ನನೆಗುದಿಗೆ ಬೀಳಲಿದೆ’ ಎಂದು ಸೋಮನಾಥ, ಅಶೋಕ ಬೇಸರ ವ್ಯಕ್ತಪಡಿಸುತ್ತಾರೆ.

‘ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಅತಿ ಅವಶ್ಯಕ. ಆದರೆ ಜಲ ಜೀವನ ಮಿಷನ್ ಯೋಜನೆ ಕಳಪೆ ಕಾಮಗಾರಿ ಹಾಗೂ ಅದರಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ’ ಎಂದು ಸ್ಥಳೀಯರು ಆರೋಪಿಸುತ್ತಾರೆ.

‘ಜಲಜೀವನ್ ಮಿಷನ್ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಗ್ರಾಮದ ಒಳಗಿನ ಸಿ.ಸಿ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಜನರು ದ್ವಿಚಕ್ರ ವಾಹನಗಳಲ್ಲಿ ಓಡಾಡಲು ಕೂಡ ಕಷ್ಟಪಡುವಂತಾಗಿದೆ. ಅಲ್ಲಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ. ಹಾಗಾಗಿ ಬೇಗ ಕಾಮಗಾರಿ ಪೂರ್ಣಗೊಳಿಸಬೇಕು’ ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT