ದುಸ್ಥಿತಿಯಲ್ಲಿ ಶಾಲೆ, ಅಂಗನವಾಡಿ ಕೇಂದ್ರ

7
ನ್ಯಾಯಾಧೀಶ ಸಂಜೀವಕುಮಾರ ಹಂಚಾಟೆ ಅಸಮಾಧಾನ

ದುಸ್ಥಿತಿಯಲ್ಲಿ ಶಾಲೆ, ಅಂಗನವಾಡಿ ಕೇಂದ್ರ

Published:
Updated:
Prajavani

ಬೀದರ್‌: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂಜೀವಕುಮಾರ ಹಂಚಾಟೆ ಭಾನುವಾರ ಬೀದರ್ ತಾಲ್ಲೂಕಿನ ಖಾಶೆಂಪೂರ ಗ್ರಾಮಕ್ಕೆ ಆಕಸ್ಮಿಕ ಭೇಟಿ ನೀಡಿ ಗ್ರಾಮದ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳ ಸ್ಥಿತಿಗತಿ ಪರಿಶೀಲಿಸಿದರು.

ಬಾಗಿಲು ಮತ್ತು ಕಿಟಕಿಗಳಿಲ್ಲದ ಕೊಠಡಿ, ದುರಾವಸ್ಥೆಯಲ್ಲಿರುವ ಕಟ್ಟಡ, ಅಡುಗೆ ಕೋಣೆಯಲ್ಲಿ ಕಸ ಹಾಕಿರುವುದು, ಅದರ ಹಿಂಬದಿ ಮೂತ್ರ ಮಾಡಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದರು. ಸ್ಥಳಕ್ಕೆ ಬಂದಿದ್ದ ಶಿಕ್ಷಣಾಧಿಕಾರಿಗೆ ಅನೇಕ ಪ್ರಶ್ನೆಗಳನ್ನು ವಿಚಾರಿಸಿ ಶಿಕ್ಷಣ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು.

ನ್ಯಾಯಾಧೀಶರು ನೇರವಾಗಿ ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ‘ಹಳ್ಳಿಗಳಲ್ಲಿರುವ ಶಾಲೆಗಳ ಸ್ಥಿತಿ ಗಂಭೀರವಾಗಿದೆ. ಶಿಕ್ಷಕರ ಸಭೆ ಕರೆದು ಅವರಿಗೆ ಸರಿಯಾದ ತಿಳಿವಳಿಕೆ ಕೊಡಬೇಕು. ಲೋಪ ಎಸಗಿರುವ ಶಿಕ್ಷಕರಿಗೆ ಎಚ್ಚರಿಕೆ ನೀಡಬೇಕು’ ಎಂದು ಹೇಳಿದರು.

‘ಆಟದ ಮೈದಾನ ಇಲ್ಲದ ಹಾಗೂ ಪಾಳು ಬಿದ್ದ ಕಟ್ಟಡದಲ್ಲಿ ಮಕ್ಕಳಿಗೆ ಪಾಠ ಕಲಿಸುವುದು ಕಷ್ಟವಾಗಿದೆ. ಇದು ಮಕ್ಕಳ ಹಕ್ಕುಗಳ ಉಲ್ಲಂಘನೆಯೂ ಆಗಲಿದೆ. ಇಂತಹ ಕೊಠಡಿಗಳಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸಿದರೆ ನಾಗರಿಕ ಸಮಾಜ ಅನಿಸಿಕೊಳ್ಳುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಶಿಕ್ಷಕಿಯರಿಂದ ಕೆಟ್ಟ ಹೆಸರು:

‘ನಮ್ಮೂರಿಗೆ ಶಿಕ್ಷಕಿಯರು ಬಂದ ಮೇಲೆಯೇ ಶಾಲೆಗೆ ಈ ಸ್ಥಿತಿ ಬಂದಿದೆ. ಶಿಕ್ಷಕಿಯರಲ್ಲೇ ಹೊಂದಾಣಿಕೆ ಇಲ್ಲ. ಮಕ್ಕಳಿಗೆ ಸರಿಯಾಗಿ ಪಾಠ ಮಾಡುವುದಿಲ್ಲ. ನೋಟಿಸ್ ನೀಡಿದರೆ ಹರಿದು ಹಾಕುತ್ತಾರೆ. ಬೇರೆಡೆ ವರ್ಗಾವಣೆ ಮಾಡಿದರೆ ಸಂಘಗಳ ಮೂಲಕ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಮತ್ತೆ ಇಲ್ಲಿಗೆ ಬರುತ್ತಾರೆ. ಶಿಕ್ಷಕಿಯರು ಮುಖ್ಯ ಶಿಕ್ಷಕರ ಮಾತನ್ನೂ ಕೇಳುವುದಿಲ್ಲ’ ಎಂದು ಗ್ರಾಮಸ್ಥರು ನ್ಯಾಯಾಧೀಶರಿಗೆ ದೂರಿದರು.

‘ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಅಚ್ಚುಕಟ್ಟಾಗಿ ಎಬಿಸಿಡಿ ಬರೆಯಲು ಬರುವುದಿಲ್ಲ. ವಿದ್ಯಾರ್ಥಿಗಳು ಕೊಠಡಿ ಒಳಗೆ, ಹೊರಗೆ ಓಡಾಡಿಕೊಂಡು ಇರುತ್ತಾರೆ. ಶಿಕ್ಷಕಿಯರು ತಮಗೆ ಏನೂ ಸಂಬಂಧ ಇಲ್ಲದಂತೆ ವರ್ತಿಸುತ್ತಿದ್ದಾರೆ’ ಎಂದು ಶಿಕ್ಷಕಿಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ಗ್ರಾಮ ಸಭೆಗಳಲ್ಲಿ ಇಂತಹ ಸಮಸ್ಯೆಗಳನ್ನು ಪ್ರಸ್ತಾಪಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಸಭೆಗಳಲ್ಲಿ ಶಾಲಾ ಕಟ್ಟಡ ಸುಧಾರಣೆ ಹಾಗೂ ಗುಣಮಟ್ಟದ ಶಿಕ್ಷಣದ ಬಗ್ಗೆ ಪ್ರಸ್ತಾಪ ಮಾಡಬೇಕು’ ಎಂದು ಪಂಚಾಯಿತಿ ಸದಸ್ಯರಿಗೆ ಸಲಹೆ ನೀಡಿದರು.

ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಊಟ ತಯಾರಿಕೆಗೆ ಬಳಸುವ ಎಣ್ಣೆಯನ್ನು ಪರಿಶೀಲಿಸಿದರು. ಕೇಂದ್ರದ ಕಿಟಕಿ ಮುರಿದಿರುವುದನ್ನು ವೀಕ್ಷಿಸಿ ಹಾಗೂ ವಿದ್ಯುಲ್‌ ಬಿಲ್‌ ಪಾವತಿಸದಿರುವ ಬಗ್ಗೆ ತಿಳಿದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ಪ್ರೇಮಾವತಿ ಮನಗೂಳಿ, ಹಿರಿಯ ಸಿವಿಲ್‌ ನ್ಯಾಯಾಧೀಶ ಆರ್‌.ರಾಘವೇಂದ್ರ, ನ್ಯಾಯಾಧೀಶ ಶ್ರೇಯಾಂಶ ದೊಡ್ಡಮನಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !