ಬುಧವಾರ, ನವೆಂಬರ್ 20, 2019
22 °C

ಕಲ್ಯಾಣ ಕರ್ನಾಟಕದ ಪ್ರಥಮ ಸಾಂಸ್ಕೃತಿಕ ಸಂಭ್ರಮ | ಕಲಾವಿದರ ಅದ್ಧೂರಿ ಮೆರವಣಿಗೆ

Published:
Updated:
Prajavani

ಬೀದರ್: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಕಲ್ಯಾಣ ಕರ್ನಾಟಕದ ಪ್ರಥಮ ಸಾಂಸ್ಕೃತಿಕ ಸಂಭ್ರಮದ ಪ್ರಯುಕ್ತ ನಗರದಲ್ಲಿ ಸೋಮವಾರ ಜಿಲ್ಲೆಯ ಕಲಾವಿದರ ಅದ್ಧೂರಿ ಮೆರವಣಿಗೆ ನಡೆಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ ಅವರು, ಪುಷ್ಪಗಳಿಂದ ಅಲಂಕೃತ ಸಾರೋಟಿನಲ್ಲಿ ಇಟ್ಟಿದ್ದ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿಡೊಳ್ಳು ಬಾರಿಸಿ ಮೆರವಣಿಗೆಗೆ ಚಾಲನೆ ನೀಡಿದರು

ಬಸವಕಲ್ಯಾಣ ತಾಲ್ಲೂಕಿನ ಮನ್ನಳ್ಳಿ ಗ್ರಾಮದ ಕಲಾವಿದರ ಡೊಳ್ಳು ಕುಣಿತ, ಔರಾದ್ ತಾಲ್ಲೂಕಿನ ಜೋಜನಾ ಹಾಗೂ ಚೌಧರಿ ಬೆಳಕುಣಿ ಕಲಾವಿದರ ಚಕ್ರಿ ಭಜನೆ, ಬೀದರ್‌ ತಾಲ್ಲೂಕಿನ ಬರೂರಿನ ಚಿಟಕಿ ಭಜನೆ, ಭಾಲ್ಕಿ ತಾಲ್ಲೂಕಿನ ಕಲವಾಡಿಯ ಅಕ್ಕಮಹಾದೇವಿ ಭಜನೆ ಮಂಡಳದ ಭಜನಾ ಪದಗಳು, ನವಿಲು ಕುಣಿತ, ಗೆಜ್ಜೆ ಕುಣಿತ ಮೆರುಗು ಹೆಚ್ಚಿಸಿದವು. ಆಳಂದ ತಾಲ್ಲೂಕಿನ ತೀರ್ಥ ತಾಂಡಾದ ಮಹಿಳೆಯರು ಸಾಂಪ್ರದಾಯಿಕ ವೇಷದಲ್ಲಿ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು.

ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಕಲಾ ತಂಡಗಳು ವಾದ್ಯ ಮೇಳದೊಂದಿಗೆ ಪ್ರದರ್ಶನ ನೀಡಿ ಮೆರವಣಿಗೆಗೆ ರಂಗು ತುಂಬಿದವು. ಕೊರಳಲ್ಲಿ ಹಳದಿ ಬಣ್ಣದ ಶಲ್ಯ ಧರಿಸಿದ್ದ ಕನ್ನಡಾಭಿಮಾನಿಗಳು ಮೆರವಣಿಗೆ ಉದ್ದಕ್ಕೂ ‘ತಾಯಿ ಭುವನೇಶ್ವರಿಗೆ ಜಯವಾಗಲಿ’, ‘ಕಲ್ಯಾಣ ಕರ್ನಾಟಕಕ್ಕೆ ಜಯವಾಗಲಿ ಎನ್ನುವ ಘೋಷಣೆಗಳನ್ನು ಕೂಗಿದರು.

ಕರ್ನಾಟಕ ಕಾಲೇಜು ಆವರಣದಿಂದ ಆರಂಭವಾದ ಮೆರವಣಿಗೆಯು ಬಸವೇಶ್ವರ ವೃತ್ತ, ಅಂಬೇಡ್ಕರ್‌ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತ, ಕನ್ನಡಾಂಬೆ ರೋಟರಿ ವೃತ್ತದ ಮಾರ್ಗವಾಗಿ ಜಿಲ್ಲಾ ರಂಗಮಂದಿರದ ಆವರಣಕ್ಕೆ ತಲುಪಿ ಸಮಾರೋಪಗೊಂಡಿತು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ವೈಜಿನಾಥ ಕಮಠಾಣೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಗಾಯಕಿ ರೇಖಾ ಅಪ್ಪಾರಾವ್ ಸೌದಿ, ಶಿವಶರಣಪ್ಪ ವಾಲಿ, ಕಾಮಶೆಟ್ಟಿ ಚಿಕ್ಕಬಸೆ, ಅನಿಲ ಬೆಲ್ದಾರ್ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)