ಹದಗೆಟ್ಟ ಕಮಲನಗರ-ಮದನೂರ ರಸ್ತೆ

ಕಮಲನಗರ: ತಾಲ್ಲೂಕು ಕೇಂದ್ರದಿಂದ 5 ಕಿ.ಮೀ. ದೂರದಲ್ಲಿರುವ ಮದನೂರ ಗ್ರಾಮಕ್ಕೆ ಹೋಗುವ ಮುಖ್ಯರಸ್ತೆ ತೀರ ಹದಗೆಟ್ಟಿದ್ದು, ಪ್ರತಿನಿತ್ಯ ಸಂಚರಿಸುವ ಪ್ರಯಾಣಿಕರು, ವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿದೆ.
‘ದಶಕದ ಹಿಂದೆ ಮಾಡಿದ ಡಾಂಬರೀಕರಣ ಕಿತ್ತು ಹೋಗಿದೆ. ರಸ್ತೆಯ ಮೇಲೆ ತಗ್ಗುಗುಂಡಿಗಳು ನಿರ್ಮಾಣಗೊಂಡಿವೆ. ಆದರೂ ಈ ರಸ್ತೆ ಅಭಿವೃದ್ಧಿ ಕಾಮಗಾರಿ ಸುಧಾರಣೆಯಾಗುವಂತೆ ಕಾಣುತ್ತಿಲ್ಲ. ಚುನಾಯಿತ ಪ್ರತಿನಿಧಿಗಳು ಏಕೆ ಗಮನ ಹರಿಸುತ್ತಿಲ್ಲ’ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ಹಾಗೂ ಜನಪ್ರತಿ ನಿಧಿಗಳ ಮೇಲೆ ಪ್ರಯಾಣಿಕರು ಹಿಡಿಶಾಪ ಹಾಕುತ್ತಲೇ ಸಂಚರಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಹದಗೆಟ್ಟ ಇಂಥ ರಸ್ತೆಯಿಂದ ಆಸ್ಪತ್ರೆಗೆ ಹೋಗುವ ರೋಗಿಗಳ ಕಷ್ಟ ಒಂದೆಡೆಯಾದರೆ, ಇನ್ನೊಂದೆಡೆ ಗರ್ಭಿಣಿಯರು, ವಯೋವೃದ್ಧ ಪ್ರಯಾಣಿಕರ ಪಾಡು ಹೇಳತೀರದಾಗಿದೆ.
‘ರಸ್ತೆಯ ಮೇಲೆ ದೊಡ್ಡ ಪ್ರಮಾಣದ ತಗ್ಗು ಗುಂಡಿಗಳು ಬಿದ್ದ ಕಾರಣ ವಾಹನ ಸವಾರರು ನರಕಯಾತನೆ ಪಡುವಂಥ ಸ್ಥಿತಿ ನಿರ್ಮಾಣವಾಗಿದೆ. ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರು ಸಂಕಟ ಪಡುವಂತಾಗಿದೆ’ ಎಂದು ಮದನೂರ ಗ್ರಾಮದ ಜಯಪ್ರಕಾಶ ಬಿರಾದಾರ, ಆನಂದ, ಸಂದೀಪ ಅವ್ಯವಸ್ಥೆ ಕುರಿತು ದೂರಿದ್ದಾರೆ.
‘ಕೂಡಲೇ ಸಂಬಂಧಿತ ಅಧಿಕಾರಿಗಳು ಎಚ್ಚೆತ್ತು ರಸ್ತೆ ದುರುಸ್ತಿ ಕಾಮಗಾರಿಗೆ ಮುಂದಾಗಬೇಕು. ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.