ಬೀದರ್ ಕ್ಷೇತ್ರ ಸ್ಥಿತಿ–ಗತಿ| ಟಿಕೆಟ್‌ಗಾಗಿ ಪೈಪೋಟಿ; ಹೆಚ್ಚಿದ ಕುತೂಹಲ

ಬೀದರ್: ಮಕರ ಸಂಕ್ರಾಂತಿಯಿಂದ ಸೂರ್ಯನ ಪಯಣ ಉತ್ತರ ದಿಕ್ಕಿನತ್ತ ಸಾಗಿದೆ. ಇನ್ನೊಂದೆಡೆ ವಿಧಾನಸಭೆ ಚುನಾವಣೆಯೂ ಸಮೀಪಿಸುತ್ತಿದೆ. ರಾಜಕೀಯ ಚಟುವಟಿಕೆ ಗರಿಗೆದರಿದೆ.
ಜಿಲ್ಲೆಯ ಬೀದರ್ ಕೇತ್ರದಲ್ಲಿ ರಾಜಕೀಯ ಕಾವು ಏರ ತೊಡಗಿದೆ. ಜೆಡಿಎಸ್ ಆಗಲೇ ಪ್ರಚಾರ ಯಾತ್ರೆ ಆರಂಭಿಸಿದೆ. ಬೀದರ್ ಕ್ಷೇತ್ರದಿಂದ ರಮೇಶ ಪಾಟೀಲ ಸೋಲಪುರ ಅವರಿಗೆ ಜೆಡಿಎಸ್ ಟಿಕೆಟ್ ಘೋಷಿಸಲಾಗಿದೆ. ಅಭ್ಯರ್ಥಿಗಳ ಅಧಿಕೃತ ಘೋಷಣೆ ಬಳಿಕ ಪ್ರಚಾರ ಶುರು ಮಾಡಿಕೊಳ್ಳಲು ಸೂಚಿಸಲಾಗಿದೆ.
‘ಜೆಡಿಎಸ್ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲ್ಲುವುರೋ ಅಥವಾ ಸೋಲುವುರೋ ಎಂಬುದು ಬೇರೆ ಪ್ರಶ್ನೆ. ಆದರೆ, ಮತಗಳು ವಿಭಜನೆಯಾಗುವ ಸಾಧ್ಯತೆ ಹೆಚ್ಚಿದೆ ಎಂಬುದು ಇತರ ರಾಜಕೀಯ ಪಕ್ಷಗಳ ವಲಯದಲ್ಲಿ ಚರ್ಚೆ ಜೋರಾಗಿದೆ.
ಬೀದರ್ ಕ್ಷೇತ್ರದ ಮತದಾರರು ಬಿಎಸ್‌ಪಿ ಅಭ್ಯರ್ಥಿಯನ್ನೇ ಗೆಲ್ಲಿಸಿ ರಾಜಕೀಯ ತಜ್ಞರ ಲೆಕ್ಕಾಚಾರ ಬುಡ ಮೇಲು ಮಾಡಿದ್ದರು. ‘ಕುಟುಂಬ ರಾಜಕಾರಣ ಬೇಕಿಲ್ಲ. ಒಳ್ಳೆಯ ಅಭ್ಯರ್ಥಿಗಳು’ ಬೇಕು ಎಂದು ಸ್ಪಷ್ಟ ಸಂದೇಶ ನೀಡಿದ್ದರು.
‘ಜನ ಬದಲಾವಣೆ ಬಯಸಿದ್ದಾರೆ. ಹಿಂದಿನ ಐದು ಚುನಾವಣೆಗಳಲ್ಲಿ ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಲಾಗಿದೆ. ಈ ಬಾರಿ ಲಿಂಗಾಯತ ಅಭ್ಯರ್ಥಿಗೆ ಟಿಕೆಟ್ ಕೊಡಬೇಕು. ಬೀದರ್ ಕ್ಷೇತ್ರದಲ್ಲಿ 72 ಸಾವಿರ ಲಿಂಗಾಯತ ಹಾಗೂ 55 ಸಾವಿರ ಮುಸ್ಲಿಂ ಮತದಾರರು ಇದ್ದಾರೆ. ಲಿಂಗಾಯತರನ್ನು ಕಡೆಗಣಿಸಬಾರದು’ ಎಂದು ಕಾಂಗ್ರೆಸ್ ಮುಖಂಡ ಶಶಿಕಾಂತ ಪೊಲೀಸ್‌ಪಾಟೀಲ ಚೌಳಿ ಹೇಳುತ್ತಾರೆ.
‘1994ರಿಂದ ಕಾಂಗ್ರೆಸ್‌ನಲ್ಲಿ ಇದ್ದೇನೆ. ಮೊದಲಿನಿಂದಲೂ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿದ್ದೇನೆ. ಈ ಬಾರಿ ವಾತಾವರಣ ಅನುಕೂಲವಾಗಿಲ್ಲ. ಲಿಂಗಾಯತ ಅಭ್ಯರ್ಥಿಗೆ ಟಿಕೆಟ್ ಕೊಡುವಂತೆ ಪಕ್ಷದ ವರಿಷ್ಠರಿಗೆ ಕೋರಿದ್ದೇನೆ’ ಎನ್ನುತ್ತಾರೆ ಅವರು.
ಕಾಂಗ್ರೆಸ್ ಮುಖಂಡರಾದ ಶೇಖಹಾಜಿ, ನಿಸ್ಸಾರ ಅಹಮದ್ ಮತ್ತು ಮನ್ನಾನ್ ಶೇಟ್ ಅವರು ಹಾಲಿ ಶಾಸಕರ ವಿರುದ್ಧ ಪರೋಕ್ಷ ಧ್ವನಿ ಎತ್ತಿದ್ದಾರೆ. ಇಂದಿನ ಪರಿಸ್ಥಿತಿ ಅವಲೋಕಿಸಿದರೆ ಕಾಂಗ್ರೆಸ್ ಹಾದಿ ಸುಲಭವಿಲ್ಲ ಎಂದು ಕಾಂಗ್ರೆಸ್‌ನವರೇ ಹೇಳುತ್ತಿದ್ದಾರೆ.
ಹಾಲಿ ಶಾಸಕ ರಹೀಂ ಖಾನ್ ಅವರನ್ನೇ ಪುನಃ ಚುನಾವಣಾ ಕಣಕ್ಕೆ ಇಳಿಸಲು ಕಾಂಗ್ರೆಸ್ ಬಹುತೇಕ ತೀರ್ಮಾನಿಸಿದೆ. ‘ಆದರೆ, ರಹೀಂ ಖಾನ್ ಅವರು ಗೆದ್ದ ಬಳಿಕ ನಮ್ಮ ಸಮುದಾಯವನ್ನೇ ಮರೆತಿದ್ದಾರೆ’ ಎಂಬ ಬೇಸರ ಮುಸ್ಲಿಮರಲ್ಲಿದೆ. ಜೆಡಿಎಸ್ ಸೇರಿ ಹಲವು ಮುಖಂಡರು ವಿಡಿಯೊ ಮಾಡಿ ವಾಟ್ಸ್‌ಆ್ಯಪ್‌ಗಳಿಗೆ ಹರಿ ಬಿಟ್ಟಿದ್ದಾರೆ.
ಟಿಕೆಟ್‌ಗಾಗಿ ಪೈಪೋಟಿ: ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕಲಬುರಗಿ ವಿಭಾಗದ ಸಹ ಪ್ರಭಾರಿ ಈಶ್ವರ ಸಿಂಗ್ ಠಾಕೂರ್ ಮತ್ತು ಬಿಜೆಪಿ ಕಾರ್ಯಕಾರಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಹೆಸರು ಮುಂಚೂಣಿಯಲ್ಲಿವೆ.
‘ಪಕ್ಷ ಬಯಸಿದರೆ ನಾನೂ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧ’ ಎಂದು ರಘುನಾಥ ಮಲ್ಕಾಪುರೆ ಅವರೂ ಹಲವು ಬಾರಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಸೂರ್ಯಕಾಂತ ನಾಗಮಾರಪಳ್ಳಿ ಮತ್ತು ಈಶ್ವರ ಸಿಂಗ್ ಠಾಕೂರ್ ಇಬ್ಬರೂ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಈಶ್ವರ ಸಿಂಗ್ ಠಾಕೂರ್ ಪರ ಆರ್‌ಎಸ್‌ಎಸ್ ಮುಖಂಡರು ಇದ್ದಾರೆ. ಹಿಂದುತ್ವ ನೆಲೆಯಲ್ಲೇ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.
‘ಹಿಂದೂಗಳ ಸೇವೆ ನನ್ನ ಮೊದಲ ಆದ್ಯತೆ. 35 ವರ್ಷಗಳ ನನ್ನ ಸಾಮಾಜಿಕ ಬದುಕು ಹಿಂದೂಗಳಿಗೆ ಮೀಸಲಾಗಿದೆ. ಬೀದರ್ ಕ್ಷೇತ್ರದಲ್ಲಿ ಸದ್ದಿಲ್ಲದೇ ಸಾಮಾಜಿಕ ಕಾರ್ಯ ಮಾಡಿರುವೆ. ಪ್ರಚಾರ ಬಯಸಿಲ್ಲ. ಪಕ್ಷದ ವರಿಷ್ಠರಿಗೂ ಇದು ಗೊತ್ತು. ಪಕ್ಷದ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿರುವೆ. ಅದಕ್ಕೆ ನನಗೆ ಟಿಕೆಟ್ ಸಿಗಲಿದೆ’ ಎಂದು ಈಶ್ವರ ಸಿಂಗ್ ಠಾಕೂರ್ ಹೇಳುತ್ತಾರೆ.
ಬಿಜೆಪಿ ಮುಖಂಡರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಸೂರ್ಯಕಾಂತ ನಾಗಮಾರಪಳ್ಳಿ ಅವರು ಬಡವರಿಗೆ ನೆರವು, ಉದ್ಯೋಗ ಮೇಳದಂತಹ ಸಾಮಾಜಿಕ ಕಾರ್ಯ ಆಯೋಜಿಸಿ ಜನರ ವಿಶ್ವಾಸ ಪಡೆಯಲು ಯತ್ನಿಸಿದ್ದಾರೆ. ಅವರ ಗೆಲುವಿಗೆ ಶ್ರಮಿಸುವುದಾಗಿ ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದ್ದಾರೆ. ಕಳೆದ ಸಲ ಪಕ್ಷದೊಳಗಿನ ಮುಖಂಡರೇ ಅವರ ಸೋಲಿಗೆ ಕಾರಣರಾದರು ಎಂಬುದು ಎಲ್ಲರಿಗೂ ತಿಳಿದ ವಿಷಯ.
‘ತಳಮಟ್ಟದಲ್ಲಿ ಜನರ ಸೇವೆ ಮಾಡಿದ್ದೇನೆ. ಬೀದರ್ ಉತ್ಸವದಲ್ಲಿ ಎಲ್ಲರೂ ಸಂಗೀತ, ನೃತ್ಯಕ್ಕೆ ಮಹತ್ವ ನೀಡಿದರೆ ನಾನು ಉದ್ಯೋಗ ಒದಗಿಸಲು ಆದ್ಯತೆ ನೀಡಿದೆ. ಒಂದು ತಿಂಗಳಿಂದ ಪ್ರಚಾರ ಕಾರ್ಯ ಆರಂಭಿಸಿರುವೆ. ಪಕ್ಷ ನನ್ನ ಸೇವೆ ಪರಿಗಣಿಸಿ ಟಿಕೆಟ್ ನೀಡಲಿದೆ’ ಎಂದು ಸೂರ್ಯಕಾಂತ ನಾಗಮಾರಪಳ್ಳಿ ಹೇಳುತ್ತಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.