ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೌಡಗಾಂವ್: ಶಿಥಿಲ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ 

ಅನುದಾನ ಖರ್ಚಾದರೂ ಹೊಸ ಕಟ್ಟಡ ಕಾಮಗಾರಿ ಅಪೂರ್ಣ: ಜಿಲ್ಲಾಧಿಕಾರಿ ಸೂಚನೆಗೂ ಕ್ಯಾರೆ ಅನ್ನದ ಅಧಿಕಾರಿಗಳು
ಮನ್ಮಥಪ್ಪ ಸ್ವಾಮಿ
Published : 11 ಸೆಪ್ಟೆಂಬರ್ 2024, 4:56 IST
Last Updated : 11 ಸೆಪ್ಟೆಂಬರ್ 2024, 4:56 IST
ಫಾಲೋ ಮಾಡಿ
Comments

ಔರಾದ್: ಸೋರುವ ಚಾವಣಿ, ಹಸಿ ಹಿಡಿದ ನೆಲ, ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಸಾಮಗ್ರಿಗಳು...

ಇದು ತಾಲ್ಲೂಕಿನ ಕೌಡಗಾಂವ್ ಅಂಗನವಾಡಿ ಕೇದ್ರದ ಸ್ಥಿತಿ.

ಮಗು ಪ್ರಾಥಮಿಕ ಶಾಲೆಗೆ ಸೇರುವ ಮುನ್ನ ದೈಹಿಕ ಹಾಗೂ ಮಾನಸಿಕವಾಗಿ ಸದೃಢಗೊಳಿಸುವುದು ಅಂಗನವಾಡಿ ಕೇಂದ್ರದ ಮುಖ್ಯ ಉದ್ದೇಶ. ಆದರೆ ಈ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಸರಿಯಾದ ಪೌಷ್ಟಿಕತೆಯೂ ಇಲ್ಲ. ಅತ್ಯುತ್ತಮ ಶೈಕ್ಷಣಿಕ ಪರಿಸರವೂ ಇಲ್ಲ. ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಈಚೆಗೆ ಈ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳಿಗೆ ಸರಿಯಾಗಿ ಅಕ್ಷರ ಹೇಳಿಕೊಟ್ಟಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದರು.

ಕೌಡಗಾಂವ್ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಎರಡು ಅಂಗನವಾಡಿ ಕೇಂದ್ರಗಳಿವೆ. ಒಂದು ಕೇಂದ್ರದ ಕಟ್ಟಡ ಚೆನ್ನಾಗಿದೆ. ಆದರೆ ಮತ್ತೊಂದು ಕೇಂದ್ರದ ಕಟ್ಟಡ ಶಿಥಿಲಗೊಂಡಿದೆ. ಈಗ ಮಳೆಗಾಲ ಇರುವುದರಿಂದ ಇಡೀ ಕಟ್ಟಡ ಹಸಿ ಹಿಡಿದು ಅಪಾಯದ ಸ್ಥಿತಿಯಲ್ಲಿದೆ. ಆದರೂ ಮಕ್ಕಳನ್ನು ಅಲ್ಲಿಂದ ಬೇರೆಕಡೆ ಸ್ಥಳಾಂತರಿಸುತ್ತಿಲ್ಲ ಎಂದು ಪಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಅಂಗನವಾಡಿ ಕೇಂದ್ರದಲ್ಲಿ 34 ಮಕ್ಕಳಿದ್ದಾರೆ. ಇವರೆಲ್ಲರನ್ನು ಹಸಿ ಹಿಡಿದ ನೆಲದ ಮೇಲೆ ಚಾಪೆ ಹಾಕಿ ಕೂಡಿಸಿದ್ದಾರೆ. ಕಟ್ಟಡದಲ್ಲಿ ಗಾಳಿ, ಬೆಳಕು ಸರಿಯಾಗಿ ಬರುವುದಿಲ್ಲ. ಅಂತಹದರಲ್ಲೇ ಮಕ್ಕಳನ್ನು ಕೂಡಿಸಲಾಗುತ್ತಿದೆ ಎಂದು ಪಾಲಕರು ದೂರಿದ್ದಾರೆ.

ಅಪೂರ್ಣ ಕಾಮಗಾರಿ: ಸರ್ಕಾರಿ ಶಾಲೆ ಆವರಣದಲ್ಲಿ ಹೊಸ ಅಂಗನವಾಡಿ ಕಟ್ಟಡ ಕಟ್ಟಲು ಸ್ಥಳಾವಕಾಶ ಕೊಟ್ಟಿದ್ದೇವೆ. ಇದಕ್ಕಾಗಿ ಸುಮಾರು ₹12 ಲಕ್ಷಕ್ಕೂ ಜಾಸ್ತಿ ಹಣವೂ ಖರ್ಚಾಗಿದೆ. ಆದರೂ ನಾಲ್ಕು ವರ್ಷಗಳಿಂದ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ ಎಂದು ಕೌಡಗಾಂವ್ ಗ್ರಾಮದ ಶಾಲಾ ಸಮಿತಿ ಅಧ್ಯಕ್ಷ ರಾಜಕುಮಾರ ಕೋರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಳೆ ಅಂಗನವಾಡಿ ಕಟ್ಟಡ ಶಿಥಿಲಗೊಂಡಿದೆ. ಹೊಸ ಕಟ್ಟಡ ಬೇಗ ಪೂರ್ಣ ಮಾಡುವಂತೆ ನಾನು ಅನೇಕ ಸಲ ಸಿಡಿಪಿಒ ಅವರಿಗೆ ಮನವಿ ಮಾಡಿಕೊಂಡರೂ ಸ್ಪಂದಿಸುತ್ತಿಲ್ಲ. ಹಳೆ ಕಟ್ಟಡದಿಂದ ಮಕ್ಕಳಿಗೇನಾದರೂ ತೊಂದರೆ ಆದರೆ ಅದಕ್ಕೆ ನೇರವಾಗಿ ಅವರೇ ಹೊಣೆಯಾಗುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಕೌಡಗಾಂವ್‌ದಲ್ಲಿ ಹೊಸ ಅಂಗನವಾಡಿ ಕಟ್ಟಡ ಕಟ್ಟಲು ನಮ್ಮ ಇಲಾಖೆಯಿಂದ ₹5 ಲಕ್ಷ ಕೊಟ್ಟಿದ್ದೇವೆ. ಉಳಿದ ಹಣ ಉದ್ಯೋಗ ಖಾತರಿಯಿಂದ ಬಳಸಿಕೊಂಡಿದ್ದಾರೆ. ಆದರೂ ಕಟ್ಟಡ ಕಾಮಗಾರಿ ಪೂರ್ಣ ಆಗಿಲ್ಲ. ಈ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಮಾಡಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಇಮಲಪ್ಪ ಹೇಳುತ್ತಾರೆ.

ಔರಾದ್ ತಾಲ್ಲೂಕಿನ ಕೌಡಗಾಂವ್‌ನಲ್ಲಿ ಹೊಸ ಅಂಗನವಾಡಿ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿದೆ
ಔರಾದ್ ತಾಲ್ಲೂಕಿನ ಕೌಡಗಾಂವ್‌ನಲ್ಲಿ ಹೊಸ ಅಂಗನವಾಡಿ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿದೆ

ಜಿಲ್ಲಾಧಿಕಾರಿ ಸೂಚನೆಗೂ ಬೆಲೆ ಇಲ್ಲ

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಕಳೆದ ತಿಂಗಳು ಕೌಡಗಾಂವ್ ಗ್ರಾಮಕ್ಕೆ ಭೇಟಿ ನೀಡಿ ಅಂಗನವಾಡಿ ಸ್ಥಿತಿಗತಿ ಪರಿಶೀಲಿಸಿದರು. ಇದು ಹಳೆ ಕಟ್ಟಡ. ಹೀಗಾಗಿ ಮಕ್ಕಳನ್ನು ಇಲ್ಲಿ ಕೂಡಿಸುವುದು ಬೇಡ ಎಂದು ಸೂಚನೆ ನೀಡಿದರೂ ಈಗಲೂ ಮಕ್ಕಳನ್ನು ಅಲ್ಲಿಯೇ ಕೂಡಿಸುತ್ತಿದ್ದಾರೆ ಎಂದು ಶಾಲಾ ಸಮಿತಿ ಅಧ್ಯಕ್ಷ ರಾಜಕುಮಾರ ಕೋರೆ ತಿಳಿಸಿದ್ದಾರೆ. ಹೊಸ ಅಂಗನವಾಡಿ ಕಟ್ಟಡ ಅಪೂರ್ಣ ಮಾಡುವಂತೆಯೂ ಜಿಲ್ಲಾಧಿಕಾರಿ ಸಿಪಿಡಿಪಿಒಗೆ ಸೂಚಿಸಿದ್ದಾರೆ. ಆದರೂ ಇಲ್ಲಿಯ ತನಕ ಯಾರು ಬಂದು ನೋಡಿಲ್ಲ ಎಂದು ಅವರು ವ್ಯವಸ್ಥೆ ವಿರುದ್ಧ ಕಿಡಿ ಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT