ಸೋಮವಾರ, ಸೆಪ್ಟೆಂಬರ್ 20, 2021
24 °C
ಔರಾದ್: ಕೆಡಿಪಿ ಸಭೆಯಲ್ಲಿ ಸಚಿವ ಪ್ರಭು ಚವಾಣ್ ಸೂಚನೆ

ಅನುದಾನ ಸಮರ್ಪಕ ಬಳಕೆ ಆಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಔರಾದ್: ಚುನಾವಣೆಗೆ ಇನ್ನೂ ಎರಡು ವರ್ಷ ಕಾಲಾವಕಾಶವಿದೆ. ಅಷ್ಟರೊಳಗೆ ಕ್ಷೇತ್ರದ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಬೇಕಿದೆ. ಹೀಗಾಗಿ ಸರ್ಕಾರದಿಂದ ಬರುವ ಅನುದಾನ ಸಮರ್ಪಕವಾಗಿ ಬಳಕೆಯಾಗಬೇಕಾಗಿದೆ. ರಸ್ತೆ, ಚೆಕ್‍ಡ್ಯಾಂ, ಕುಡಿಯುವ ನೀರು ಸೇರಿದಂತೆ ಯಾವುದೇ ಕಾಮಗಾರಿಯಲ್ಲಿ ಲೋಪ ಆದರೆ ಸಹಿಸುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ತಿಳಿಸಿದರು.

ಇಲ್ಲಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ರೈತರಿಗೆ ಅನ್ಯಾಯ ಆದರೆ ಸುಮ್ಮನಿರುವುದಿಲ್ಲ. ಕಳೆದ ವರ್ಷ ಕೆಲ ರೈತರಿಗೆ ಬೆಳೆ ವಿಮೆ ಪರಿಹಾರ ಬಂದಿಲ್ಲ. ಅಧಿಕಾರಿಗಳು ರೈತರಿಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಸಮರ್ಪಕ ಸರ್ವೆ ಮಾಡಿಲ್ಲ. ಸೋಯಾ ಬೀಜ ವಿತರಣೆಯಲ್ಲಿ ಲೋಪ ಆಗಿದೆ. ಕೃಷಿ ಹೊಂಡ ನಿರ್ಮಾಣದಲ್ಲಿ ಅನುದಾನ ದುರ್ಬಳಕೆಯಾಗಿದೆ. ಇದಕ್ಕೆಲ್ಲ ಯಾರು ಹೊಣೆ’ ಎಂದು ಕೃಷಿ ಅಧಿಕಾರಿಗಳ ಕಾರ್ಯವೈಖರಿಗೆ ಸಚಿವರು ಅತೃಪ್ತಿ ವ್ಯಕ್ತಪಡಿಸಿದರು.

ಹೊಸ ತಾಲ್ಲೂಕು ಕಮಲನಗರದಲ್ಲಿ ಸಾಕಷ್ಟು ಕೆಲಸ ಆಗಬೇಕು. ಹೆಚ್ಚಿನ ಕಾಳಜಿ ವಹಿಸಿ ಕೆಲಸ ಮಾಡುವಂತೆ ತಹಶೀಲ್ದಾರ್ ರಮೇಶ ಪೆದ್ದೆಯವರಿಗೆ ಸೂಚಿದರು.

ಕೆಡಿಪಿ ಸಭೆಗೆ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಅದರ ಮಾಹಿತಿ ನೀಡುವಂತೆ ತಹಶೀಲ್ದಾರ್ ಮಲಶೆಟ್ಟಿ ಚಿದ್ರೆ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ ಅವರಿಗೆ ಸೂಚಿಸಿದರು.

‘ಮೊದಲು ತಹಶೀಲ್ದಾರ್ ಕಚೇರಿ ಹಾಗೂ ತಾಲ್ಲೂಕು ಪಂಚಾಯಿತಿ ಸುಧಾರಣೆಯಾಗಬೇಕು. ತಹಶೀಲ್ದಾರ್ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿದರೆ ತಾಲ್ಲೂಕಿನ ಅರ್ಧ ಸಮಸ್ಯೆ ನಿವಾರಣೆಯಾಗುತ್ತದೆ. ಆದರೆ ಇವರು ಆ ಕೆಲಸ ಸಮರ್ಥವಾಗಿ ನಿರ್ವಹಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧೀನ ಅಧಿಕಾರಿಗಳ ಮೇಲೆ ಹಿಡಿತ ಇಲ್ಲ. ಕೆಲ ಕಡೆ ಹಣ ಕೊಡದೆ ಕೆಲಸ ಆಗುತ್ತಿಲ್ಲ. ಇನ್ನು ಪಿಡಿಒಗಳು ಸರಿಯಾಗಿ ಕೆಲಸ ಮಾಡದ ಕಾರಣ ಗ್ರಾಮೀಣ ಪ್ರದೇಶದ ಜನ ಸಮಸ್ಯೆಯಲ್ಲಿದ್ದಾರೆ. ಪಿಡಿಒಗಳ ಮೇಲೆ ಹಿಡಿತ ಸಾಧಿಸುವಂತೆ ತಾಲ್ಲೂಕು ಪಂಚಾಯಿತಿ ಇಒಗೆ ಸಾಕಷ್ಟು ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ’ ಎಂದು ಸಚಿವರು ತಾಲ್ಲೂಕು ಮಟ್ಟದ ಮೇಲಾಧಿಕಾರಿಗಳ ವಿರುದ್ಧ ಕಿಡಿ ಕಾರಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಪ್ರವೀಣ ಮಾಸಿಮಾಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್. ನಗನೂರ, ಸಿಡಿಪಿಒ ಶಂಭುಲಿಂಗ ಹಿರೇಮಠ, ಲೋಕೋಪಯೋಗಿ ಎಂಜಿನಿಯರ್ ವೀರಶೆಟ್ಟಿ ರಾಠೋಡ್, ಅಶೋಕ ಸಜ್ಜನಶೆಟ್ಟಿ, ಅರಣ್ಯ ಅಧಿಕಾರಿ ವೀರೇಶ್, ಪ್ರೇಮಶೇಖರ ಚಾಂದೋರಿ ಸಭೆಯಲ್ಲಿ ತಮ್ಮ ಇಲಾಖೆ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.