ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ಧರಾಮೇಶ್ವರರ ಸಂಪೂರ್ಣ ಚರಿತ್ರೆ ತಿಳಿಯಲಿ: ಸೊಲ್ಲಾಪುರದ ಧರ್ಮರಾಜ ಕಾಡಾದಿ

Published 6 ಜುಲೈ 2024, 16:23 IST
Last Updated 6 ಜುಲೈ 2024, 16:23 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಶಿವಯೋಗಿ ಸಿದ್ಧರಾಮೇಶ್ವರರ ಬಗ್ಗೆ ಅಲ್ಪಸ್ವಲ್ಪ ಮಾಹಿತಿ ದೊರೆತಿದ್ದು ಸಂಪೂರ್ಣ ಚರಿತ್ರೆ ಬೆಳಕಿಗೆ ತರುವ ಅಗತ್ಯವಿದೆ’ ಎಂದು ಮಹಾರಾಷ್ಟ್ರದ ಸೊಲ್ಲಾಪುರ ಸಿದ್ಧರಾಮೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಧರ್ಮರಾಜ ಕಾಡಾದಿ ಸಲಹೆ ನೀಡಿದ್ದಾರೆ.

ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿ ವತಿಯಿಂದ ಶನಿವಾರ ಇಲ್ಲಿ ಹಮ್ಮಿಕೊಂಡಿದ್ದ ‘ಶಿವಯೋಗಿ ಸಿದ್ಧರಾಮೇಶ್ವರ ಸಾಂಸ್ಕೃತಿಕ ಮುಖಾಮುಖಿ’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ರಾಘವಾಂಕ ಕವಿ ಅಲ್ಲಮಪ್ರಭು ಮತ್ತು ಸಿದ್ಧರಾಮರ ಭೇಟಿ ಕುರಿತಾಗಿ ಬರೆದಿದ್ದಾರೆ. ಆದರೆ ಸಿದ್ಧರಾಮೇಶ್ವರರು ಕಲ್ಯಾಣಕ್ಕೆ ಭೇಟಿ ನೀಡಿದರೋ ಇಲ್ಲವೋ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ. ಸಿದ್ಧರಾಮೇಶ್ವರರು ತುಮಕೂರು, ಶ್ರೀಶೈಲದಲ್ಲಿ ಅನೇಕ ವರ್ಷ ಇದ್ದರಾದರೂ ಈ ಬಗ್ಗೆ ದಾಖಲೆಗಳಿಲ್ಲ. ಅವರ ವಚನಗಳನ್ನು ಮರಾಠಿಗೆ ಅನುವಾದಿಸಬೇಕಾಗಿದೆ. ಸಂತ ಜ್ಞಾನೇಶ್ವರ ಮತ್ತು ಸಿದ್ಧರಾಮೇಶ್ವರರ ಸಂಬಂಧದ ಬಗ್ಗೆಯೂ ಕತೆಗಳಿದ್ದು ಇದಕ್ಕಾಗಿ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಸೊಲ್ಲಾಪುರದ ಸಿದ್ಧರಾಮೇಶ್ವರ ದೇವಸ್ಥಾನದಿಂದ ಕ್ಯಾನ್ಸರ್ ಆಸ್ಪತ್ರೆ, ಶೈಕ್ಷಣಿಕ ಸಂಸ್ಥೆ ಇತ್ಯಾದಿ ಸ್ಥಾಪಿಸಲಾಗಿದ್ದು ಶರಣರ ನಿಜ ಚರಿತ್ರೆ ಹೊರತರುವುದಕ್ಕೂ ಪ್ರಯತ್ನ ನಡೆದಿದೆ' ಎಂದರು.

ಉದ್ಘಾಟನೆ ನೆರವೆರಿಸಿದ ಸಾಹಿತಿ ಗೋ.ರು.ಚನ್ನಬಸಪ್ಪ ಮಾತನಾಡಿ, ‘ವಚನಗಳಿಂದ ಸಿದ್ಧರಾಮೇಶ್ವರರ ಸಾಧನೆ ಮತ್ತು ಜೀವನದ ಸಂಗತಿಗಳನ್ನು ತಿಳಿದುಕೊಳ್ಳಬಹುದು. ಆದರೆ ಸೊಲ್ಲಾಪುರದ ಭಾಗದಲ್ಲಿ ಅವರ ಬಗ್ಗೆ ಕೆಲ ತಪ್ಪು ಕಲ್ಪನೆಗಳಿವೆ. ಅವರು ಶರಣರಾಗಿದ್ದು ಪವಾಡಪುರುಷರಲ್ಲ ಎಂಬುದನ್ನು ತಿಳಿದುಕೊಳ್ಳಬೇಕು’ ಎಂದರು.

ಚಿಂತಕ ಗುರುರಾಜ ಕರಜಗಿ ಮಾತನಾಡಿ, ‘ಸಿದ್ಧರಾಮೇಶ್ವರರು ಕೆರೆ, ಕಟ್ಟೆ ಕಟ್ಟಿಸಿ ಜನೋಪಯೋಗಿ ಕಾರ್ಯ ಕೈಗೊಂಡರು. ಶರಣತತ್ವದ ಪರಿಪಾಲಕರಾಗಿ ವಿವಿಧೆಡೆ ಇದರ ಪ್ರಚಾರಗೈದರು’ ಎಂದರು.

ವಿಶ್ವಸ್ಥ ಸಮಿತಿ ಅಧ್ಯಕ್ಷ ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ಸಿದ್ಧರಾಮೇಶ್ವರರು ವಚನಗಳನ್ನು ರಚಿಸಿರುವುದಲ್ಲದೆ ವಚನ ಸಂರಕ್ಷಣೆಯೂ ಮಾಡಿದ್ದಾರೆ. ಭಾಲ್ಕಿ ಮಠದಿಂದ ಶರಣರ ನೂರಾರು ಗ್ರಂಥಗಳನ್ನು ಮರಾಠಿಗೆ ಅನುವಾದಿಸಿ ವಿತರಿಸಲಾಗಿದೆ’ ಎಂದರು. ಬೆಳವಿ ಶರಣಬಸವ ಸ್ವಾಮೀಜಿ, ಸಂಯೋಜಕ ಕಲ್ಯಾಣರಾವ್ ಪಾಟೀಲ, ಸಾಹಿತಿ ರಾಜೀವ ಜುಬರೆ ಭಾಲ್ಕಿ, ಲಕ್ಷ್ಮಿಕಾಂತ ಪಂಚಾಳ ಮಾತನಾಡಿದರು.

ಹಾರಕೂಡ ಚನ್ನವೀರ ಶಿವಾಚಾರ್ಯರು, ಭಾಲ್ಕಿ ಗುರುಬಸವ ಪಟ್ಟದ್ದೇವರು, ವೈಜನಾಥ ಕಾಮಶೆಟ್ಟಿ, ಡಾ.ಎಸ್.ಬಿ.ದುರ್ಗೆ, ಪ್ರಾಚಾರ್ಯ ಬಸವರಾಜ ಎವಲೆ, ಕುಪೇಂದ್ರ ಪಾಟೀಲ, ಶಿವರಾಜ ಪಾಟೀಲ ಉಪಸ್ಥಿತರಿದ್ದರು. ಶಿವಯೋಗಿ ಸಿದ್ಧರಾಮ ಸಾಂಸ್ಕೃತಿಕ ಮುಖಾಮುಖಿ ಎನ್ನುವ ಸಂಸ್ಮರಣ ಸಂಪುಟ ಬಿಡುಗಡೆಗೊಳಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT