ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಲಭ್ಯ ವಂಚಿತ ಕೌಠಾ ಬಿ

ಮುಖ್ಯರಸ್ತೆಯ ಎರಡೂ ಬದಿ ತ್ಯಾಜ್ಯದ ರಾಶಿ; ತೆರವುಗೊಳಿಸಲು ಆಗ್ರಹ
Last Updated 6 ಏಪ್ರಿಲ್ 2021, 3:19 IST
ಅಕ್ಷರ ಗಾತ್ರ

ಔರಾದ್: ತಾಲ್ಲೂಕಿನ ಕೌಠಾ (ಬಿ) ಗ್ರಾಮಸ್ಥರು ಇಂದಿಗೂ ವಿವಿಧ ಮೂಲ ಸೌಲಭ್ಯಗಳಿಗಾಗಿ ಪರದಾಡಬೇಕಿದೆ. ಸುಮಾರು ನಾಲ್ಕು ಸಾವಿರ ಜನಸಂಖ್ಯೆ ಹೊಂದಿರುವ ಈ ಊರಿನ ಜನರಿಗೆ ಸರಿಯಾದ ರಸ್ತೆ, ಚರಂಡಿ ಹಾಗೂ ಸಮರ್ಪಕ ಕುಡಿಯುವ ನೀರು ಮರೀಚಿಕೆಯಾಗಿ ಪರಿಣಮಿಸಿದೆ.

ಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ಇಲ್ಲಿ ಏಕೈಕ ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ಅದು ಆಗಾಗ ಕೆಲಸ ಮಾಡದೇ ಜನರಿಗೆ ಬಾವಿ ನೀರೇ ಗತಿ. ಅಲ್ಲಲ್ಲಿ ಕೊಳವೆಬಾವಿ ಇದ್ದರೂ ಬೇಸಿಗೆಯಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ.

‘ಈ ಊರಿನ ಇನ್ನೊಂದು ದೊಡ್ಡ ಸಮಸ್ಯೆ ಕಸ ವಿಲೇವಾರಿ. ಬೀದರ್-ಔರಾದ್ ಮುಖ್ಯ ರಸ್ತೆಗೆ ಹೊಂದಿಕೊಂಡು ಈ ಗ್ರಾಮ ಇದೆ. ರಸ್ತೆಯ ಎರಡೂ ಬದಿ ಕಸದ ರಾಶಿ ಬಿದ್ದಿದೆ. ಗ್ರಾಮ ಪಂಚಾಯಿತಿ ಕಚೇರಿ ಹಾಗೂ ಆರೋಗ್ಯ ಕೇಂದ್ರದ ಎದುರಲ್ಲೇ ಕಸ ಬಿದ್ದು ಗಬ್ಬು ನಾರುತ್ತಿದ್ದರೂ ಯಾರೂ ಕೇಳದಿರುವುದು ವಿಪರ್ಯಾಸದ ಸಂಗತಿ’ ಎಂದು ಗ್ರಾಮಸ್ಥರು ದೂರುತ್ತಾರೆ.

‘ಇಲ್ಲಿ ಸರ್ಕಾರಿ ಆಸ್ಪತ್ರೆ ಇದ್ದರೂ ಸೌಲಭ್ಯಗಳಿಲ್ಲ. ತುರ್ತು ಸಂದರ್ಭದಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಔಷಧಿಗಳಿಲ್ಲ. ಇನ್ನು ಪಶು ಆಸ್ಪತ್ರೆಯಲ್ಲಿ ವೈದ್ಯರು ಇರುವುದಿಲ್ಲ’ ಎಂದು ರೈತ ಮುಖಂಡ ರವಿ ದೇವರೆ ಸಮಸ್ಯೆ ಹೇಳಿಕೊಂಡರು.

‘ಊರಿನಲ್ಲಿ ಸಾಕಷ್ಟು ನೀರಿದೆ. ಆದರೆ ಸೂಕ್ತ ನಿರ್ವಹಣೆ ಇಲ್ಲ. ನೀರು ರಸ್ತೆ ಮೇಲೆ ಹರಿಯುತ್ತಿರುತ್ತದೆ. ಇದರಿಂದ ಗಲೀಜು ಆಗಿ ನಡೆದಾಡಲು ಬರುವುದಿಲ್ಲ. ಪಂಚಾಯಿತಿ ಅಧಿಕಾರಿ ಗಳಿಗೆ ಅನೇಕ ಸಲ ತಿಳಿಸಿದರೂ ಪರಿಹಾರಕ್ಕೆ ಮುಂದಾಗುತ್ತಿಲ್ಲ’ ಎಂದು ರೈತ ರಮೇಶ ಬಿರಾದಾರ ಹೇಳಿದರು.

‘ಗ್ರಾಮದಲ್ಲಿ ಈಗ ಶುದ್ಧ ನೀರಿನ ಘಟಕ ಕೆಲಸ ಮಾಡುತ್ತಿದೆ. ಸದ್ಯ ಕುಡಿಯುವ ನೀರಿಗೆ ಕೊರತೆ ಇಲ್ಲ. ಕೆಲ ಬಡಾವಣೆಗಳಲ್ಲಿ ಕೊಳವೆಬಾವಿ ಮೂಲಕ ನೀರು ಪೂರೈಸಲಾಗುತ್ತಿದೆ. ಮುಂದೆಯೂ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಪಿಡಿಒಗೆ ಸೂಚಿಸಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ತಿಳಿಸಿದ್ದಾರೆ.

‘ಗ್ರಾಮದ ಬಳಿ ಮುಖ್ಯರಸ್ತೆಯ ಎರಡೂ ಬದಿ ಕಸದ ರಾಶಿ ಬಿದ್ದು ಸಮಸ್ಯೆ ಆಗುತ್ತಿರುವುದು ನೋಡಿದ್ದೇನೆ. ಆದಷ್ಟು ಬೇಗ ಅಲ್ಲಿನ ಕಸ ವಿಲೇವಾರಿ ಮಾಡಿ ಸ್ವಚ್ಛತೆ ಕಾಪಾಡಲು ತಿಳಿಸಲಾಗಿದೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT