ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲಾನಾ ಆಜಾದ್‌ ಶಾಲೆಗಳಲ್ಲಿ ಗುಣಮಟ್ಟ, ನೈರ್ಮಲ್ಯ ಕೊರತೆ

ಹಲವೆಡೆ ಕೊಠಡಿ, ಶಿಕ್ಷಕರ ಕೊರತೆ; ಸಮಸ್ಯೆ ಪರಿಹಾರಕ್ಕೆ ಮನವಿ
Last Updated 3 ಜುಲೈ 2022, 13:46 IST
ಅಕ್ಷರ ಗಾತ್ರ

ಬೀದರ್‌: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿಯಲ್ಲಿ ಜಿಲ್ಲೆಯಲ್ಲಿ ಒಟ್ಟು ಹತ್ತು ಮೌಲಾನಾ ಆಜಾದ್‌ ಮಾದರಿ ಶಾಲೆಗಳು ನಡೆಯುತ್ತಿವೆ. ಸರ್ಕಾರ ಅಲ್ಪಸಖ್ಯಾಂತರ ಶಿಕ್ಷಣಕ್ಕಾಗಿಯೇ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ಅಲ್ಲಿ ಸ್ವಚ್ಛತೆ ಇಲ್ಲ. ಗುಣಮಟ್ಟದ ಶಿಕ್ಷಣವೂ ದೊರಕುತ್ತಿಲ್ಲ.

ನಗರದಲ್ಲಿರುವ ಶಾಲೆಗಳೇ ಹೆಚ್ಚು ಹೊಲಸು ಇವೆ. ಶಾಲೆಯ ಆವರಣದಲ್ಲಿ ಎಲ್ಲೆಡೆ ಕಸ ತುಂಬಿಕೊಂಡಿದೆ. ಕೊಠಡಿ ಒಳಗೂ ಕಸ, ಪ್ರವೇಶ ದ್ವಾರದಲ್ಲೂ ಕಸ ತುಂಬಿಕೊಂಡಿದೆ. ಉಪಾಹಾರ ಹಾಗೂ ಕುರಕಲು ಆಹಾರ ಸೇವಿಸಿ ತರಗತಿ ಒಳಗಡೆಯೇ ಎಸೆದಿರುವುದು ಕಂಡು ಬರುತ್ತದೆ. ಶಾಲಾ ಆವರಣದಲ್ಲಿ ಕಸ ಹಾರಾಡುತ್ತಿದೆ. ಆದರೆ, ಕಸಗೂಡಿಸಿ ಒಂದು ಕಡೆ ಸಂಗ್ರಹಿಸುವ ಅಥವಾ ಸುಟ್ಟು ಹಾಕಿ ಸ್ವಚ್ಛತೆ ಕಾಯ್ದುಕೊಳ್ಳುವ ಪ್ರವೃತ್ತಿ ಕಾಣಸಿಗುತ್ತಿಲ್ಲ.

ನಗರದ ಫೈಜಪುರ ದರ್ಗಾ ಸಮೀಪದ ಮೌಲಾನಾ ಆಜಾದ್ ಮಾದರಿ ಶಾಲೆ ಅತಿ ಹೆಚ್ಚು ಹೊಲಸು ಇದೆ. ಶಾಲೆಯಲ್ಲಿ ಶಿಸ್ತು ಇಲ್ಲ. ಇಲ್ಲಿ ಯಾವಾಗಲೂ ಮಕ್ಕಳು ಶಾಲಾ ಆವರಣದಲ್ಲೇ ಕುಳಿತುಕೊಂಡಿರುತ್ತಾರೆ. ಶಿಕ್ಷಕಿಯರು ಮಕ್ಕಳನ್ನು ಕೊಂಕಳಲ್ಲಿ ಇಟ್ಟುಕೊಂಡು ಶಾಲೆಗೆ ಬರುತ್ತಿದ್ದಾರೆ. ಶಾಲಾ ಕೊಠಡಿಗಳ ಕೊರತೆ ಇದೆ. ಶಿಕ್ಷಕಿಯರು ಇದ್ದರೂ ಪರಿಣಾಮಕಾರಿ ಬೋಧನೆ ಇಲ್ಲ. 10ನೇ ತರಗತಿ ಮಕ್ಕಳಿಗೆ ಓದಲು ಹೇಳಿದರೆ ಸಾಕು ಗುಣಮಟ್ಟದ ಬಂಡವಾಳ ಬಯಲು ಆಗುತ್ತದೆ.

ರಟಕಲ್‌ಪುರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಸಮೀಪ ಮೌಲಾನಾ ಆಜಾದ್‌ ಮಾದರಿ ಶಾಲೆಯಲ್ಲೂ ಇದೇ ಸ್ಥಿತಿ ಇದೆ. ಆವರಣದಲ್ಲಿ ಕಸ ಎಸೆಯಲಾಗಿದೆ. ಕತ್ತಲೆ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸಿ ಬೋಧನೆ ಮಾಡಲಾಗುತ್ತಿದೆ. ಶಾಲೆಯ ಶಿಕ್ಷಕರೇ ಕಸವನ್ನು ಆವರಣದಲ್ಲಿ ಎಸೆಯುವ ಪರಿ‍‍ಪಾಠ ಬೆಳೆಸಿದ್ದಾರೆ. ಇಲ್ಲಿಯೂ ಶಿಸ್ತು ಎನ್ನುವುದು ಕಂಡು ಬರುವುದಿಲ್ಲ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಬಲಿರಾಮ ಭೇಟಿ ನೀಡಿ ಶಾಲಾ ಆವರಣದಲ್ಲಿ ಬಿದ್ದ ಕಸ ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ. ಶಿಕ್ಷಕರು ಹಾಗೂ ಮಕ್ಕಳಿಗೆ ಸ್ವಚ್ಛತೆಯ ಪಾಠ ಮಾಡಿದ್ದಾರೆ. ಆದರೆ, ಪ್ರಯೋಜನ ಆಗಿಲ್ಲ.

ಬೀದರ್‌ನ ಫೈಜಪುರ ಮೌಲಾನಾ ಆಜಾದ್ ಮಾದರಿ ಶಾಲೆ, ಮುಸ್ತೈದಪುರ, ಮನಿಯಾರ್ ತಾಲೀಂನ ಬೀದರ್‌ ಉಪ ವಿಭಾಗಾಧಿಕಾರಿ ನಿವಾಸದ ಹಿಂಬದಿ, ರಟಕಲ್‌ಪುರದ ಸರ್ಕಾರಿ ಬಾಲಕಿಯರ ಕಾಲೇಜು ಸಮೀಪ, ಬಗದಲ್‌ನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮೇಲ್ಮಹಡಿ, ಕಮಠಾಣದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಆವರಣ, ಬಸವಕಲ್ಯಾಣ ತಾಲ್ಲೂಕಿನ ಮಂಠಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ, ಬಸವಕಲ್ಯಾಣದ ಅಂಬೇಡ್ಕರ್‌ ವೃತ್ತ ಸಮೀಪದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಹುಮನಾಬಾದ್‌ನ ಹೌಸಿಂಗ್‌ ಬೋರ್ಡ್‌ ಕಾಲೊನಿಯಲ್ಲಿ ಮೌಲಾನಾ ಆಜಾದ್‌ ಇಂಗ್ಲಿಷ್‌ ಶಾಲೆಗಳು ಇವೆ. ಈ ಎಲ್ಲ ಶಾಲೆಗಳಿಗೆ ಸ್ವಂತ ಕಟ್ಟಡ ಇಲ್ಲ. ಸ್ವಚ್ಚತೆಯ ಬಗ್ಗೆ ಕೇಳಿದರೆ ಇದು ನಮ್ಮ ಸ್ವಂತ ಶಾಲಾ ಕಟ್ಟಡ ಅಲ್ಲ ಎಂದು ನೆಪ ಹೇಳುವುದೇ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT