ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರು ಅವಕಾಶ ಬಳಸಿಕೊಳ್ಳಲಿ: ಚಾಮಾ ಸಲಹೆ

ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಚಾಮಾ ಸಲಹೆ
Last Updated 19 ಮಾರ್ಚ್ 2021, 15:36 IST
ಅಕ್ಷರ ಗಾತ್ರ

ಬೀದರ್: ‘ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿನ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಪ್ರತಿಭಾ ಚಾಮಾ ಹೇಳಿದರು.

ನಾಟ್ಯಶ್ರೀ ನೃತ್ಯಾಲಯದ ವತಿಯಿಂದ ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಇರುವ ಹೋಟೆಲ್ ಶ್ರೀಕೃಷ್ಣ ದರ್ಶಿನಿಯ ಮಹಾಲಕ್ಷ್ಮಿ ಸಭಾಂಗಣದಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸಾಧಕಿಯರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಂದೆ ಹಾಗೂ ಪತಿಯ ಪ್ರೋತ್ಸಾಹದಿಂದಾಗಿಯೇ ಮಹಿಳೆಯರು ಉನ್ನತ ಸ್ಥಾನಕ್ಕೆ ಏರಲು ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕದಂಬ ಕನ್ನಡ ಸಂಘದ ಗೌರವಾಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಅವರು,‘ವಿಶ್ವದ ಜನಸಂಖ್ಯೆಯಲ್ಲಿ ಅರ್ಧದಷ್ಟು ಮಹಿಳೆಯರು ಇದ್ದಾರೆ. ದೇಶದಲ್ಲಿ 65 ಕೋಟಿ ಮಹಿಳೆಯರಿದ್ದು, 15 ಕೋಟಿ ಮಹಿಳೆಯರಿಗಷ್ಟೇ ಅವಕಾಶಗಳು ದೊರಕುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಎಲ್ಲ ಮಹಿಳೆಯರಿಗೂ ಅವಕಾಶಗಳು ಸಿಗಬೇಕು. ಎಲ್ಲ ಸಮುದಾಯಗಳು ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಹಾಗೂ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನಾಟ್ಯಶ್ರೀ ನೃತ್ಯಾಲಯದ ನಿರ್ದೇಶಕಿ ರಾಣಿ ಸತ್ಯಮೂರ್ತಿ ಮಾತನಾಡಿ,‘ಪಾಲಕರು ಗಂಡು ಹಾಗೂ ಹೆಣ್ಣು ಮಕ್ಕಳನ್ನು ಸಮಾನವಾಗಿ ಕಾಣಬೇಕು. ಶಿಕ್ಷಣ ಸೇರಿದಂತೆ ಎಲ್ಲ ಅವಕಾಶಗಳನ್ನು ನೀಡಿದ್ದಲ್ಲಿ ಮಾತ್ರ ಹೆಣ್ಣು ಮಕ್ಕಳೂ ಗಂಡು ಮಕ್ಕಳಷ್ಟೇ ಗಟ್ಟಿಯಾಗಿ ನೆಲೆಯೂರಲು ಸಾಧ್ಯವಿದೆ’ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಗಾಯಕಿ ರೇಖಾ ಅಪ್ಪಾರಾವ್ ಸೌದಿ ಮಾತನಾಡಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅರ್ಚನಾ ಚಂದ್ರಕಾಂತ ಕುಂಬಾರ, ಮಹಾದೇವಿ ವೀರಶೆಟ್ಟಿ ಪಾಟೀಲ, ಜಯಶ್ರೀ ಹಾಗೂ ಪ್ರಾಪ್ತಿ ಅರಳಿ ಅವರನ್ನು ಸನ್ಮಾನಿಸಲಾಯಿತು.

ನಾಟ್ಯಶ್ರೀ ನೃತ್ಯಾಲಯದ ರಾಜೇಶ್ವರಿ ಹಾಗೂ ತಂಡದವರು ಭರತನಾಟ್ಯ, ರಶ್ಮಿ ಮತ್ತು ತಂಡದವರು ಜಾನಪದ ನೃತ್ಯ, ಶೈಲಜಾ ದಿವಾಕರ ಮತ್ತು ತಂಡದವರು ತತ್ವಪದ ಗಾಯನ, ಭೂಮಿಕಾ, ವೈಷ್ಣವಿ ಸಮೂಹ ಗಾಯನ ಹಾಗೂ ಯುಕ್ತಿ ಅರಳಿ ಜಾನಪದ ಗೀತೆ ಪ್ರಸ್ತುತಪಡಿಸಿದರು.

ಪ್ರಾಧ್ಯಾಪಕ ವೀರಶೆಟ್ಟಿ ಮೈಲೂರಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ. ಸತ್ಯಮೂರ್ತಿ ಸ್ವಾಗತ ಕೋರಿದರು. ದೇವಿದಾಸ ಜೋಶಿ ಸಾಧಕರ ಪರಿಚಯ ಮಾಡಿಕೊಟ್ಟರು. ರಾಘವೇಂದ್ರ ಅಡಿಗ ನಿರೂಪಿಸಿದರು. ಉಮಾಕಾಂತ ಮೀಸೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT