ಸೋಮವಾರ, ಅಕ್ಟೋಬರ್ 19, 2020
25 °C
ಅರ್ಹ ವಂಚಿತರ ಸಮಸ್ಯೆ ಪರಿಹಾರಕ್ಕೆ ನೆರವಾಗಲು ಸಲಹೆ

ಬೀದರ್: 1.17 ಲಕ್ಷ ರೈತರಿಗೆ ಸಾಲ ಮನ್ನಾ ಲಾಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲೆಯ 1.17 ಲಕ್ಷ ರೈತರು ಸರ್ಕಾರದ ₹ 1 ಲಕ್ಷದವರೆಗಿನ ಸಾಲ ಮನ್ನಾ ಯೋಜನೆಯ ಲಾಭ ಪಡೆದಿದ್ದಾರೆ ಎಂದು ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಮಹಾಜನ್ ತಿಳಿಸಿದರು.

ನಗರದ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ರೈತರ ಸಾಲ ಮನ್ನಾ ಯೋಜನೆಗಳ ಕುರಿತು ಬ್ಯಾಂಕ್ ಅಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎರಡಕ್ಕಿಂತ ಹೆಚ್ಚು ಸಾಲಗಳಿಗೆ ಒಂದೇ ಆಧಾರ್ ಸಂಖ್ಯೆ ಜೋಡಣೆ, ಪಡಿತರ ಚೀಟಿ ಹೊಂದದ, ಒಂದೇ ಸದಸ್ಯತ್ವದ ಮೇಲೆ ಹಲವು ಸಾಲಗಳ ಮನ್ನಾ ಅರ್ಜಿ ಹೀಗೆ ಹಲವು ಕಾರಣಗಳಿಂದ ಜಿಲ್ಲೆಯ 8,671 ರೈತರು ಸಾಲ ಮನ್ನಾ ಯೋಜನೆಯಿಂದ ಹೊರಗುಳಿದಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಅವರನ್ನು ಭೇಟಿ ಮಾಡಿ, ಅರ್ಹ ಫಲಾನುಭವಿಗಳ ಸಮಸ್ಯೆ ಪರಿಹರಿಸಲು ಕಾರ್ಯ ಪ್ರವೃತ್ತರಾಗಬೇಕು ಎಂದು ಹೇಳಿದರು.

ಬ್ಯಾಂಕ್ ಸಿಬ್ಬಂದಿ ಧನಾತ್ಮಕ ಯೋಚನೆಯೊಂದಿಗೆ ವ್ಯವಹಾರ ವೃದ್ಧಿಗೆ ನೆರವಾಗಬೇಕು. ಹೊಸ ಕಲಿಕೆಯೊಂದಿಗೆ ಆಧುನಿಕ ಸ್ಪರ್ಧೆಗೆ ಹೊಂದಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಡಿಸಿಸಿ ಬ್ಯಾಂಕ್ ಆರ್ಥಿಕ ವಿಭಾಗದ ಪ್ರಧಾನ ವ್ಯವಸ್ಥಾಪಕ ವಿಠ್ಠಲರೆಡ್ಡಿ ಯಡಮಲ್ಲೆ ಅವರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಗೆ ಅನುಗುಣವಾಗಿ ಸನ್ನದ್ಧಗೊಳಿಸಬೇಕು ಎಂದು ಹೇಳಿದರು.
ಆಡಳಿತ ವಿಭಾಗದ ಪ್ರಧಾನ ವ್ಯವಸ್ಥಾಪಕ ಚನ್ನಬಸಯ್ಯ ಸ್ವಾಮಿ ಅವರು, ಬ್ಯಾಂಕ್ ಸಿಬ್ಬಂದಿ ಹೊಸ ಹೊಸ ತಂತ್ರಜ್ಞಾನಗಳ ಬಗ್ಗೆ ಅರಿತು ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಬೇಕು ಎಂದು ತಿಳಿಸಿದರು.

ಅಧಿಕಾರಿಗಳಾದ ಕರಿಬಸಯ್ಯ ಸ್ವಾಮಿ, ಶಾಂತಕುಮಾರ, ಮಲ್ಲಿಕಾರ್ಜುನ ಖಾಜಿ, ಶರಣಪ್ಪ ಉಪಸ್ಥಿತರಿದ್ದರು.
ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಉಪನ್ಯಾಸಕ ಎಸ್.ಜಿ. ಪಾಟೀಲ ನಿರೂಪಿಸಿದರು. ಅನಿಲ್ ಪಿ. ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು