ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ ಲೋಕಸಭಾ ಕ್ಷೇತ್ರ; ಕಾಂಗ್ರೆಸ್‌, ಬಿಜೆಪಿ ಭದ್ರಕೋಟೆ

Published 4 ಏಪ್ರಿಲ್ 2024, 0:09 IST
Last Updated 4 ಏಪ್ರಿಲ್ 2024, 0:09 IST
ಅಕ್ಷರ ಗಾತ್ರ

ಬೀದರ್‌: ಬೀದರ್‌ ಲೋಕಸಭಾ ಕ್ಷೇತ್ರದ ಮತದಾರರು ಆರಂಭದಿಂದಲೂ ಕಾಂಗ್ರೆಸ್‌, ಬಿಜೆಪಿ ಪಕ್ಷಗಳ ಅಭ್ಯರ್ಥಿಗಳನ್ನೇ ಬೆಂಬಲಿಸುತ್ತ ಬಂದಿದ್ದಾರೆ.

ಈ ಎರಡೇ ಪಕ್ಷಗಳತ್ತ ಮತದಾರರು ಒಲವು ತೋರುತ್ತ ಬಂದಿರುವುದರಿಂದ ಅನ್ಯ ಪಕ್ಷಗಳು ಇದುವರೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಒಂದು ಸಲವೂ ಗೆದ್ದಿಲ್ಲ.

ಒಂದು ಉಪಚುನಾವಣೆ ಸೇರಿದಂತೆ 18 ಚುನಾವಣೆಗಳಿಗೆ ಬೀದರ್‌ ಲೋಕಸಭಾ ಕ್ಷೇತ್ರ ಸಾಕ್ಷಿಯಾಗಿದೆ. ಇದರಲ್ಲಿ ಕಾಂಗ್ರೆಸ್‌ ಅತಿ ಹೆಚ್ಚು ಸಲ ಗೆದ್ದಿದೆ. ಕಾಂಗ್ರೆಸ್‌ ಪಕ್ಷವು ಒಂದು ಉಪಚುನಾವಣೆ ಸೇರಿದಂತೆ ಒಟ್ಟು 11 ಸಲದ ಚುನಾವಣೆಗಳಲ್ಲಿ ಜಯಭೇರಿ ಬಾರಿಸಿದೆ. ಇನ್ನು, ಬಿಜೆಪಿ 7 ಸಲ ಗೆದ್ದಿದೆ. ಅದರಲ್ಲೂ ಬಿಜೆಪಿಯ ಮಾಜಿ ಸಂಸದ ದಿವಂಗತ ರಾಮಚಂದ್ರ ವೀರಪ್ಪನವರು ಕಮಲ ಪಕ್ಷದಿಂದಲೇ ಐದು ಬಾರಿ ಜಯಿಸಿದ್ದು ವಿಶೇಷ. 1991, 1996, 1998, 1999 ಹಾಗೂ 2004ರಲ್ಲಿ ರಾಮಚಂದ್ರ ವೀರಪ್ಪನವರು ಬಿಜೆಪಿಯಿಂದ ಸ್ಪರ್ಧಿಸಿ ಲೋಕಸಭೆ ಪ್ರವೇಶಿಸಿದ್ದರು. ಇದಕ್ಕೂ ಮುನ್ನ ರಾಮಚಂದ್ರ ಅವರು, 1962, 1967ರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿ ಚುನಾಯಿತರಾಗಿದ್ದರು. ಅವರು ಒಟ್ಟು 7 ಸಲ ಗೆದ್ದಿದ್ದರು. 2004ರಲ್ಲಿ ಸಂಸದರಿರುವಾಗಲೇ ವಯೋ ಸಹಜ ಕಾಯಿಲೆಯಿಂದ ನಿಧನರಾಗಿದ್ದರು.

ಕಾಂಗ್ರೆಸ್‌ನಿಂದ ನರಸಿಂಗರಾವ್‌ ಸೂರ್ಯವಂಶಿ ಅವರು ನಾಲ್ಕು ಸಲ ಗೆದ್ದಿದ್ದರು. ಬೀದರ್‌ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿ ಹೋದವರಲ್ಲಿ ಸೂರ್ಯವಂಶಿ ಅವರಿಗೆ ರಾಮಚಂದ್ರ ವೀರಪ್ಪನವರ ನಂತರದ ಸ್ಥಾನ.

1980, 1984, 1989ರ ಸಾರ್ವತ್ರಿಕ ಚುನಾವಣೆ ಹಾಗೂ 2004ರಲ್ಲಿ ನಡೆದ ಉಪಚುನಾವಣೆಯಲ್ಲಿ ಸೂರ್ಯವಂಶಿ ಗೆಲುವು ಸಾಧಿಸಿದ್ದರು. 1952ರಿಂದ 1989ರ ವರೆಗೆ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಸತತವಾಗಿ ಕಾಂಗ್ರೆಸ್‌ ಗೆದ್ದದ್ದು ವಿಶೇಷ. ಅಭ್ಯರ್ಥಿಗಳು ಬದಲಾದರೂ ಕ್ಷೇತ್ರದ ಮತದಾರರು ಕಾಂಗ್ರೆಸ್‌ ಪಕ್ಷವನ್ನು ಬಿಟ್ಟುಕೊಡಲಿಲ್ಲ.

1952ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಶೌಕತ್‌ ಉಲ್ಲಾ ಅನ್ಸಾರಿ, 1957ರಲ್ಲಿ ನಡೆದ ಎರಡನೇ ಸಾರ್ವತ್ರಿಕ ಚುನಾವಣೆಯಲ್ಲಿ ಮಹದೇವಪ್ಪ ಯಶವಂತರಾವ್‌ ಜಯಿಸಿದ್ದರು. ಇನ್ನು, ರಾಮಚಂದ್ರ ವೀರಪ್ಪ, ನರಸಿಂಗರಾವ್‌ ಸೂರ್ಯವಂಶಿ ನಂತರ ಅತಿ ಹೆಚ್ಚು ಸಲ ಗೆದ್ದವರು ಶಂಕರದೇವ ಬಾಲಾಜಿರಾವ್‌, ಹಾಲಿ ಸಂಸದ ಭಗವಂತ ಖೂಬಾ ಅವರು. ಶಂಕರದೇವ ಬಾಲಾಜಿರಾವ್‌ 1971, 1977ರಲ್ಲಿ ಸತತ ಎರಡು ಸಲ ಗೆದ್ದಿದ್ದರು. ಇನ್ನು, ಬಿಜೆಪಿಯ ಭಗವಂತ ಖೂಬಾ ಅವರು 2014, 2019ರ ಚುನಾವಣೆಯಲ್ಲಿ ಗೆದ್ದಿದ್ದಾರೆ. ಈ ಸಲ ‘ಹ್ಯಾಟ್ರಿಕ್‌’ ಗೆಲುವಿನ ಭರವಸೆಯೊಂದಿಗೆ ಪುನಃ ಕಣಕ್ಕಿಳಿದಿದ್ದಾರೆ.

ಎನ್‌. ಧರ್ಮಸಿಂಗ್‌
ಎನ್‌. ಧರ್ಮಸಿಂಗ್‌

ಯಾವ ಪಕ್ಷಕ್ಕೆ ಎಷ್ಟು ಸಲ ಜಯ

18 ಸಲ ಚುನಾವಣೆ

11 ಸಲ ಕಾಂಗ್ರೆಸ್‌

07 ಸಲ ಬಿಜೆಪಿ

ಮಾಜಿ ಮುಖ್ಯಮಂತ್ರಿಗೆ ಸಿಹಿ ಕಹಿ

ಮಾಜಿ ಮುಖ್ಯಮಂತ್ರಿ ದಿವಂಗತ ಎನ್‌. ಧರ್ಮಸಿಂಗ್‌ ಅವರಿಗೆ ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಸಿಹಿ–ಕಹಿ ಅನುಭವವಾಗಿದೆ. 2009ರಲ್ಲಿ ಅವರು ಎದುರಿಸಿದ ಮೊದಲ ಚುನಾವಣೆಯಲ್ಲೇ ಬೀದರ್‌ ಲೋಕಸಭಾ ಕ್ಷೇತ್ರದಿಂದ ಗೆದ್ದು ಸಂಸದರಾಗಿದ್ದರು. ಆದರೆ ಎರಡನೇ ಬಾರಿಗೆ 2014ರ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಅಲೆಯಲ್ಲಿ ಸೋಲು ಕಂಡಿದ್ದರು. ಬಿಜೆಪಿಯ ಅಂದಿನ ಹೊಸ ಮುಖ ಭಗವಂತ ಖೂಬಾ ವಿರುದ್ಧ ಪರಾಭವಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT