ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

LS Polls 2024: ಬಿಜೆಪಿ ಶಾಸಕರ ಸಭೆಯಲ್ಲ; ಬಿಜೆಪಿ–ಜೆಡಿಎಸ್‌ ಸಮನ್ವಯ ಸಭೆ –ಅಶೋಕ

Published 24 ಮಾರ್ಚ್ 2024, 13:46 IST
Last Updated 24 ಮಾರ್ಚ್ 2024, 13:46 IST
ಅಕ್ಷರ ಗಾತ್ರ

ಬೀದರ್‌: ‘ಬೀದರ್‌ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವುದು ಬಿಜೆಪಿ ಶಾಸಕರ ಸಮನ್ವಯ ಸಮಿತಿ ಸಭೆಯಲ್ಲ. ಬಿಜೆಪಿ–ಜೆಡಿಎಸ್‌ ಪಕ್ಷಗಳ ಸಮನ್ವಯ ಸಮಿತಿ ಸಭೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಸ್ಪಷ್ಟನೆ ನೀಡಿದರು.

ನಗರದಲ್ಲಿ ಭಾನುವಾರ ಸಂಜೆ ಕರೆದ ಪತ್ರಿಕಾಗೋಷ್ಠಿಯಲ್ಲಿ, ‘ಬೀದರ್‌ ಲೋಕಸಭಾ ಕ್ಷೇತ್ರಕ್ಕೆ ಸಚಿವ ಭಗವಂತ ಖೂಬಾ ಅವರ ಹೆಸರು ಬಿಜೆಪಿ ಘೋಷಿಸಿದರೂ ಸ್ವಪಕ್ಷೀಯ ಶಾಸಕರ ಮುನಿಸು ಶಮನಗೊಂಡಿಲ್ಲವೇ? ಅವರ ಮುನಿಸು ಶಮನಗೊಳಿಸಲು ಸಮನ್ವಯ ಸಮಿತಿ ಸಭೆ ಕರೆದಿದ್ದೀರಾ?’ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.

ನಾನು ಬೀದರ್‌ ಜಿಲ್ಲೆಗೆ ಚುನಾವಣೆ ಪ್ರಚಾರಕ್ಕೆ ಬಂದಿರುವೆ. ಒಂದೊಂದು ಕ್ಷೇತ್ರದಲ್ಲಿ ಒಂದೊಂದು ರೀತಿಯ ಸಮಸ್ಯೆ ಇದೆ. ಬೀದರ್‌ನಲ್ಲಿ ನಮ್ಮ ಮಿತ್ರ ಪಕ್ಷ ಜೆಡಿಎಸ್‌ನೊಂದಿಗೆ ಸಮನ್ವಯ ಸಮಿತಿ ಸಭೆ ನಡೆಸಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದರು.

ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಭಗವಂತ ಖೂಬಾ ಅವರು ಉತ್ತಮ ಕೆಲಸ ಮಾಡಿದ್ದಾರೆ. ಅವರೊಬ್ಬ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ. ಅವರಿಗೆ ಮೂರನೇ ಸಲ ಪಕ್ಷ ಟಿಕೆಟ್‌ ನೀಡಿದೆ. ಎಲ್ಲರೂ ಅವರ ಗೆಲುವಿಗೆ ಶ್ರಮಿಸಲಿದ್ದಾರೆ. ಅನಾರೋಗ್ಯದಿಂದ ಔರಾದ್‌ ಶಾಸಕ ಪ್ರಭು ಚವಾಣ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಸವಕಲ್ಯಾಣ ಶಾಸಕ ಶರಣು ಸಲಗರ ಅವರು ಕೆಲಸದ ನಿಮಿತ್ತ ಬೇರೆ ಕಡೆ ಹೋಗಿದ್ದಾರೆ. ಅವರು ಖೂಬಾ ಪರ ಪ್ರಚಾರ ಕೈಗೊಳ್ಳುವರು ಎಂದು ಹೇಳಿದರು.

‘ಕಾಂಗ್ರೆಸ್‌ ಯೋಗ್ಯತೆಗೆ ಕಾರ್ಯಕರ್ತರು ಸಿಗಲಿಲ್ಲವೇ?’

ರಾಜ್ಯದ ಮಿಕ್ಕುಳಿದ ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರು ಸೋಮವಾರ (ಮಾ.25) ಘೋಷಿಸಲಿದೆ. ಆದರೆ, ಕಾಂಗ್ರೆಸ್‌ ಪಕ್ಷ ಇನ್ನೂ ಹಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಿಸಬೇಕಿದೆ. ರಾಜ್ಯದ ಎಲ್ಲಾ ಸಚಿವರಿಗೆ ‘ಟಾರ್ಗೆಟ್‌’ ಕೊಟ್ಟಿದ್ದಾರೆ. ಸೋತರೆ ಅವರ ಮಂತ್ರಿ ಸ್ಥಾನ ಹೋಗುತ್ತದೆ. ಒಬ್ಬ ಮಂತ್ರಿ ಕೂಡ ಚುನಾವಣೆಗೆ ಸ್ಪರ್ಧಿಸುವ ಧೈರ್ಯ ತೋರಿಲ್ಲ. ಬೀದರ್‌ನಿಂದ ಚಾಮರಾಜನಗರದ ವರೆಗೆ ಇದೇ ಪರಿಸ್ಥಿತಿ ಇದೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವ ಪಡೆಯದವರು, ಸಚಿವರ ಪತ್ನಿ, ಸಹೋದರ, ಭಾಮೈದ ಹೀಗೆ ಅವರ ಸಂಬಂಧಿಕರನ್ನು ಬೀದಿಗೆ ತಂದಿದ್ದಾರೆ. ಕಾಂಗ್ರೆಸ್‌ ಯೋಗ್ಯತೆಗೆ ಕಾರ್ಯಕರ್ತರು ಸಿಗಲಿಲ್ಲವೇ? ಎಲ್ಲೋ ಒಂದೆರೆಡು ಕ್ಷೇತ್ರಗಳಿಗೆ ಸಂಬಂಧಿಕರನ್ನು ನಿಲ್ಲಿಸಿದ್ದಾರೆ ಎಂದರೆ ಪರವಾಗಿಲ್ಲ ಎಂದು ಹೇಳಬಹುದಿತ್ತು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT