ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿವಾಳ ಮಾಚಿದೇವರ ತ್ಯಾಗ ಸ್ಮರಣೀಯ

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಹೇಳಿಕೆ
Last Updated 1 ಫೆಬ್ರುವರಿ 2019, 13:54 IST
ಅಕ್ಷರ ಗಾತ್ರ

ಬೀದರ್: ‘ವಚನಗಳ ಸಂರಕ್ಷಣೆಯಲ್ಲಿ ಮಡಿವಾಳ ಮಾಚಿದೇವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ತ್ಯಾಗ ಸ್ಮರಣೀಯ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಹೇಳಿದರು.

ನಗರದ ಜಿಲ್ಲಾ ರಂಗ ಮಂದಿರದಲ್ಲಿ ಶುಕ್ರವಾರ ಜಿಲ್ಲಾ ಆಡಳಿತದ ವತಿಯಿಂದ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಾನತೆ, ಜಾತಿಯತೆ ನಿರ್ಮೂಲನೆ, ಸ್ತ್ರೀ ಸ್ವಾತಂತ್ರ್ಯ ಹನ್ನೆರಡನೆಯ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ಮೂಲ ಉದ್ದೇಶವಾಗಿತ್ತು. ಅಂದಿನ ಸಾಮಾಜಿಕ ಕ್ರಾಂತಿಯಲ್ಲಿ ಮಡಿವಾಳ ಮಾಚಿದೇವರು ವಚನ ಗ್ರಂಥಗಳನ್ನು ಸಂರಕ್ಷಿಸುವ ಮೂಲಕ ಶರಣರ ಗೌರವಕ್ಕೆ ಪಾತ್ರರಾಗಿದ್ದರು’ ಎಂದರು.

‘ಮಾಚಿದೇವರು ಬಸವಾದಿ ಶರಣರ ಬಟ್ಟೆಯನ್ನು ತೊಳೆದು ಮಡಿ ಮಾಡುವ ಕಾಯಕದ ಜತೆಗೆ ಜನರ ಮನಸ್ಸಿನಲ್ಲಿರುವ ಕೊಳಕನ್ನು ಸಹ ತೊಳೆಯುವ ಕೆಲಸ ಮಾಡಿದ್ದರು’ ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಶಾಲಿನಿ ಚಿಂತಾಮಣಿ, ‘ಮಹಾಪುರುಷರ ಆದರ್ಶಗಳನ್ನು ಪಾಲಿಸುವುದು ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವಾಗಿದೆ’ ಎಂದು ತಿಳಿಸಿದರು.

ಕಲಬುರ್ಗಿಯ ಸಾಹಿತಿ ಎ.ಕೆ.ರಾಮೇಶ್ವರ ಮಾತನಾಡಿ, ‘ಮಡಿವಾಳ ಮಾಚಿದೇವರು ಹನ್ನೆರಡನೆಯ ಶತಮಾನದ ಶ್ರೇಷ್ಠ ವ್ಯಕ್ತಿ. ಬಸವಕಲ್ಯಾಣದ ತ್ರಿಪುರಾಂತ ಕೆರೆಗೆ ಬಂದಾಗ ಬಸವ ಸಮೂಹವನ್ನು ನೋಡಿದ್ದರು. ಅವರಿಂದ ಪ್ರಭಾವಿತರಾಗಿದ್ದರು’ ಎಂದು ಹೇಳಿದರು.

‘ರಾಜಕಾರಣಿಗಳು ಚುನಾವಣೆಯ ಸಂದರ್ಭದಲ್ಲಿ ಮಾತ್ರ ಮಡಿವಾಳ ಸಮಾಜಕ್ಕೆ ಹತ್ತಿರವಾಗುತ್ತಾರೆ. ಜಿಲ್ಲೆಯ ಮೂವರು ಸಚಿವರು ಬಿಡುವಿಲ್ಲದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಬಹುದು. ಆದರೆ ಸಚಿವರು ಪಾಲ್ಗೊಂಡಿದ್ದರೆ ಕಾರ್ಯಕ್ರಮ ಇನ್ನೂ ಅರ್ಥಪೂರ್ಣವಾಗುತ್ತಿತ್ತು’ ಎಂದರು.

ಮಡಿವಾಳ ಸಂಘದ ಜಿಲ್ಲಾ ಪ್ರಧಾನ ಗೌರವಾಧ್ಯಕ್ಷ ಬಾಬುರಾವ್ ಮಡಿವಾಳ, ಗೌರವಾಧ್ಯಕ್ಷ ದಿಗಂಬರ್ ಮಡಿವಾಳ, ಅಧ್ಯಕ್ಷ ಧನರಾಜ್ ಮಡಿವಾಳ, ಉಪಾಧ್ಯಕ್ಷ ಸುಭಾಷ ಮಡಿವಾಳ ಇದ್ದರು.

ಪ್ರತಿಭಾ ಮಡಿವಾಳ ಭರತನಾಟ್ಯ ಪ್ರದರ್ಶಿಸಿ ಸಭಿಕರ ಗಮನ ಸೆಳೆದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ ಸ್ವಾಗತಿಸಿದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಚೆನ್ನಬಸವ ಹೇಡೆ ನಿರೂಪಿಸಿದರು.

ಮಾಚಿದೇವರ ಜಯಂತಿ ಆಚರಣೆ:
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಮಡಿವಾಳ ಮಾಚಿದೇವರ ಜಯಂತಿ ಆಚರಿಸಲಾಯಿತು. ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ್ ಅವರು ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ನಗರಸಭೆ ಅಧ್ಯಕ್ಷೆ ಶಾಲಿನಿ ರಾಜು ಚಿಂತಾಮಣಿ, ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬೀದರ್‌ ಉಪ ವಿಭಾಗಾಧಿಕಾರಿ ಶಿವಕುಮಾರ ಶೀಲವಂತ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರ ಕುಮಾರ ಗಂದಗೆ ಇದ್ದರು.

ಮೆರವಣಿಗೆ:
ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಆರಂಭವಾದ ಮಡಿವಾಳ ಮಾಚಿದೇವರ ಭಾವಚಿತ್ರದ ಮೆರವಣಿಗೆಯು ಶಿವಾಜಿ ವೃತ್ತ, ಭಗತ್‌ಸಿಂಗ್ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಜನರಲ್ ಕಾರ್ಯಪ್ಪ ವೃತ್ತ, ಮಡಿವಾಳ ಮಾಚಿದೇವರ ವೃತ್ತದ ಮಾರ್ಗವಾಗಿ ಜಿಲ್ಲಾ ರಂಗಮಂದಿರಕ್ಕೆ ತೆರಳಿ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT