ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಮೂದ್‌ ಗವಾನ್‌ ಮದರಸಾ ಸ್ಮಾರಕ ಜೀರ್ಣೋದ್ಧಾರ

ದಕ್ಷಿಣ ಭಾರತದ ಮೊಟ್ಟ ಮೊದಲ ವಿಶ್ವವಿದ್ಯಾಲಯ
Last Updated 22 ಜೂನ್ 2018, 14:04 IST
ಅಕ್ಷರ ಗಾತ್ರ

ಬೀದರ್‌: ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು (ಎಎಸ್‌ಐ) ನಗರದಲ್ಲಿನ ದಕ್ಷಿಣ ಭಾರತದ ಮೊದಲ ವಿಶ್ವವಿದ್ಯಾಲಯ ಮಹಮೂದ್‌ ಗವಾನ್‌ ಮದರಸಾ ಕಟ್ಟಡವನ್ನು ಜೀರ್ಣೋದ್ಧಾರಗೊಳಿಸಿದೆ. ಮೇಲ್ಛಾವಣಿ ಹಾಗೂ ಗೊಮ್ಮಟ ಬಲಿಷ್ಠಗೊಂಡು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

14ನೇ ಶತಮಾನದಲ್ಲಿ ನಿರ್ಮಿಸಿದ ಕಟ್ಟಡದ ಮೇಲ್ಛಾವಣಿ ದುರ್ಬಲಗೊಂಡು ಮಳೆಗಾಲದಲ್ಲಿ ಸೋರಲು ಆರಂಭಿಸಿತ್ತು. ಎಎಸ್‌ಐ ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಿ ₹ 17 ಲಕ್ಷ ವೆಚ್ಚದಲ್ಲಿ ಗೊಮ್ಮಟಕ್ಕೆ ಗಚ್ಚಿನ ಲೇಪನ ಮಾಡಿಸಿದ್ದಾರೆ. ಗಚ್ಚಿನ ಹೊದಿಕೆಯನ್ನೂ ಹಾಕಿದ ನಂತರ ಕಟ್ಟಡ ಬೆಳಂದಿಗಳಲ್ಲೂ ಗತವೈಭವ ಮೆರೆಯುತ್ತಿದೆ.

10 ವರ್ಷಗಳ ಹಿಂದೆ ಪಾಳು ಬಿದ್ದಿದ್ದ ಸ್ಮಾರಕದ ಅಭಿವೃದ್ಧಿಗೆ ಅಂದಿನ ಜಿಲ್ಲಾಧಿಕಾರಿ ಹರ್ಷ ಗುಪ್ತ ಚಾಲನೆ ನೀಡಿದ್ದರು. ಸ್ಮಾರಕದ ಸುತ್ತ ತಡೆಗೋಡೆ ನಿರ್ಮಿಸಿ ಗ್ರಿಲ್‌ ಹಾಕುವ ಮೂಲಕ ಸ್ಮಾರಕಕ್ಕೆ ರಕ್ಷಣೆ ಒದಗಿಸಿದ್ದರು. ಈಗ ಕಟ್ಟಡ ಬಲಗೊಳಿಸಿರುವುದು ಇತಿಹಾಸ ಪ್ರೇಮಿಗಳಲ್ಲಿ ಸಂತಸ ತಂದಿದೆ.

‘ಹಂತ ಹಂತವಾಗಿ ಸ್ಮಾರಕಗಳ ಜೀರ್ಣೋದ್ಧಾರ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಸ್ಮಾರಕದ ಹಿಂದೆ ಆವರಣ ಗೋಡೆ ನಿರ್ಮಿಸುವ ಯೋಜನೆ ಇದೆ’ ಎಂದು ಎಎಸ್‌ಐ ಅಧಿಕಾರಿ ವಿನಾಯಕ ಶಿರಹಟ್ಟಿ ಹೇಳುತ್ತಾರೆ.

ಮೌರ್ಯರ ಕಾಲದಲ್ಲಿ ನಿರ್ಮಿಸಿದ ನಳಂದಾ ವಿಶ್ವವಿದ್ಯಾಲಯವು ದೇಶದ ಮೊದಲ ವಿಶ್ವವಿದ್ಯಾಲಯವಾಗಿದೆ. ಬಿಹಾರದ ರಾಜಧಾನಿ ಪಾಟ್ನಾದ ಆಗ್ನೇಯ ಭಾಗದಲ್ಲಿ ಇಂದಿಗೂ ಅದರ ಭಗ್ನಾವಶೇಷಗಳು ಇವೆ. ಇದು ಕ್ರಿ.ಶ 427 ರಿಂದ 1197ರವರೆಗೆ ಬುದ್ಧ ಪ್ರಣೀತ ತತ್ವಜ್ಞಾನದ ವ್ಯಾಸಂಗ ಕೇಂದ್ರವಾಗಿತ್ತು. ಚೈನಾ, ಗ್ರೀಸ್ ಮತ್ತು ಪರ್ಶಿಯಾದ ಪಂಡಿತರು ಇಲ್ಲಿಗೆ ಬರುತ್ತಿದ್ದರು. ಆದರೆ, ಪರಕೀಯರ ದಾಳಿಯಿಂದ ಅವನತಿ ಕಂಡಿತು.

275 ವರ್ಷಗಳ ನಂತರ ಬಹಮನಿ ಸುಲ್ತಾನರು ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ವಿಶ್ವವಿದ್ಯಾಲಯ ಆರಂಭಿಸಿದ್ದು ಗಮನಾರ್ಹ. ಈ ವಿಶ್ವವಿದ್ಯಾಲಯ ಆರಂಭವಾಗುವುದಕ್ಕೆ ಬಹಮನಿ ಸಾಮ್ರಾಜ್ಯದ ಪ್ರಧಾನಿ ಮಹಮೂದ್‌ ಗವಾನ್‌ ಮೂಲ ಕಾರಣ ಎಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ.

ಇರಾನ್‌ದ ಗಿಲಾನ್‌ ಮಹಮೂದ್‌ ಗವಾನ್‌ ವ್ಯಾಪಾರಕ್ಕೆಂದು ಭಾರತಕ್ಕೆ ಬಂದಿದ್ದ. ಸುಶಿಕ್ಷಿತನು, ಚತುರನೂ ಆಗಿದ್ದ ಗವಾನ್‌ನನ್ನು ಬಹಮನಿ ಸುಲ್ತಾನನಾಗಿದ್ದ ಅಲ್ಲಾವುದ್ದೀನ್‌ ತನ್ನ ಆಸ್ಥಾನದಲ್ಲಿ ಸೇವೆಗೆ ಸೇರಿಸಿಕೊಂಡಿದ್ದ. ನಂತರ ಆಳ್ವಿಕೆ ಮಾಡಿದ ಸುಲ್ತಾನ್‌ ಹುಮಾಯೂನ್‌ನು ಗವಾನ್‌ನ ಕಾರ್ಯಕ್ಷಮತೆ ಮೆಚ್ಚಿ ಮಲಿಕನಾಯಿಬ್ ಹುದ್ದೆಗೆ ಬಡ್ತಿ ನೀಡಿದ. ಬಹಮನಿ ಸುಲ್ತಾನ್‌ನ ಮೇಲೆ ದಂಡೆತ್ತಿ ಬಂದ ವೈರಿಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದ. ನಂತರ ಗವಾನ್‌ನು ದಂಡಯಾತ್ರೆ ಕೈಗೊಂಡು ಕೊಲ್ಹಾಪುರ ಸಮೀಪದ ಖೆಲ್ಲಾ ಕೋಟೆ, ಗೋವಾ, ಮಹೇಂದ್ರಿ, ಕೊಂಡವೀಡು ಪ್ರದೇಶ, ಬೆಳಗಾವಿ ದಂಗೆ ಕೋರರನ್ನೂ ಸದೆ ಬಡಿದು ತನ್ನ ಶಕ್ತಿ ಸಾಮರ್ಥ್ಯ ಪ್ರದರ್ಶಿಸಿದ್ದ. ನಂತರ ಪ್ರಧಾನಿ ಹುದ್ದೆಗೇರಿದ್ದ.

ಮಹಮೂದ್‌ ಗವಾನ್‌ ಆಡಳಿತದಲ್ಲಿ ಸುಧಾರಣೆ ತರಲು ಎಂಟು ವಿಭಾಗಗಳನ್ನು ಮಾಡಿದ್ದ. ಗಿಲಾನ್‌ನಲ್ಲಿ ಕ್ರಿ.ಶ.1411ರಲ್ಲಿ ಜನಿಸಿ ಅಲ್ಲಿಯೇ ಶಿಕ್ಷಣ ಪಡೆದಿದ್ದರಿಂದ ಶಿಕ್ಷಣದ ಮಹತ್ವ ಅವನಿಗೆ ತಿಳಿದಿತ್ತು. 1472ರಲ್ಲಿ ಮದರಸಾ ಎ–ಮಹಮೂದ್‌ ಗವಾನ್ ವಿಶ್ವವಿದ್ಯಾಲಯ ಕಟ್ಟಿಸಲು ಪರ್ಷಿಯಾದಿಂದ ಎಂಜಿನಿಯರ್‌ಗಳನ್ನು ಕರೆಸಿಕೊಂಡಿದ್ದ. ಅದು ಇಂದಿಗೂ ನಗರದಲ್ಲಿ ಇದೆ. ಇದಕ್ಕೆ ಎರಡು ಮಿನಾರ್‌ಗಳಿದ್ದವು. ಅದರಲ್ಲಿ ಒಂದು ಮಾತ್ರ ಉಳಿದಿದೆ. ಉಪನ್ಯಾಸ ಮಂದಿರ, ವಸತಿಗೃಹಗಳಿವೆ. ಮಳೆ ನೀರು ಸಂಗ್ರಹಕ್ಕೂ ಇಲ್ಲಿ ವ್ಯವಸ್ಥೆ ಮಾಡಲಾಗಿದೆ.

ಅರಬ್ಬಿ ಹಾಗೂ ಪರ್ಷಿಯನ್‌ ಪಂಡಿತರು ಇಲ್ಲಿ ಅರಬಿಕ್‌, ಉರ್ದು, ಪರ್ಷಿಯನ್ ಭಾಷೆಗಳು, ತರ್ಕಶಾಸ್ತ್ರ, ಗಣಿತ, ವೈದ್ಯಶಾಸ್ತ್ರ, ಭೌತವಿಜ್ಞಾನ ಹಾಗೂ ಭೂಗೋಳ ವಿಷಯಗಳನ್ನು ಬೋಧಿಸುತ್ತಿದ್ದರು. ಈ ವಿಶ್ವವಿದ್ಯಾಲಯವು ಮಹಮೂದ್ ಗವಾನ್ ಹೆಸರಿನಲ್ಲೇ ಗುರುತಿಸಿಕೊಂಡಿದೆ.

ಮಹಮೂದ್‌ ಗವಾನ್‌ ಮದರಸಾ ಪುರಾತನ ಸ್ಮಾರಕಕ್ಕೆ ಧ್ವನಿ ಬೆಳಕಿನ ವ್ಯವಸ್ಥೆ ಮಾಡಿ ಅದರ ವೈಭವವನ್ನು ಹೆಚ್ಚಿಸಬೇಕು. ಸ್ಮಾರಕ ಇನ್ನಷ್ಟು ಆಕರ್ಷಕವಾಗಿ ಕಾಣಬೇಕು.
- ಶಾಯದ್‌ ಅಲಿ,ಇತಿಹಾಸ ಪ್ರೇಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT