ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರತಿಕಾಂತ ಸ್ವಾಮಿ ಸಲಹೆ
Last Updated 26 ಮೇ 2022, 15:40 IST
ಅಕ್ಷರ ಗಾತ್ರ

ಬೀದರ್‌: ಯೋಗ, ಧ್ಯಾನ, ಪ್ರಾಣಾಯಾಮ ಹಾಗೂ ಸಕಾರಾತ್ಮಕ ಆಲೋಚನೆಗಳಿಗೆ ಒತ್ತು ಕೊಡುವ ಮೂಲಕ ಪ್ರತಿಯೊಬ್ಬರೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರತಿಕಾಂತ ಸ್ವಾಮಿ ಸಲಹೆ ನೀಡಿದರು

ನಗರದ ಕರ್ನಾಟಕ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಏರ್ಪಡಿಸಿದ್ದ ವಿಶ್ವ ಸ್ಕಿಜೋಫ್ರೆನಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬ ವ್ಯಕ್ತಿ ಒಂದಿಲ್ಲೊಂದು ರೀತಿಯ ಮಾನಸಿಕ ಕಾಯಿಲೆಗೆ ಒಳಗಾಗಿರುತ್ತಾನೆ. ಆದ್ದರಿಂದ ನೆಮ್ಮದಿಯ ಜೀವನ ನಡೆಸುವ ಮೂಲಕ ಕಾಯಿಲೆ ಬರದಂತೆ ನೋಡಿಕೊಳ್ಳಬೇಕು ಎಂದರು.

ಮನುಷ್ಯನಿಗೆ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯ ಕೂಡ ಅಷ್ಟೇ ಮುಖ್ಯವಾಗಿದೆ. ಮನೋರೋಗ ಲಕ್ಷಣಗಳು ಕಂಡು ಬಂದಲ್ಲಿ ಮನೋರೋಗ ಚಿಕಿತ್ಸಾ ವಿಭಾಗಕ್ಕೆ ಬಂದು ಚಿಕಿತ್ಸೆ ಪಡೆದು ಗುಣಮುಖರಾಗಬೇಕು ಎಂದು ಸಲಹೆ ನೀಡಿದರು.

ಪ್ರಾಚಾರ್ಯ ಬಸವರಾಜ ಬಲ್ಲೂರ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ತಮ್ಮ ಜೀವನದ ಗುರಿ ಮರೆತು ಟಿ.ವಿ, ಮೊಬೈಲ್‌ಗಳಿಗೆ ಮೊರೆ ಹೋಗಿ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಅಗತ್ಯಕ್ಕೆ ಅನುಗುಣವಾಗಿ ಅವುಗಳನ್ನು ಬಳಸಿಕೊಳ್ಳುವುದು ಒಳ್ಳೆಯದು ಎಂದರು.

ಬ್ರಿಮ್ಸ್‌ನ ಮನೋರೋಗ ತಜ್ಞ ಡಾ.ರಾಘವೇಂದ್ರ ವಾಘೋಲೆ ಮಾತನಾಡಿ, ವಿಶ್ವದಲ್ಲಿ 15 ರಿಂದ 30 ವಯಸ್ಸಿನವರಲ್ಲಿ ಸ್ಕಿಜೋಫ್ರೆನಿಯಾ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಭ್ರಮೆ, ಜಂಭ, ಆತಂಕ, ವಿಪರೀತ ವರ್ತನೆ ಇವು ಸ್ಕಿಜೋಫ್ರೆನಿಯಾ ಕಾಯಿಲೆಯ ಲಕ್ಷಣಗಳಾಗಿವೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಸುಂದರ ಬದುಕಿಗಾಗಿ ಉತ್ತಮ ವರ್ತನೆ ರೂಢಿಸಿಕೊಳ್ಳಬೇಕು. ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ವಿದ್ಯಾಭ್ಯಾಸದ ಪುನರ್ ಮನನ ಮಾಡಬೇಕು. ಮುಕ್ತ ಮನಸ್ಸಿನಿಂದ ಪಾಲಕರೊಂದಿಗೆ ಬೆರೆತುಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿ ಡಾ.ಕಿರಣ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು. ಕಾಲೇಜಿನಲ್ಲಿ ಏರ್ಪಡಿಸುವ ಭಾಷಣ, ನಿಬಂಧ, ರಸಪ್ರಶ್ನೆ, ಆಟೋಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಯಾವುದೇ ರೀತಿಯ ಖಿನ್ನತೆಗೆ ಒಳಗಾಗಬಾರದು. ಅಂತಹ ಲಕ್ಷಣಗಳು ಕಂಡು ಬಂದರೆ ನೇರವಾಗಿ ಮನೋರೋಗ ತಜ್ಞರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸ್ಕಿಜೋಫ್ರೆನಿಯಾ ಕಾಯಿಲೆ ಲಕ್ಷಣಗಳ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು. ಡಾ. ಅಮಲ್ ಷರೀಫ್, ಇಮಾನುವೆಲ್, ಗೋರಕನಾಥ, ಅಬ್ದುಲ್ ಹೈ, ಮಹ್ಮದ್ ಅಫ್ಜಲ್ ಅಳಂದಕರ್, ಶಾಮರಾವ್, ಸಂಗಮೇಶ, ಅಂಬಾದಾಸ, ಪರಶುರಾಮ, ಪ್ರಮೋದ ರಾಠೋಡ್, ಜ್ಯೋತಿ, ಭ್ರಮಾರಂಭಾದೇವಿ ಇದ್ದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೀರಶೆಟ್ಟಿ ಚನಶೆಟ್ಟಿ ಸ್ವಾಗತಿಸಿದರು. ಮನೋತಜ್ಞ ಡಾ.ಮಲ್ಲಿಕಾರ್ಜುನ ಗುಡ್ಡೆ ನಿರೂಪಿಸಿದರು. ಸೀಮಪ್ಪ ಸರಕುರೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT