ಮಂಗಳವಾರ, ಡಿಸೆಂಬರ್ 7, 2021
20 °C
ಬಸವ ಸೇವಾ ಪ್ರತಿಷ್ಠಾನದ ಗಂಗಾಂಬಿಕೆ ಅಕ್ಕ ಸಲಹೆ

ಮಹಿಳೆಯರೇ ಚೆನ್ನಮ್ಮ ಆದರ್ಶ ಮೈಗೂಡಿಸಿಕೊಳ್ಳಿ: ಗಂಗಾಂಬಿಕೆ ಅಕ್ಕ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಮಹಿಳೆಯರು ರಾಣಿ ಚೆನ್ನಮ್ಮ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು’ ಎಂದು ಬಸವ ಸೇವಾ ಪ್ರತಿಷ್ಠಾನದ ಗಂಗಾಂಬಿಕೆ ಅಕ್ಕ ಸಲಹೆ ಮಾಡಿದರು.

ಮೈಲೂರ್‌ ಕ್ರಾಸ್‌ ಚೆನ್ನಮ್ಮ ವೃತ್ತದಲ್ಲಿ ಶನಿವಾರ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯುತ್ಸವ
ಉದ್ಘಾಟಿಸಿ ಅವರು ಮಾತನಾಡಿದರು.

‘ಚೆನ್ನಮ್ಮ ತನ್ನ ಸ್ವತಂತ್ರ ರಾಜ್ಯದ ರಕ್ಷಣೆಗಾಗಿ ಬ್ರಿಟಿಷ್ ಸೈನ್ಯದ ವಿರುದ್ಧ ಹೋರಾಟ ನಡೆಸಿದ್ದರು. ದೇಶಭಕ್ತಿ, ಶೌರ್ಯ, ಸಾಹಸಕ್ಕೆ ಹೆಸರಾಗಿದ್ದರು. ಅವರ ಹೋರಾಟದಿಂದಾಗಿಯೇ ಕಿತ್ತೂರು ಇತಿಹಾಸದಲ್ಲಿ ಪ್ರಸಿದ್ಧಿ ಪಡೆದಿದೆ ಎಂದು ತಿಳಿಸಿದರು.

ರಾಣಿ ಕಿತ್ತೂರು ಚೆನ್ನಮ್ಮ ಜಯಂತ್ಯುತ್ಸವ ಸಮಿತಿಯ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ಬೀದರ್ ನಗರದಲ್ಲಿ ಇರುವ ರಾಣಿ ಚೆನ್ನಮ್ಮ ವೃತ್ತಕ್ಕೆ 45 ವರ್ಷಗಳ ಇತಿಹಾಸ ಇದೆ. ಸರ್ಕಾರ ಹಾಗೂ ಸಾರ್ವಜನಿಕರ ನೆರವಿನೊಂದಿಗೆ ಬರುವ ದಿನಗಳಲ್ಲಿ ವೃತ್ತದಲ್ಲಿ 21 ಅಡಿ ಎತ್ತರದ ಚೆನ್ನಮ್ಮ ಅವರ ಕಂಚಿನ ಪ್ರತಿಮೆ ಸ್ಥಾಪಿಸಲು ಯೋಜಿಸಲಾಗಿದೆ ಎಂದು ಹೇಳಿದರು.

ಚೆನ್ನಮ್ಮ ಅವರು ತಾಯ್ನಾಡಿಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಬ್ರಿಟಿಷ್ ಸೈನ್ಯವನ್ನು ಬಗ್ಗು ಬಡಿದಿದ್ದರು. ಅವರ ದೇಶ ಭಕ್ತಿ ಹಾಗೂ ಸಾಹಸ ಗಾಥೆಗಳನ್ನು ಇಂದಿನ ಪೀಳಿಗೆಗೆ ತಿಳಿಸಲು 8 ವರ್ಷಗಳಿಂದ ಜಯಂತ್ಯುತ್ಸವ ಆಚರಿಸುತ್ತ ಬರಲಾಗುತ್ತಿದೆ ಎಂದು ತಿಳಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗುರಮ್ಮ ಸಿದ್ದಾರೆಡ್ಡಿ (ಸಮಾಜ ಸೇವೆ), ಭಾನುಪ್ರಿಯಾ ಅರಳಿ (ಶಿಕ್ಷಣ ಮತ್ತು ಸಂಗೀತ), ವಿಜಯಲಕ್ಷ್ಮಿ ಕೌಟಗೆ (ಸಾಹಿತ್ಯ) ಹಾಗೂ ಕಮಲಾಬಾಯಿ ಹಡಪದ (ದಾಸೋಹ) ಅವರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಷ್ಠಾನದ ಅಧ್ಯಕ್ಷ ಶಿವಶರಣಪ್ಪ ವಾಲಿ, ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಸುರೇಶ ಚನಶೆಟ್ಟಿ, ನಗರಸಭೆ ಸದಸ್ಯರಾದ ಸಂತೋಷಿ ಅರುಣಕುಮಾರ, ಶಶಿಧರ ಹೊಸಳ್ಳಿ, ದಿಗಂಬರ್ ಮಡಿವಾಳ, ರಾಜೇಶ ಪಪ್ಪು, ಕುಶಾಲರಾವ್ ಪಾಟೀಲ, ವೀರಭದ್ರಪ್ಪ ಉಪ್ಪಿನ್, ಪ್ರೊ. ಎಸ್.ಬಿ. ಸಜ್ಜನಶೆಟ್ಟಿ, ಚಂದ್ರಶೇಖರ ತಾಂಡೂರೆ, ಪ್ರೊ. ದೇವೇಂದ್ರ ಕಮಲ್, ಹಾರೂರಗೇರಿ ಬಸವ ಸಮಿತಿಯ ಅಧ್ಯಕ್ಷ ಬಸವರಾಜ ಪಾಟೀಲ, ವಿದ್ಯಾನಗರ ಬಡಾವಣೆಯ ಚಂದ್ರಶೇಖರ ಪೊಲೀಸ್, ಶ್ರೀಕಾಂತ, ಬಸವನಗರ ವಿಕಾಸ ಸಮಿತಿಯ ಅಧ್ಯಕ್ಷ ಶರಣಪ್ಪ ಹೋತಪೇಟ, ಬಲಭೀಮ ಬೆಟ್ಟದ, ರಮೇಶ ಭಾಲ್ಕೆ, ಕಲಾವತಿ ಪಾಟೀಲ, ಅಕ್ಕ ಮಹಾದೇವಿ ಮಹಿಳಾ ಮಂಡಳ ಅಧ್ಯಕ್ಷೆ ರತ್ನಾ ಪಾಟೀಲ ಉಪಸ್ಥಿತರಿದ್ದರು.
ರೇಣುಕಾ ಹಳ್ಳಿ ನಿರೂಪಿಸಿದರು. ಶರಣಯ್ಯ ಸ್ವಾಮಿ ವಂದಿಸಿದರು.

ರಾಣಿ ಚೆನ್ನಮ್ಮ ಭಾವಚಿತ್ರದ ಮೆರವಣಿಗೆ

ರಾಣಿ ಕಿತ್ತೂರು ಚೆನ್ನಮ್ಮ ಜಯಂತ್ಯುತ್ಸವ ಪ್ರಯುಕ್ತ ನಗರದಲ್ಲಿ ಶನಿವಾರ ಅಲಂಕೃತ ವಾಹನದಲ್ಲಿ ಚೆನ್ನಮ್ಮ ಭಾವಚಿತ್ರದ ಮೆರವಣಿಗೆ ನಡೆಯಿತು.

ಬಸವನಗರ ವಿಕಾಸ ಸಮಿತಿ, ವಿದ್ಯಾನಗರ ನಾಗರಿಕರ ಸಮಿತಿ ಹಾಗೂ ಹಾರೂರಗೇರಿಯ ಬಸವ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮೆರವಣಿಗೆಗೆ ಬಸವನಗರದ ಬಸವೇಶ್ವರ ದೇವಸ್ಥಾನ ಬಳಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಮಾಸಿಮಾಡೆ ಹಾಗೂ ಸುರೇಶ ಚನಶೆಟ್ಟಿ ಜಂಟಿಯಾಗಿ ಚಾಲನೆ ನೀಡಿದರು.
ಅಲ್ಲಿಂದ ಆರಂಭವಾದ ಮೆರವಣಿಗೆಯು ಕಾಳಿದಾಸನಗರ, ರಾಮಚೌಕ್ ಮಾರ್ಗವಾಗಿ ಸಾಗಿ ಚೆನ್ನಮ್ಮ ವೃತ್ತಕ್ಕೆ ಬಂದು ಸಮಾರೋಪಗೊಂಡಿತು.

ಮೆರವಣಿಗೆಯಲ್ಲಿ ರಾಣಿ ಚೆನ್ನಮ್ಮ ವೇಷ ಧರಿಸಿ, ಕೈಯಲ್ಲಿ ಖಡ್ಗ ಹಿಡಿದು ಕುದುರೆ ಮೇಲೆ ಕುಳಿತಿದ್ದ ಮಹಿಳೆ, ರಾಣಿ ಚೆನ್ನಮ್ಮ, ಒನಕೆ ಓಬವ್ವ ಹಾಗೂ ಝಾನ್ಸಿ ರಾಣಿ ಲಕ್ಷ್ಮೀಬಾಯಿ ವೇಷ ತೊಟ್ಟಿದ್ದ ಚಿಣ್ಣರು ಗಮನ ಸೆಳೆದರು. ಮೆರವಣಿಗೆ ಉದ್ದಕ್ಕೂ ರಾಣಿ ಚೆನ್ನಮ್ಮ ಅವರಿಗೆ ಜಯವಾಗಲಿ ಎನ್ನುವ ಘೋಷಣೆಗಳು ಮೊಳಗಿದವು.

ಮಹಿಳೆಯರು, ಮಕ್ಕಳು ಹಾಗೂ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಮೆರವಣಿಗೆಯ ಮೆರುಗು ಹೆಚ್ಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.