ಮಂಗಳವಾರ, ಆಗಸ್ಟ್ 3, 2021
26 °C
ಬಸವಕಲ್ಯಾಣ, ಹುಲಸೂರ ತಾಲ್ಲೂಕುಗಳಲ್ಲಿ ದ್ವಿಶತಕದತ್ತ ಸೋಂಕಿತರ ಸಂಖ್ಯೆ

ಅಕ್ಷತೆ ಬಳಿಕ ಆಸ್ಪತ್ರೆ ಸೇರಿದ ಮದುಮಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವ ಕಲ್ಯಾಣ: ಕೋವಿಡ್ ಸೋಂಕು ದೃಢಪಟ್ಟಿದ್ದರಿಂದ ಹುಲಸೂರ ತಾಲ್ಲೂಕಿನ ಬೇಲೂರ ಗ್ರಾಮದ 23 ವರ್ಷದ ಯುವಕನನ್ನು ಸೋಮವಾರ ಮದುವೆಯಾದ ಕೆಲವೇ ಗಂಟೆಗಳಲ್ಲಿ ಕೋವಿಡ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.

ಮಹಾರಾಷ್ಟ್ರದ ಪುಣೆಯಿಂದ ಬಂದಿದ್ದ ಈ ಯುವಕನನ್ನು ಇಲ್ಲಿನ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಕ್ವಾರಂಟೈನ್ ಅವಧಿ ಪೂರ್ಣಗೊಂಡಿದ್ದರಿಂದ ಮೇ 30ರಂದು ಮನೆಗೆ ಕಳುಹಿಸಲಾಗಿತ್ತು. ಈ ಅವಧಿಯಲ್ಲಿ ಮದುವೆ ನಿಶ್ಚಯವಾಗಿ ಜೂನ್ 15 ರಂದು ಬೆಳಿಗ್ಗೆ ಭಾಲ್ಕಿ ತಾಲ್ಲೂಕಿನ ಕೋನಮೇಳಕುಂದಾದಲ್ಲಿ ಮದುವೆಯೂ ನೆರವೇರಿತು.

ಮದುವೆ ಕಾರ್ಯ ಮುಗಿಸಿಕೊಂಡು ಸಂಜೆ ಊರಿಗೆ ಬರುವಷ್ಟರಲ್ಲಿ, ಆ ಯುವಕನಿಗೆ ಕೋವಿಡ್‌–19 ಸೋಂಕು ತಗುಲಿರುವುದು ದೃಢಪಟ್ಟ ವರದಿ ಬಂದಿದೆ ಮತ್ತು ಆತನನ್ನು ಆಸ್ಪತ್ರೆಗೆ ಕರೆದೊಯ್ಯಲು ಅಧಿಕಾರಿಗಳು ಮತ್ತು ವೈದ್ಯರು ಮನೆ ಎದುರಲ್ಲಿ ಬಂದು ನಿಂತಿದ್ದರು. ಈ ಸಂದರ್ಭದಲ್ಲಿ ಕೆಲವರು ವಿರೋಧ ವ್ಯಕ್ತಪಡಿಸಿದರಾದರೂ ತಹಶೀಲ್ದಾರ್ ಸಾವಿತ್ರಿ ಸಲಗರ ಹಾಗೂ ಹುಲಸೂರ ಠಾಣೆ ಸಬ್‌ಇನ್‌ಸ್ಪೆಕ್ಟರ್‌ ಗೌತಮ್‌ ಅವರು ಮನವೊಲಿಸಿ ನವ ವಿವಾಹಿತನನ್ನು ಆಸ್ಪತ್ರೆಗೆ ಕಳಿಸಿಕೊಟ್ಟರು.

ದ್ವಿಶತಕ: ತಾಲ್ಲೂಕಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಪ್ರತಿದಿನ ಹೆಚ್ಚುತ್ತಿದೆ. ದ್ವಿಶತಕದತ್ತ ಸಾಗಿದೆ. ಗ್ರಾಮೀಣ ಭಾಗದಲ್ಲಿ ಸೋಂಕಿತರ ಸಂಖ್ಯೆ ನೂರು ದಾಟಿದಾಗ ಪಟ್ಟಣದಲ್ಲಿಯೂ ಕೆಲವರಲ್ಲಿ ಸೋಂಕು ಕಾಣಿಸಿಕೊಂಡಿತು. ಬಸವಕಲ್ಯಾಣದ ಹೊಸಪೇಟೆ ಓಣಿ, ಸೀತಾ ಕಾಲೊನಿ, ಕೈಕಾಡಿ ಗಲ್ಲಿ, ವಡ್ಡರಗಲ್ಲಿಗಳಲ್ಲಿ 6 ಜನ ಸೋಂಕಿತರು ಪತ್ತೆಯಾದರು. ಈಚೆಗೆ ಉಮಾಪುರದಲ್ಲಿ ಮೂವರು, ಹೊನ್ನಳ್ಳಿಯಲ್ಲಿ ಇಬ್ಬರು, ತಡೋಳಾ ಹಾಗೂ ಸಸ್ತಾಪುರದಲ್ಲಿ ತಲಾ ಒಬ್ಬ ಸೋಂಕಿತರು ಪತ್ತೆಯಾದರು. ಇದಕ್ಕೂ ಮೊದಲು ಒಂದೇ ದಿನ 42 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಸೋಂಕಿತರ ಸಂಖ್ಯೆ 185 ಕ್ಕೆ ಏರಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜ್ವರ, ನೆಗಡಿ, ಕೆಮ್ಮಿನಿಂದ ಬಳಲುತ್ತಿರುವ ಕೋವಿಡ್ ಶಂಕಿತರನ್ನು ಕೂಡ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿದೆ ಎಂದು ತಿಳಿದುಬಂದಿದೆ.

ಕಂಟೇನ್ಮೆಂಟ್: ಕೋವಿಡ್ ಸೋಂಕಿತರು ಪತ್ತೆಯಾಗಿರುವ ಊರುಗಳಲ್ಲಿ ಕಂಟೇನ್ಮೆಂಟ್‌ ಝೋನ್‌ಗಳನ್ನು ಗುರುತಿಸಲಾಗಿದೆ.  ಬಸವಕಲ್ಯಾಣ ಮತ್ತು ಹುಲಸೂರ ತಾಲ್ಲೂಕುಗಳ ಧನ್ನೂರ (ಕೆ), ಕೊಹಿನೂರ, ಉಜಳಂಬ, ಬಟಗೇರಾ, ಗದ್ಲೇಗಾಂವ, ಶಿರಗೂರ, ಕಿಟ್ಟಾ, ಮಂಠಾಳ, ರಾಜೇಶ್ವರ, ಹತ್ಯಾಳ, ರಾಜೋಳಾ, ಮಿರಖಲ್, ದೇವಿತಾಂಡಾ, ಮೋರಖಂಡಿ, ಘೋಟಾಳ, ಜಾನಾಪುರ, ಕೊಹಿನೂರ ಪಹಾಡ, ಘಾಟಹಿಪ್ಪರ್ಗಾ ತಾಂಡಾ, ಜನವಾಡಾ, ಧಾಮೂರಿ ಹಾಗೂ ಲಾಡವಂತಿ ಗ್ರಾಮಗಳಲ್ಲಿ ಕಂಟೇನ್ಮೆಂಟ್‌ ಝೋನ್‌ಗಳನ್ನು ಗುರುತಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.